Friday, 22nd November 2024

Sabarimala Temple: ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸುಖಪ್ರಯಾಣ: ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್​

sabarimala travel

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ (Bengaluru news) ಶಬರಿಮಲೆ ಯಾತ್ರೆ (Sabarimala Temple) ಕೈಗೊಳ್ಳುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸದಾಗಿ ವೋಲ್ವೋ ಬಸ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಆರಂಭಿಸಿದೆ.

ಇದೇ ನವೆಂಬರ್ 29ರಿಂದ ಹೊಸ ವೋಲ್ವೋ ಬಸ್ ಸಂಚಾರ ಆರಂಭವಾಗಲಿದ್ದು, ಬೆಂಗಳೂರಿನಿಂದ-ನೀಲಕ್ಕಲ್ (ಪಂಪಾ-ಶಬರಿಮಲೈ) ವರೆಗೆ ಓಡಾಟ ನಡೆಸಲಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ. ಅಂದು ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಬಸ್ ಹೊರಟು, ಮರುದಿನ ಬೆಳಗ್ಗೆ 6.45ಕ್ಕೆ ನೀಲಕ್ಕಲ್ ತಲುಪುತ್ತದೆ. ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ಇನ್ನು ಪ್ರಯಾಣ ದರ ವಯಸ್ಕರಿಗೆ 1,750 ರೂ. ನಿಗದಿಪಡಿಸಲಾಗಿದೆ.

ಕರ್ನಾಟಕದಿಂದ 3 ತಿಂಗಳು ವಿಶೇಷ ರೈಲು

ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲು (Special train) ವ್ಯವಸ್ಥೆ ಕಲ್ಪಿಸಿದೆ. ಮೂರು ತಿಂಗಳ ಕಾಲ ಈ ರೈಲು ಸಂಚರಿಸಲಿದೆ. ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06083) ಕೊಚುವೇಲಿ ನಿಲ್ದಾಣದಿಂದ ನ.12 ರಿಂದ ಜನವರಿ 28 ವರಗೆ ಪ್ರತಿ ಮಂಗಳವಾರ ಸಂಜೆ 6.05ಕ್ಕೆ ಹೊರಟು, ಮರುದಿನ ದಿನ 10.55 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06084) ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನ.13 ರಿಂದ ಜನವರಿ 29ವರಗೆ ಪ್ರತಿ ಬುಧವಾರ ಇರಲಿದೆ. ಈ ರೈಲು ಮಧ್ಯಾಹ್ನ 12.45ಕ್ಕೆ ಹೊರಟು, ಮರುದಿನ ದಿನ ಬೆಳಗ್ಗೆ 6.45ಕ್ಕೆ ಕೊಚುವೇಲಿ ತಲುಪಲಿದೆ.

ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ ಕೊಲ್ಲಂ, ಕಾಯಂಕುಳಂ, ಚೆಂಗನ್ನೂರ್, ಪಾಲಕ್ಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರ್ ಪೆಟ್ಟಾಯ್ ಜಂಕ್ಷನ್‌ಗಳಲ್ಲಿ ನಿಲುಗಡೆ ಇರಲಿದೆ. ಶಬರಿಮಲೆಗೆ ತೆರಳುವ ಭಕ್ತರು ಚೆಂಗನ್ನೂರು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಬಸ್‌ ಮೂಲಕ ಪಂಪಾಗೆ ತೆರಳಬಹುದು. ಪ್ರಯಾಣಿಕರು ಅಧಿಕೃತ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ, NTES ಅಪ್ಲಿಕೇಶನ್ ಬಳಸಿ ಅಥವಾ 139ಗೆ ಕರೆ ಮಾಡಿ ಈ ರೈಲುಗಳ ಸಮಯ ಪರಿಶೀಲಿಸಬಹುದು.

ಇದನ್ನೂ ಓದಿ: Sabarimala Temple: ಶಬರಿಮಲೆ ಪ್ರಸಾದದಲ್ಲೂ ಕ್ರಿಮಿನಾಶಕ; 6.65 ಲಕ್ಷ ಕಂಟೈನರ್ ಪ್ರಸಾದ ಗೊಬ್ಬರಕ್ಕೆ!