ಬೆಂಗಳೂರು: ಮಕರ ಸಂಕ್ರಾಂತಿ (Makara sankranthi) ಅಥವಾ ಪೊಂಗಲ್ (Pongal) ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಕೆಎಸ್ಆರ್ ಬೆಂಗಳೂರು ಹಾಗೂ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು (Special Trains) ನೈಋತ್ಯ ರೈಲ್ವೆ ಘೋಷಿಸಿದೆ. ಜತೆಗೆ ಬೆಂಗಳೂರು, ತೂತುಕುಡಿ, ಮೈಸೂರು ಮಧ್ಯೆಯೂ ವಿಶೇಷ ರೈಲು ವ್ಯವಸ್ಥೆ ಮಾಡಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಈ ಬಗ್ಗೆ ಸಂದೇಶ ಪ್ರಕಟಿಸಿ ಮಾಹಿತಿ ಹಂಚಿಕೊಂಡಿರುವ ನೈಋತ್ಯ ರೈಲ್ವೆ, ವಿಶೇಷ ರೈಲುಗಳ ವೇಳಾಪಟ್ಟಿ, ನಿಲುಗಡೆ ಮತ್ತಿತರ ವಿವರಗಳನ್ನು ಹಂಚಿಕೊಂಡಿದೆ.
ರೈಲು ಸಂಖ್ಯೆ 07319 / 07320 ವಿಶೇಷ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ಗೆ ಹಾಗೂ ಅಲ್ಲಿಂದ ಕೆಎಸ್‌ಆರ್ ಬೆಂಗಳೂರಿಗೆ ಸಂಚರಿಸಲಿದೆ. ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 10ರಂದು ಬೆಳಿಗ್ಗೆ 08:05ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ ಮಧ್ಯಾಹ್ನ 02:40 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.
ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ನಿಂದ ರೈಲು (07320) ಜನವರಿ 10 ರಂದು ಮಧ್ಯಾಹ್ನ 03:40 ಕ್ಕೆ ಹೊರಟು, ಅದೇ ದಿನ ರಾತ್ರಿ 10:50 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಎರಡೂ ಮಾರ್ಗಗಳಲ್ಲಿ ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ವೆಟ್ಟಿ, ಅಂಬೂರು, ಗುಡಿಯಾಟ್ಟಂ, ಕಟಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳೂರು ಮತ್ತು ಪೆರಂಬೂರಿನಲ್ಲಿ ನಿಲುಗಡೆ ಹೊಂದಿದೆ. ಈ ರೈಲು 1 ಎಸಿ- ತ್ರಿಟೈರ್, 11 ಸ್ವೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ಡಿ ಸೇರಿದಂತೆ 17 ಬೋಗಿಗಳನ್ನು ಒಳಗೊಂಡಿರುತ್ತದೆ.
ಬೆಂಗಳೂರು ತೂತುಕುಡಿ ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು
ರೈಲು ಸಂಖ್ಯೆ 06569 ಎಸ್‌ಎಂವಿಟಿ ಬೆಂಗಳೂರು-ತೂತುಕುಡಿ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 10 ರಂದು ರಾತ್ರಿ 10:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಜನವರಿ 11 ರಂದು ಬೆಳಿಗ್ಗೆ 11:00 ಗಂಟೆಗೆ ತೂತುಕುಡಿ ತಲುಪಲಿದೆ. ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಸಾತೂರ್ ಮತ್ತು ಕೋವಿಲ್ಪಟ್ಟಿಯಲ್ಲಿ ನಿಲ್ಲಲಿದೆ.
ರೈಲು ಸಂಖ್ಯೆ 06570 ಜನವರಿ 11 ರಂದು ಮಧಾಹ್ನ 01:00 ಕ್ಕೆ ತೂತುಕುಡಿಯಿಂದ ಹೊರಟು ಜನವರಿ 12 ರಂದು ಬೆಳಿಗ್ಗೆ 06:30 ಕ್ಕೆ ಮೈಸೂರಿಗೆ ತಲುಪಲಿದೆ. ಈ ರೈಲು ಕೋವಿಲಟ್ರಿ, ಸಾತೂರ್, ವಿರುಡುನಗರ, ಮದುರೆ, ದಿಂಡಿಗಲ್, ಕರೂರ್, ನಾಮಕ್ಕಲ್, ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರಂ, ಕೆಎಸ್‌ಆರ್ ಬೆಂಗಳೂರು ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲು 13 ಎಸಿ ತ್ರಿಟೈರ್, 3 ಸ್ವೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ಗಳು ಸೇರಿದಂತೆ 19 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ರೈಲುಗಳು ಪ್ರತಿ ನಿಲ್ದಾಣಕ್ಕೆ ಆಗಮಿಸುವ ಸಮಯ, ನಿರ್ಗಮನ ಸಮಯ ತಿಳಿಯುವುದಕ್ಕಾಗಿ ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ 139 ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.