ಹಾಸನ: ಹಾಸನ(Hassan) ಜಿಲ್ಲೆಯ ಹೊಳೆನರಸೀಪುರ(Hole Narasipura) ತಾಲೂಕಿನ ಅಗ್ರಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಂಎಲ್ಸಿ ಸೂರಜ್ ರೇವಣ್ಣ(Suraj Revanna) ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಮಾರಂಭದ ಕಾರ್ಯಕ್ರಮದಲ್ಲಿ ಸೂರಜ್ ನಾಲಿಗೆ ಹರಿಬಿಟ್ಟಿದ್ದಾರೆ.
ಶನಿವಾರ(ಜ.11) ರಾತ್ರಿ ಅಗ್ರಹಾರ ಗ್ರಾಮದಲ್ಲಿ ನಡೆದ ತಮ್ಮ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಸೂರಜ್ ರೇವಣ್ಣ, “ನಾಯಿ ಕಣ್ಣು, ನರಿ ಕಣ್ಣು ಅಂತ ನನ್ನ ದೃಷ್ಟಿಯನ್ನು ತೆಗೆದರು. ಕೆಟ್ಟ ಸೂ.. ಕಣ್ಣು ಯಾಕೆ ಹೇಳಲಿಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡೆ. ಮಹಿಳೆಯರ ಬಗ್ಗೆ ತಪ್ಪಾಗಿ ಮಾತನಾಡುತ್ತಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ಅಂತ ಬಿಂಬಿಸಿಕೊಳ್ಳದೇ, ಪಕ್ಷದೊಳಗಿದ್ದು ಮೋಸ ಮಾಡಿದವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. “ಕೆಟ್ಟ ಸೂ…. ಕಣ್ಣು ತೆಗೆದು ಬಿಡವ್ವ” ಅಂತ ಹೇಳಿದೆ” ಎಂದು ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಯಾವುದೇ ಪಕ್ಷ ಇಲ್ಲ, ಇರೋದು ಎರಡೇ ಪಕ್ಷ, ಒಂದು ಹೆಚ್.ಡಿ.ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧ ಪಕ್ಷ. ನಮ್ಮ ತಾತ ಹೇಳಿರುವ ಮಾತು ನನಗೆ ಈಗ ಅನುಭವ ಆಗುತ್ತಿದೆ ಎಂದರು.
ನಾನು ಪೆನ್ಡ್ರೈವ್ ಹಂಚಿ ಎಂಎಲ್ಸಿ ಆದವನಲ್ಲ
ಪಕ್ಷದ ಕಾರ್ಯಕರ್ತರಿಗೆ ಯಾವುದೇ ಇಲಾಖೆಯಲ್ಲಿ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ, ಯಾರು ಬರುತ್ತಾರೋ, ಬಿಡುತ್ತಾರೋ ಆದರೆ ನಾನು ಮಾತ್ರ ಖಂಡಿತ ಬರುತ್ತೇನೆ. ಯಾವುದೇ ಜಾತಿ ಹಾಗೂ ಜನಾಂಗ ನೋಡದೆ ಕೆಲಸ ಮಾಡುತ್ತೇನೆ. ನಮ್ಮ ತಾತ ದೇವೇಗೌಡರು ಯಾವುದೇ ಜಾತಿ ನೋಡಬೇಡ ಅಂದಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು. ಆದರೆ ಅವರಿಗೆ ಅರ್ಥವಾದ ಬಳಿಕ ನಿನ್ನ ಕೈಹಿಡಿಯುತ್ತಾರೆ ಅಂಥ ತಾತ ತುಂಬಾ ಸಲ ಹೇಳಿದ್ದಾರೆ ಎಂದು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತಿದ್ದರು. ಹೆಚ್.ಡಿ.ರೇವಣ್ಣನವರು ಎಷ್ಟು ದೇವಸ್ಥಾನ ಕಟ್ಟಿದ್ದಾರೆ ಅವರಿಗೆ ಗೊತ್ತಾ? ಆ ನಂಬರ್ ಸಂಸದರಿಗೆ ಏನು ಗೊತ್ತು? ಕೇಳಿಕೊಂಡು ಬರಲು ಹೇಳಿ ಎಂದು ಕಿಡಿಕಾರಿದರು.
ನಂತರ ಸೂರಜ್ ರೇವಣ್ಣ ಎಂಎಲ್ಸಿ ಆಗಿ ಮೂರು ವರ್ಷದಲ್ಲಿ ಎಷ್ಟು ಗ್ರಾಮ ಪಂಚಾಯತ್ಗೆ ಹೋಗಿದ್ದಾರೆ? ಏನು ಕೆಲಸ ಮಾಡಿದ್ದಾರೆ ಎಂಬ ಶ್ರೇಯಸ್ ಪಟೇಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂಸದನಾಗಿ ಆರು ತಿಂಗಳಾಗಿದೆ. ಹಾಸನ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿ ತರಾಟೆಗೆ ತೆದುಕೊಂಡರು. ಅವರಿಗೆ ಮಾಹಿತಿ ಕೊರತೆ ಇರಬೇಕು. ಮಾಡಿರುವ ಕೆಲಸ ಕಣ್ಣೆದುರೇ ಇದೆ. ನಾನು ಇಡೀ ಜಿಲ್ಲೆಗೆ ಸಹಕಾರ ಆಗುವ ರೀತಿ ಅನುದಾನ ಕೊಟ್ಟಿದ್ದೇನೆ. 3 ವರ್ಷದಲ್ಲಿ 50 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಹೋಗಿದೆ. ಪೆನ್ಡ್ರೈವ್ ಹಂಚಿ ನೀವು ಅಚಾನಕ್ಕಾಗಿ ಸಂಸದರಾಗಿದ್ದೀರಿ ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ:Raichur News: ಲಿಂಗಸುಗೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ಕೊಲೆ ಶಂಕೆ