Tuesday, 7th January 2025

Student Death: ಐಐಎಂಬಿ ಕ್ಯಾಂಪಸ್‌ನಲ್ಲಿ ಹುಟ್ಟುಹಬ್ಬದ ದಿನವೇ ವಿದ್ಯಾರ್ಥಿ ಆಕಸ್ಮಿಕ ಸಾವು

Student Death

ಬೆಂಗಳೂರು: ಬೆಂಗಳೂರಿನ (Bengaluru News) ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಬಿದ್ದು ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ (Student Death) ಸಾವನ್ನಪ್ಪಿದ್ದಾನೆ.

ಮೃತನನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ನಿಲಯ್ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ. ಗುಜರಾತ್ ಮೂಲದ ಈತ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಶನಿವಾರ ರಾತ್ರಿ ಕ್ಯಾಂಪಸ್‌ನಲ್ಲಿರುವ ಸ್ನೇಹಿತರೊಬ್ಬರ ಕೊಠಡಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಪಟೇಲ್ ತಮ್ಮ ಕೋಣೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 6.45ರ ಸುಮಾರಿಗೆ ಭದ್ರತಾ ಸಿಬ್ಬಂದಿಗೆ ಪಟೇಲ್ ಶವ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರದಂದು ಅವರ ಜನ್ಮದಿನವಾಗಿದ್ದ ಕಾರಣ ಪಟೇಲ್ ಅವರು ತಮ್ಮ ಹುಟ್ಟುಹಬ್ಬವನ್ನು ಕ್ಯಾಂಪಸ್‌ನ ಹಾಸ್ಟೆಲ್‌ನ ಬೇರೆ ಬ್ಲಾಕ್‌ನಲ್ಲಿರುವ ಸ್ನೇಹಿತರ ಕೋಣೆಯಲ್ಲಿ ಆಚರಿಸಲು ಹೋಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ರಾತ್ರಿ 11.30ರ ಸುಮಾರಿಗೆ ಗೆಳೆಯನ ಕೊಠಡಿಯಿಂದ ಹೊರಟು ‘ಎಫ್’ ಬ್ಲಾಕ್ ನಲ್ಲಿರುವ ತನ್ನ ಕೋಣೆಗೆ ವಾಪಸಾಗಿದ್ದಾನೆ.

ಪಟೇಲ್ ತನ್ನ ಕೋಣೆಗೆ ಹಿಂತಿರುಗುವಾಗ ಬ್ಯಾಲೆನ್ಸ್ ಕಳೆದುಕೊಂಡು ಆಕಸ್ಮಿಕವಾಗಿ ಎರಡನೇ ಮಹಡಿಯಿಂದ ಬಿದ್ದಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ ಪಟೇಲ್ ಅವರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ನಂತರ, ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘವು ಸಂಸ್ಥೆಯು ಈ ವಿಷಯದ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಒತ್ತಾಯಿಸಿದೆ.

ಇದನ್ನೂ ಓದಿ: CM Siddaramaiah: 60% ಕಮಿಷನ್ ಆರೋಪ; ವಿರೋಧ ಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು ಎಂದ ಸಿಎಂ

Leave a Reply

Your email address will not be published. Required fields are marked *