Wednesday, 30th October 2024

Waqf Board: ವಕ್ಫ್‌ನಿಂದ ನೋಟೀಸ್‌ ಪಡೆದ ರೈತರ ಬೆಂಬಲಕ್ಕೆ ಧಾವಿಸಿದ ತೇಜಸ್ವಿ ಸೂರ್ಯ, ಜಂಟಿ ಸಂಸದೀಯ ಸಮಿತಿಗೆ ದೂರು

Tejasvi_Surya

ಬೆಂಗಳೂರು: ರಾಜ್ಯದಲ್ಲಿ ತಪ್ಪಾಗಿ ವಕ್ಫ್‌ನಿಂದ (Waqf Board) ನೋಟೀಸ್‌ ಪಡೆದು ತೊಂದರೆಗೊಳಗಾಗಿರುವ ರೈತರ ನೆರವಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಧಾವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗುವಂತೆ ಜಂಟಿ ಸಂಸದೀಯ ಸಮಿತಿಗೆ (JPC) ಮನವಿ ಮಾಡಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಈ ಬಗ್ಗೆ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. “ವಿಜಯಪುರ ಜಿಲ್ಲೆ ಮತ್ತು ಕರ್ನಾಟಕದ ಸುತ್ತಮುತ್ತಲಿನ ಇತರ ಪ್ರದೇಶಗಳ ನೂರಾರು ರೈತರು ತಮ್ಮ ಭೂಮಿಗೆ ವಕ್ಫ್ ಆಸ್ತಿ ಎಂದು ತಪ್ಪಾಗಿ ನೋಟಿಸ್ ಪಡೆದಿದ್ದಾರೆ. ಯಾವುದೇ ನೋಟಿಸ್‌ ನೀಡದೆ, ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಕೆಲವು ಜಮೀನುಗಳ ಆರ್‌ಟಿಸಿ, ಪಹಣಿ ಮತ್ತು ಮ್ಯುಟೇಶನ್ ರಿಜಿಸ್ಟರ್‌ಗಳಲ್ಲಿ ವಕ್ಫ್‌ ಆಸ್ತಿ ಎಂದು ಸೂಚಿಸಿ ಬದಲಾವಣೆಗಳನ್ನು ಮಾಡಲಾಗಿದೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

“ಸಮಿತಿಯ ಮುಂದೆ ಸಾಕ್ಷಿಗಳಾಗಿ ಈ ರೈತರ ನಿಯೋಗವನ್ನು ಆಹ್ವಾನಿಸಿ ಇವರ ಸಮಸ್ಯೆಯನ್ನು ಆಲಿಸಬೇಕು. ಮತ್ತು ಈ ಸಮಸ್ಯೆಯ ಪ್ರಮಾಣವನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಸಾರ್ವಜನಿಕ ವಿಚಾರಣೆಗಾಗಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು” ಎಂದು ಸಂಸದರು ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ: Pralhad Joshi: ಭೂಮಿ ಕಬಳಿಸಲು ವಕ್ಫ್‌ಗೆ ಕುಮ್ಮಕ್ಕು ಕೊಟ್ಟಿದ್ದೇ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್! ಜೋಶಿ ಆರೋಪ