Saturday, 4th January 2025

Tejasvi Surya: ತೇಜಸ್ವಿ ಸೂರ್ಯ- ಸಿವಶ್ರೀ ಸ್ಕಂದಪ್ರಸಾದ್‌ ಮೊದಲ ಭೇಟಿಯ ಮಿಂಚು ಹೀಗಿತ್ತು!

tejasvi surya sivashree

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಕರ್ನಾಟಕ ಸಂಗೀತ ಗಾಯಕಿ ಸಿವಶ್ರೀ ಸ್ಕಂದಪ್ರಸಾದ್‌ (Sivashree Skandaprasad) ಅವರು ಮದುವೆಯಾಗಲಿದ್ದಾರೆ (Tejasvi surya Marriage) ಎಂದು ʼವಿಶ್ವವಾಣಿʼ ಮೊದಲು ಬ್ರೇಕ್‌ ಮಾಡಿದ ಸುದ್ದಿ ಇದೀಗ ವೈರಲ್‌ ಆಗಿದೆ. ಜೊತೆಗೆ, ತೇಜಸ್ವಿ ಸೂರ್ಯ ಹಾಗೂ ಸಿವಶ್ರೀ ಅವರ ಮೊದಲ ಭೇಟಿ ಹೇಗಿತ್ತು ಎಂಬುದು ಕೂಡ ವೈರಲ್‌ ಆಗಿದೆ.

ಈ ಸುದ್ದಿ ಬ್ರೇಕ್‌ ಆದ ಬಳಿಕ ತೇಜಸ್ವಿ- ಸಿವಶ್ರೀ ಇಬ್ಬರ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಟವೂ ಹೆಚ್ಚಾಗಿದೆ. ಬಹಳ ಮಂದಿ ಇವರಿಬ್ಬರ ಪರಿಚಯ ಎಲ್ಲಾಯಿತು, ಹೇಗಾಯಿತು ಎಂಬ ಬಗ್ಗೆ ಕುತೂಹಲ ತೋರಿಸಿದ್ದಾರೆ. ಸಿವಶ್ರೀ ಅವರ ಹಾಡುಗಾರಿಕೆಯ ಯುಟ್ಯೂಬ್‌ ವಿಡಿಯೋಗಳು ಇದ್ದಕ್ಕಿದ್ದತೆ ವ್ಯೂವರ್‌ಶಿಪ್‌ನಲ್ಲಿ ಅಗಾಧ ಹೆಚ್ಚಳ ತೋರಿಸಿವೆ. ಕರ್ನಾಟಕ ಸಂಗೀತಪ್ರಿಯರ ವಲಯದಲ್ಲಿ ಈಗಾಗಲೇ ಪರಿಚಿತರಾಗಿರುವ ಸಿವಶ್ರೀ ಅವರ ಬಗ್ಗೆ ಇತರರು ಕೂಡ ಈ ಹುಡುಕಾಟ ನಡೆಸುತ್ತಿದ್ದಾರೆ.

ಸಿವಶ್ರೀ ಸ್ಕಂದಪ್ರಸಾದ್‌ ಹಾಗೂ ತೇಜಸ್ವಿ ಸೂರ್ಯ ಇಬ್ಬರ ಮೊದಲ ಭೇಟಿ 2021ರಲ್ಲಿ ನಡೆದಿತ್ತು. ಈ ಕುರಿತ ಒಂದು ಘಟನೆಯ ವಿಡಿಯೋ ಹಾಗೂ ಫೋಟೋಗಳನ್ನು ಸ್ವತಃ ಸಿವಶ್ರೀ ಅವರೇ ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಹ್ಯಾಂಡಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಪಾಂಡಿಚೆರಿಯಲ್ಲಿ ನಡೆದಿದ್ದ ಸಿವಶ್ರೀ ಅವರ ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದ ತೇಜಸ್ವಿ, ವೇದಿಕೆಯ ಮೇಲೆ ಮಾತನಾಡಿದ ಕ್ಷಣಗಳ ತುಣುಕುಗಳನ್ನು ಸಿವಶ್ರೀ ಅಪ್‌ಲೋಡ್‌ ಮಾಡಿದ್ದರು.

2021ರ ಮಾರ್ಚ್‌ನಲ್ಲಿ ಪಾಂಡಿಚೆರಿಯಲ್ಲಿ ನಡೆಯಲಿದ್ದ ಚುನಾವಣೆಯ ಪ್ರಚಾರಕ್ಕಾಗಿ ಅಲ್ಲಿಗೆ ಹೋಗಿದ್ದ ತೇಜಸ್ವಿ ಸೂರ್ಯ, ಅಲ್ಲಿ ಸಿವಶ್ರೀ ಸಂಗೀತ ಕಛೇರಿ ಇದೆ ಎಂದು ತಿಳಿದಾಗ ಅಲ್ಲಿಗೆ ಧಾವಿಸಿದ್ದರು. ಬೆಂಗಳೂರಿಗೆ ಸಂಜೆ ಏಳುವರೆ ಗಂಟೆಗೆ ವಿಮಾನ ಇದ್ದರೂ ಅದರ ನಡುವೆ ಒಂದು ಗಂಟೆ ಬಿಡುವು ಮಾಡಿಕೊಂಡು ಕುಳಿತು ಸಂಗೀತ ಕೇಳಿ, ನಂತರ ಸಂಘಟಕರ ಒತ್ತಾಯದಿಂದ ವೇದಿಕೆ ಮೇಲೆ ಬಂದು ಮಾತನಾಡಿದ್ದರು.

“ನಾನು ಸಿವಶ್ರೀ ಅವರ ದೊಡ್ಡ ಅಭಿಮಾನಿ. ನಾನು ಚುನಾವಣೆ ಪ್ರಚಾರಕ್ಕಾಗಿ ಇಲ್ಲಿದ್ದೆ. ಆಕಸ್ಮಿವಾಗಿ ಸಿವಶ್ರೀ ಕಛೇರಿ ಇದೆ ಎಂದು ತಿಳಿದು ಇಲ್ಲಿಗೆ ಬಂದೆ. ಇದೊಂದು ಆಕಸ್ಮಿಕ. ಅವರ ದೈವಿಕ ಸಂಗೀತವನ್ನು ಆಸ್ವಾದಿಸಿದ್ದೇನೆ. ನಾವೆಲ್ಲ ಭಾರತೀಯರು ಇಂಥ ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದ್ದು ಧನ್ಯರಾಗಿದ್ದೇವೆ. ಸಿವಶ್ರೀ ಅಂಥವರು ಈ ಪರಂಪರೆಯನ್ನು ಜೀವಂತವಾಗಿ ಕಾಪಾಡಿಕೊಂಡಿದ್ದಾರೆ. ಆಕೆ ನಿಜಕ್ಕೂ ಧನ್ಯೆ, ಅವರ ಹಾಡುವಿಕೆ ದೈವಿಕವಾದುದು. ಆಕೆ ಹಾಗೂ ಅವರ ಸಂಗೀತ ಎಂಎಸ್‌ ಸುಬ್ಬುಲಕ್ಷ್ಮಿ ಅವರಂತೆ ಶಾಶ್ವತವಾಗಿರಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ” ಎಂದು ತೇಜಸ್ವಿ ಸೂರ್ಯ ವೇದಿಕೆಯ ಮೇಲಿನಿಂದ ಹಾರೈಸಿದ್ದರು.

ಇದನ್ನು ಶೇರ್‌ ಮಾಡಿಕೊಂಡಿರುವ ಸಿವಶ್ರೀ, “ಈ ಸಂಜೆ ನನ್ನ ಪಾಲಿಗೆ ಅದೆಷ್ಟು ವಿಶೇಷವಾಗಿತ್ತು ಎಂದು ಮಾತಿನಲ್ಲಿ ಹೇಳಲಾರೆ. ನಿಮ್ಮ ಗೌರವಪೂರ್ವಕ ಉಪಸ್ಥಿತಿಯ ಮೂಲಕ ನಮ್ಮನ್ನು ಮನ್ನಿಸಿದ ಎಂಪಿ ತೇಜಸ್ವಿ ಸೂರ್ಯ ಅವರಿಗೆ ಕೃತಜ್ಞತೆಗಳು” ಎಂದು ವಾಲ್‌ನಲ್ಲಿ ಬರೆದಿದ್ದರು. ಈ ಫೋಟೋ ಹಾಗೂ ವಿಡಿಯೋಗಳನ್ನು ತೇಜಸ್ವಿ ಸೂರ್ಯ ಸಹ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು.

ಇದಕ್ಕೂ ಮುನ್ನ ಸಿವಶ್ರೀ ಅವರ ಸಂಗೀತವನ್ನು ತೇಜಸ್ವಿ ಕೇಳುತ್ತಿದ್ದರು; ಆದರೆ ಇದೇ ಇವರಿಬ್ಬರ ಮೊದಲ ಮುಖಾಮುಖಿ ಎಂದು ತಿಳಿದುಬಂದಿದೆ. ಇದರ ಬಳಿಕ ಇಬ್ಬರೂ ಇನ್ನಷ್ಟು ಆಪ್ತರಾಗಿದ್ದರು. ಇದೀಗ ಪರಸ್ಪರರ ಕುಟುಂಬಗಳ ಮೂಲಕ ಇವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿದೆ.

ಯಾರು ಸಿವಶ್ರೀ ಸ್ಕಂದಪ್ರಸಾದ್‌?

ಸಿವಶ್ರೀ ಸ್ಕಂದಪ್ರಸಾದ್ ಅವರು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನು, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್‌, ಟ್ರೆಕ್ಕಿಂಗ್‌, ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಸಿವಶ್ರೀ ಅವರು ಯೂಟ್ಯೂಬ್ ಚಾನೆಲ್‌ಗೆ ಸುಮಾರು 2 ಲಕ್ಷ ಹಿಂಬಾಲಕರಿದ್ದಾರೆ. ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ಸಿವಶ್ರೀ ಕೆಲವು ಹಾಡುಗಳನ್ನು ಹಾಡಿ ಜನಮೆಚ್ಚುಗೆ ಗಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಶ್ರೀರಾಮನ ಕುರಿತಾಗಿ ಸಿವಶ್ರೀ ಸ್ಕಂದಪ್ರಸಾದ್ ಅವರು ಹಾಡಿದ್ದ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿ ಟ್ವಿಟರ್‌ (ಎಕ್ಸ್‌)ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿವಶ್ರೀ ಅವರು ಕನ್ನಡದ ‘ಪೂಜಿಸಲೆಂದೇ ಹೂವಗಳ ತಂದೆ…’ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ್ದ ಮೋದಿ ಅವರು, ಈ ಹಾಡಿನ ಲಿಂಕ್ ಟ್ವಿಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಮ, ಕೃಷ್ಣ, ಈಶ್ವರ, ಪಾಂಡುರಂಗ, ಸೌಂದರ್ಯ ಲಹರಿ ಸೇರಿದಂತೆ ಭಕ್ತಿಗೀತೆ, ಕೀರ್ತನೆ ಹಾಗೂ ಭಜನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮ್ಯಾರಥಾನ್‌ನಲ್ಲಿ ಇಬ್ಬರೂ ಭಾಗಿ

ಸೈಕ್ಲಿಂಗ್‌ ಹಾಗೂ ಮ್ಯಾರಥಾನ್‌ಗಳಲ್ಲಿ ಇಬ್ಬರೂ ಭಾಗವಹಿಸುತ್ತಿರುತ್ತಾರೆ. 29 ವರ್ಷಕ್ಕೆ ಬೆಂಗಳೂರು ಸಂಸದನಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ತೇಜಸ್ವಿ ಸೂರ್ಯ ಅವರು ತಮ್ಮ 34ನೇ ವಯಸ್ಸಿಗೆ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದವರು. ತೇಜಸ್ವಿ ಸೂರ್ಯ ಶಾಸ್ತ್ರೀಯ ಸಂಗೀತಪ್ರಿಯ ಕೂಡ ಹೌದು. ಅವರು ಸೈಕ್ಲಿಂಗ್‌, ವಾಕಥಾನ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಐರನ್ ಮ್ಯಾನ್ ಮ್ಯಾರಥಾನ್‌ನಲ್ಲಿ ಗೆಲ್ಲುವ ಮೂಲಕ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಮೊದಲ ಸಂಸದ ಎನಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಸಿವಶ್ರೀ ಸ್ಕಂದಪ್ರಸಾದ್‌ ಅವರೂ ಭಾಗವಹಿಸಿದ್ದರು. ಈ ಸ್ಪರ್ಧೆಯ ಫೋಟೋಗಳನ್ನು ಇನ್‌ಸ್ಟಗ್ರಾಂನಲ್ಲಿ ಅವರು ಶೇರ್‌ ಮಾಡಿಕೊಂಡಿದ್ದರು.