ಬೆಂಗಳೂರು: ಮಹಾ ಕುಂಭಮೇಳ (Maha Kumbh Mela 2025) ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ (Prayagraj) ಬೆಂಗಳೂರಿನಿಂದ (Bengaluru) ಜನವರಿ 8ರಂದು ವಿಶೇಷ ಏಕಮಾರ್ಗ ಕುಂಭಮೇಳ ಎಕ್ಸ್‌ಪ್ರೆಸ್ ರೈಲು (Special train) ಹೊರಡಲಿದೆ ಎಂದು ನೈಋತ್ಯ ರೈಲ್ವೆ (SWR) ಸೋಮವಾರ ತಿಳಿಸಿದೆ.
ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಬೆಂಗಳೂರು ಮತ್ತು ಪ್ರಯಾಗರಾಜ್ ನಡುವೆ ವಿಶೇಷ ರೈಲು ಹಾಕಲಾಗಿದೆ. ರೈಲು ನಂ.06577 ಕುಂಭಮೇಳ ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 8ರಂದು SMVT ಬೆಂಗಳೂರಿನಿಂದ 23:50 ಕ್ಕೆ ಹೊರಟು ಜನವರಿ 10 ರಂದು 17:15 ಕ್ಕೆ ಪ್ರಯಾಗರಾಜ್‌ಗೆ ತಲುಪಲಿದೆ ಎಂದು SWR ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ ರೈಲು ವೈಟ್ ಫೀಲ್ಡ್, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ, ಪೆರಂಬೂರು, ಗುಡೂರು, ವಿಜಯವಾಡ, ವಾರಂಗಲ್, ಬಲ್ಹರ್ಷಾ, ಚಂದ್ರಾಪುರ, ಸೇವಾಗ್ರಾಮ್, ನಾಗ್ಪುರ, ಇಟಾರ್ಸಿ, ಜಬಲ್ಪುರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲು 14 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 4 ಸ್ಲೀಪರ್ ಬೋಗಿಗಳು ಮತ್ತು 2 ಲಗೇಜ್ ಕಂ ಬ್ರೇಕ್ ವ್ಯಾನ್‌ಗಳು ಸೇರಿ 20 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.