Saturday, 7th September 2024

ಹೋರಾಟಗಾರರಿಂದ ಸ್ವಾತಂತ್ರ‍್ಯ, ಸೈನಿಕರಿಂದ ಸ್ವಾತಂತ್ರ‍್ಯದ ಉಳಿವು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 59

‘ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿ ಸೈನಿಕರ ಸಾಹಸಗಾಥೆಗಳನ್ನು ಹೇಳಿದ ಕರ್ನಲ್ ದಿನೇಶ್ ಮುದ್ರಿ

ಬೆಂಗಳೂರು: ಅಂದು ಸ್ವಾಂತ್ರಕ್ಕಾಗಿ ಹೋರಾಟ ನಡೆಸಿದವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಇಂದು ಯೋಧರು ಆ ಸ್ವಾತಂತ್ರ್ಯದ ರಕ್ಷಣೆ ಮಾಡು ತ್ತಿದ್ದಾರೆ. ಇಡೀ ದೇಶವೇ ಸೈನಿಕರ ಋಣದಲ್ಲಿದೆ ಎಂದು ಕರ್ನಲ್ ದಿನೇಶ್ ಮುದ್ರಿ ಅಭಿಪ್ರಾಯಪಟ್ಟರು.

ವಿಶ್ವವಾಣಿ ಕ್ಲಬ್‌ಹೌಸ್ ಹಮ್ಮಿಕೊಂಡಿದ್ದ ‘ಸ್ವಾಂತಂತ್ರ್ಯ ಮತ್ತು ಭವಿಷ್ಯದ ಭಾರತ: ದೇಶಭಕ್ತಿ‘ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸೈನಿಕರ ತ್ಯಾಗ ಮತ್ತು ಬಲಿದಾನದ ಬಗ್ಗೆ ಅನೇಕ ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟರು. ಜಸ್ವಂತ್ ಸಿಂಗ್ ಒಬ್ಬರೇ ಎರಡು ದಿನ ಪೂರ್ತಿ ಚೀನಾ ಸೈನಿಕ ರನ್ನು ತಡೆದು ನಿಲ್ಲಿಸಿದ್ದ, ಇಡೀ ಬೆಟಾಲಿಯನ್ ಇದೆ ಎಂದುಕೊಂಡು ಚೀನಾ ಸೈನಿಕರು ಕಂಗಾಲಾಗಿದ್ದರು.

ನಂತರ ಪರ್ವತದ ಮೇಲೆ ಬಂದು ನೋಡಿದಾಗ ಒಬ್ಬನೇ ಇಡೀ ಸೈನ್ಯವನ್ನು ತಡೆದು ನಿಲ್ಲಿಸಿದ್ದ. ಅದನ್ನು ಕಂಡ ಚೀನಾ ಸೈನಿಕರು ಆತನನ್ನು ಕೊಂದು ಆತನ ರುಂಡವನ್ನು ಚೀನಾಗೆ ತೆಗೆದುಕೊಂಡು ಹೋಗಿದ್ದರು. ನಂತರ ಆತನ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರುಂಡವನ್ನು ವಾಪಸ್ ಭಾರತಕ್ಕೆ ನೀಡಿದ್ದರು. ಭಾರತದ ಸೈನಿಕನ ಶೌರ್ಯ ಮತ್ತು ಬಲಿದಾನ ಎಂತಹದ್ದು ಎಂಬುದನ್ನು ಇಂತಹ ಅನೇಕ ಘಟನೆಗಳು ವಿವರಿಸುತ್ತವೆ ಎಂದರು.

ಕ್ಯಾಪ್ಟನ್ ಎಂ.ಎನ್.ಮುಲ್ಲಾ ಎಂಬ ಸೈನಿಕ 1971 ರ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧ ದಲ್ಲಿ ಭಾಗವಹಿಸಿದ್ದರು. ಯುದ್ಧದ 2ನೇ ವಾರದಲ್ಲಿ ದಿಯೂ, ದಮನ್‌ನಲ್ಲಿ ನೇವಿ ಆಫೀಸರ್ ಆಗಿ ಕಾರ್ಯ ನಿರ್ವಹಿಸು ತ್ತಿದ್ದ ಅವರು, ಹಡಗು ಮುಳುಗುವ ಸ್ಥಿತಿಗೆ ಬಂದಾಗ ಅದರಲ್ಲಿದ್ದ 167 ಜನರಿಗೆ ಲೈಫ್ ಜಾಕೆಟ್ ಕೊಟ್ಟು ಹೊರಗೆ ಕಳುಹಿಸಿ ಅನಂತರ ಅವರು ಹಡಿಗಿನಲ್ಲೇ ಉಳಿದಿದ್ದರು. ಅನಂತರ ಆ ಶಿಫ್ಟ್ ಮುಳುಗಿತ್ತು. ಇಂತಹ ಸಾವಿರಾರು ಸೈನಿಕರು ತಮ್ಮ ಬಲಿ ದಾನದಿಂದ ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದಾರೆ. 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಯೋಧರು, 1947ರವರೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರಾಣ ನೀಡಿ ಸ್ವಾತಂತ್ರ್ಯ ತಂದುಕೊಟ್ಟರೆ, ದೇಶದ ಯೋಧರು ಆ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಗಿಲ್‌ನಲ್ಲಿ ಯುದ್ದ ಮಾಡುವುದಿರಲಿ, ಅದನ್ನು ನೀವು ನೋಡಿದರೂ ಸಾಕು ತಲೆ ಚಕ್ಕರ್ ಬರುತ್ತದೆ. ರಾತ್ರಿ ಮಾತ್ರವೇ ಬೆಟ್ಟ ಮೇಲೆ ಹತ್ತಬಹುದು. ಅಂತಹ ಸಂದರ್ಭದಲ್ಲಿ ವಿಕ್ರಂ ಬಾತ್ರಾ, ನಾನು ಬೆಟ್ಟದ ಮೇಲೆ ಹೋಗಿ ರಾಷ್ಟ್ರಧ್ವಜ ಮೇಲೆ ಹಾರಿಸಿ ಬರುತ್ತೇನೆ. ಇಲ್ಲವಾದಲ್ಲಿ ರಾಷ್ಟ್ರಧ್ವಜವನ್ನು ಹೊದ್ದು ವಾಪಸ್ ಬರುತ್ತೇನೆ ಎಂದು ಶಪಥ ಮಾಡಿ ಹೋಗಿದ್ದರು. ಅವರು ಹೇಳಿದ ಮಾತಿನಂತೆಯೇ ಬೆಟ್ಟದ ಮೇಲಿದ್ದ ಪಾಕಿಸ್ತಾನದ ಕ್ಯಾಂಪ್ ಮೇಲೆ ದಾಳಿ ನಡೆಸಿ ಗೆದ್ದು ಬಂದರು. ನಂತರ ಆತ ಕ್ಯಾಪ್ಟನ್ ವಿಕ್ರಂ ಬಾತ್ರಾ ಆಗ್ತಾರೆ.

ಬರ್ಖಾ ದತ್ ಅವರು ಮಾಡಿದ ಇಂಟರ್‌ವ್ಯೂನಲ್ಲಿ ಆಗ ನಿಮಗೆ ಯಾವ ಫೀಲ್ ಆಗಿತ್ತು ಎಂದು ಕೇಳಿದ ಪ್ರಶ್ನೆಗೆ ಆತ ಕೊಟ್ಟಿದ್ದ ಉತ್ತರ. ‘ದಿಲ್ ಮಾಂಗೆ ಮೋರ್’ ಎಂಬುದಾಗಿತ್ತು. ವಾಪಸ್ ಹೋದಾಗ ಅವರು ಅನಿರೀಕ್ಷಿತವಾಗಿ ಪಾಕಿಸ್ತಾನದ ದಾಳಿಗೆ ಸಾವನ್ನಪ್ಪುತ್ತಾರೆ. ಸೈನಿಕನಾದವನಿಗೆ ತನ್ನ ಸೇವೆಯಲ್ಲಿ ಇಂತಹ ಖುಷಿ ಇರುತ್ತದೆ ಎಂದು ಕ್ಯಾಪ್ಟನ್ ದಿನೇಶ್ ಮುದ್ರಿ ಹೇಳಿದರು.

ಒಳಗಿನ ಶತ್ರುಗಳೇ ಅಧಿಕ: ಪ್ರಸ್ತುತ ದೇಶದಲ್ಲಿ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚಾಗಿದ್ದಾರೆ. ದೇಶ, ದೇಶಭಕ್ತಿ ಎಂಬುದು ನೆಗೋಷಿಬಲ್ ಆಗಿರುವಂತಹದ್ದಲ್ಲ. ದೇಶಭಕ್ತಿಯ ವಿಚಾರದಲ್ಲಿ ದೇಶದ ಎಲ್ಲ ಜನರದ್ದು ಒಂದೇ ಭಾವನೆ ಇರಬೇಕು. ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ, ಸೇನೆಯ ವಿಚಾರದಲ್ಲಿ ಇಡೀ ದೇಶ ಒಂದಾಗಿ ನಿಂತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಭಾರತೀಯ ಸೇನೆಗೆ 300 ವರ್ಷದ ಇತಿಹಾಸವಿದೆ. ಇದನ್ನು 30 ನಿಮಿಷದಲ್ಲಿ ಹೇಳಲು ಸಾಧ್ಯವಿಲ್ಲ. ದೇಶಪ್ರೇಮದ ಬಗ್ಗೆ ಮಾತನಾಡಿದರೆ, ಮಾತನಾಡುವವರಿಗೆ ಮತ್ತು ಕೇಳುಗರಿಗೆ ಇಬ್ಬರಿಗೂ ರೋಮಾಂಚನವಾಗುತ್ತದೆ.

ಮಿಲಿಟರಿ ಸೇವೆ ಕಡ್ಡಾಯವಾಗಲಿ: ಪ್ರತಿಯೊಬ್ಬರಿಗೂ 3 ವರ್ಷ ಮಿಲಿಟರಿ ಸೇವೆ ಕಡ್ಡಾಯ ಮಾಡಬೇಕಿದೆ. ಪೆನ್ಷನ್ ಕೊಡುವುದು ತಪ್ಪುತ್ತದೆ. ಯಾವ ಸರಕಾರವೂ ಇಂತಹ ವಿಚಾರದಲ್ಲಿ ಬೋಲ್ಡ್ ಸ್ಟೆಪ್ ತೆಗೆದುಕೊಳ್ಳುತ್ತಿಲ್ಲ. ಆಳುವ ಸರಕಾರಗಳು ಯಾವುದೇ ಪಕ್ಷದ ಸರಕಾರಗಳಿರಲಿ, ಇಂತಹದ್ದೊಂದು ನಿರ್ಧಾರ ತೆಗೆದು ಕೊಳ್ಳಬೇಕಾದ ಅನಿವಾರ್ಯತೆ ದೇಶದಲ್ಲಿದೆ. ಆಗ ಮಾತ್ರ ದೇಶದಲ್ಲಿ ಇಸ್ರೇಲ್ ಮತ್ತಿತರ ದೇಶಗಳಂತೆ ಎಲ್ಲವೂ ಮಿಲಿಟರಿ ಸೇವೆ ನಿರ್ವಹಣೆ ಮಾಡುವ ಕ್ಷಣಗಳನ್ನು ಕಾಣಬಹುದು ಎಂದು ಕರ್ನಲ್ ಗೋಪಿನಾಥ್ ತಿಳಿಸಿದರು.

ಸೇನೆಗೆ ಸೇರುವವರ ಸಂಖ್ಯೆ ಕಡಿಮೆ

ದೇಶದಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಿದೆ. ಇತ್ತೀಚೆಗಂತೂ ಶೇ.೫ರಿಂದ ಶೇ. 4.3ಕ್ಕೆ ಇಳಿದಿದೆ. ಎಲ್ಲರೂ ಫಾರಿನ್‌ಗೆ ಹೋಗಲು ಮುಂದಾಗುತ್ತಾರೆ. ಬಹುಜನರು ಸೇನೆಗೆ ಸೇರುವುದೆಂದರೆ ಹಿಂದೆ ಬೀಳುತ್ತಾರೆ. ಅಪಾಯವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ಸಿಯಾಚಿನ್‌ನ 17 ಕಿ.ಮೀ ಅಗಲ ಜಾಗಕ್ಕಾಗಿ ಯುದ್ಧ ನಡೆಯಿತು. ಕರಾಚಿ ಒಪ್ಪಂದದಲ್ಲಿ ಆದ ತಪ್ಪಿನಿಂದ ಇದು ಜರುಗಿತು.

ಸಿಯಾಚಿನ್ ಪ್ರದೇಶದಲ್ಲಿ ಹಿಮವನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಬಿಸಿ ಮಾಡಿ ನೀರು ಮಾಡಬೇಕು. ಎಷ್ಟು ಚಳಿ ಇರುತ್ತದೆ ಎಂದರೆ ಬಂದೂಕಿನ ಟ್ರಿಗರ್ ಒತ್ತಲು
ಬೆರಳು ಕೆಲಸ ಮಾಡುತ್ತಿರಲಿಲ್ಲ. ಈಗ ಮಿಲಿಟರಿ ವ್ಯವಸ್ಥೆ ಬಹಳ ಬದಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ರಾಜಕೀಯ ಮೀರಿ ಎಲ್ಲ ಸರಕಾರಗಳು ಸೇನೆಗೆ ಮಹತ್ವ ನೀಡಿವೆ. ಹೀಗಾಗಿ, ಭಾರತೀಯ ಸೇನೆ ಈಗ ಬಲಿಷ್ಠವಾಗಿದೆ. ಆತ್ಯಾಧುನಿಕ ತಂತ್ರಜ್ಞಾನ, ಆಯುಧಗಳು ಬಂದಿವೆ ಎಂದು ಕರ್ನಲ್ ಗೋಪಿನಾಥ್ ತಿಳಿಸಿದರು.

೭೫ ಮಹೋನ್ನತ ವಿಚಾರಧಾರೆ
೭೫ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಾವು ಹೆಮ್ಮ ಪಟ್ಟುಕೊಳ್ಳುವ 75 ಅಂಶಗಳ ಬಗ್ಗೆ ಚೇತನ್ ಅವರು ಸುದೀರ್ಘ ಮಾಹಿತಿ ನೀಡಿದರು. ಉಳಿದ ಎಲ್ಲ ಪುರಾತನ ನಾಗರಿಕತೆ ನಶಿಸಿದ್ದರೂ, ಸಿಂಧು ನಾಗರಿಕತೆ ಉಳಿದಿದೆ. ಗಾಂಧಿಯಂತಹ ಶ್ರೇಷ್ಠ ಸಂತನ ನಾಡು. ಮಹಾನ್ ಶ್ರೇಷ್ಠ ಸಂವಿಧಾನವನ್ನು ಜಾರಿಗೊಳಿಸಿರುವುದು, ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದಿರುವುದು, ಕೃಷಿಯನ್ನು ಉನ್ನತಿಯೆಡೆಗೆ ತೆಗೆದುಕೊಂಡು ಹೋಗುತ್ತಿರುವುದು, ಸೇನೆ, ರಕ್ಷಣೆಯ ವಿಚಾರದಲ್ಲಿ ಮುನ್ನೆಲೆಗೆ ಬರುತ್ತಿರುವುದು, 19500 ಭಾಷೆಗಳಿದ್ದರೂ, ಏಕತೆಯನ್ನು ಕಾಪಾಡಿಕೊಂಡು ಹೋಗುತ್ತಿರುವುದು ಬಾಹ್ಯಾಕಾಶ ಯೋಜನೆ ಗಳು ಮೊದಲಾಗಿ 75 ಮಹತ್ವದ ಅಂಶಗಳನ್ನು ಹಂಚಿಕೊಂಡರು.

ಸೋಷಿಯಲ್ ಮೀಡಿಯಾ ವಾರಿಯರ್ಸ್ ಹೆಚ್ಚಳ
ನಮ್ಮ ದೇಶದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಸೈನಿಕರು ಹೆಚ್ಚಿದ್ದು, ಸೈನ್ಯ ನಡೆಸುವ ದಾಳಿಯನ್ನು ಪ್ರಶ್ನಿಸುವ, ಅದಕ್ಕೂ ಪುರಾವೆ ಕೇಳುವ ಸಂಖ್ಯೆ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕರ್ನಲ್, ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಪ್ರಶ್ನಾರ್ಹರು. ಆದರೆ, ಪ್ರಶ್ನೆ ಮಾಡುವುದನ್ನೇ ಉದ್ಯೋಗ ಮಾಡಿಕೊಳ್ಳುವ ಬದಲು, ದೇಶಕ್ಕೆ ನಾನು ಏನು ಮಾಡಬಹುದು ಎಂಬುದನ್ನು ಆಲೋಚನೆ ಮಾಡಬೇಕಿದೆ. ಸೋಷಿಯಲ್ ಮೀಡಿಯಾ ಬಿಟ್ಟು ದೇಶಸೇವೆಗೆ ಸೇರುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

ಮುಖ್ಯಾಂಶಗಳು 
ಭಾರತ ಇಂದು ಜೀವಂತವಾಗಿದ್ದರೆ, ಸೈನಿಕ ಪಾತ್ರ ಬಹಳ ಮುಖ್ಯ ಸೈನ್ಯದ ಬಗ್ಗೆ ನಾವು ನಮ್ಮ ಯುವಕರಿಗೆ ಮನವರಿಕೆ ಮಾಡಿಕೊಡಬೇಕು ಭಾರತೀಯ ಸೇನೆ ನಮ್ಮ ದೇಶದ  ಏಕತೆಯ ಸಂಕೇತ ಅಲ್ಲಿ ಮಂದಿರ, ಮಸೀದಿ, ಗುರುದ್ವಾರ ಎಲ್ಲವೂ ಒಂದೇ ಎಲ್ಲರೂ ಅಲ್ಲಿ ಹೋಗಲೇಬೇಕು, ಅದು ಕರ್ತವ್ಯ ಕೂಡ ಶತ್ರುಗಳ ಸ್ಥಳ ವಶಪಡಿಸಿಕೊಂಡ ತಕ್ಷಣ ಭಾರತದ ಧ್ವಜ ಹಾರಿಸುತ್ತೇವೆ ರಾಷ್ಟಧ್ವಜ ನಮ್ಮ ವಿಜಯದ ಸಂಕೇತ.

? ಸೈನಿಕನಿಗೆ ಸ್ವಾರ್ಥವಿಲ್ಲ. ಅವನು ತನ್ನ ಇಡೀ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡುತ್ತಾನೆ
? ಸ್ಟೇಟ್‌ಮನ್ ಥಿಂಗ್ ನೆಕ್ಸ್ಟ್ ಜನರೇಷನ್, ಪೊಲಿಟೀಷಿಯನ್ ಥಿಂಗ್ ನೆಕ್ಸ್ಟ್ ಎಲೆಕ್ಷನ್
? ಡಾಕ್ಟರ್, ಡ್ರೈವರ್, ಬಾರ್ಬರ್ ಎಲ್ಲರೂ ದೇಶದ ಏಳಿಗೆಗೆ ಶ್ರಮಿಸುತ್ತಿದ್ದಾರೆ.
? ಯೋಧರು ಮಾತ್ರ ದೇಶದ ಉಳಿವಿಗೆ ಶ್ರಮಿಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!