Wednesday, 25th December 2024

Terrorism: ಒಬಾಮಾ ಭೇಟಿ ವೇಳೆ ಸ್ಫೋಟಕ್ಕೆ ಸಂಚು: ಭಟ್ಕಳದ ಮೂವರಿಗೆ 10 ವರ್ಷ ಜೈಲು ಶಿಕ್ಷೆ

Mysore News

ಬೆಂಗಳೂರು: ಬರಾಕ್ ಒಬಾಮಾ (Barack Obama) ಅವರ ಭಾರತ ಭೇಟಿಯ ಸಂದರ್ಭದಲ್ಲಿ ಬಾಂಬ್‌ ಸ್ಫೋಟದ (Bomb Blast) ಸಂಚು (Terrorism) ರೂಪಿಸಿದ್ದ ಭಟ್ಕಳ ಮೂಲದ ಐವರು ಉಗ್ರರಿಗೆ (terrorists) ಎನ್‌ಐಎ (NIA ) ಪ್ರಕರಣಗಳ ವಿಶೇಷ ನ್ಯಾಯಾಲಯ10 ವರ್ಷಗಳ ಸರಳ ಜೈಲು ಶಿಕ್ಷೆಯನ್ನು ಮಂಗಳವಾರ ವಿಧಿಸಿದೆ.

ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಜನವರಿ 26, 2015ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತ ಭೇಟಿ ಕೈಗೊಳ್ಳಲಿದ್ದ ಸಂದರ್ಭದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಭಟ್ಕಳದ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್ ಮತ್ತು ಸದ್ದಾಂ ಹುಸೇನ್‌ಗೆ ಶಿಕ್ಷೆ ವಿಧಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಮೂವರು ಆರೋಪಿಗಳು ಪಾಕಿಸ್ತಾನದ ಸೂಚನೆಗಳನ್ನು ಪಾಲಿಸುತ್ತಿದ್ದರು ಎಂದು ವರದಿಯಾಗಿದೆ. ನ್ಯಾಯಾಲಯ ಅಫಾಕ್‌ಗೆ 1.55 ಲಕ್ಷ ರೂಪಾಯಿ ಮತ್ತು ಸಬೂರ್ ಮತ್ತು ಹುಸೇನ್‌ಗೆ ತಲಾ 95,000 ರೂಪಾಯಿ ದಂಡ ವಿಧಿಸಿದೆ. ಮೂವರಿಗೆ ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಈ ಆದೇಶ ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿಎಂ ಗಂಗಾಧರ, ಸೆಕ್ಷನ್ 428 CrPC ಅಡಿಯಲ್ಲಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜೈಲು ಶಿಕ್ಷೆಗೆ ಪರಿವರ್ತಿಸಬೇಕು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ವಿರುದ್ಧದ ವಿಚಾರಣೆ ಮುಗಿಯುವವರೆಗೂ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು ಆದೇಶ ನೀಡಿದರು.

ಈ ಸಂಬಂಧ ನಗರದ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಸಿಬಿ ಎಸಿಪಿ ತಮ್ಮಯ್ಯ ಎಂಕೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.