Friday, 20th September 2024

Pralhad Joshi: ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ: ರಾಜ್ಯ ಸರ್ಕಾರಕ್ಕೆ ಪ್ರಲ್ಹಾದ್‌ ಜೋಶಿ ಆಗ್ರಹ

Pralhad Joshi

ನವದೆಹಲಿ: ತಿರುಪತಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ (State Government) ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ತಿರುಪತಿ ಪ್ರಸಾದದ (Tirupati Prasadam) ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು ಎಂದು ಸಚಿವರು ತಿಳಿಸಿದರು. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು ಎಂಬ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Mysuru Dasara 2024: ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಈ ಬಾರಿಯ ದಸರಾ ಉದ್ಘಾಟಕರು

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಎಂದು ಸಚಿವರು ಆರೋಪಿಸಿದರು. ಅಷ್ಟೇ ಅಲ್ಲ, ತಿರುಮಲ ತಿರುಪತಿಯ ಟ್ರಸ್ಟ್‌ನಲ್ಲಿ ಜಗನ್ ಮೋಹನ್‌ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ಜೋಶಿ ಆರೋಪಿಸಿದ್ದಾರೆ

ಆಂಧ್ರಪ್ರದೇಶದಲ್ಲಿ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು

ಆಂಧ್ರಪ್ರದೇಶದಲ್ಲಿ ಮತ್ತೆ ಈ ರೀತಿಯ ವಿಚಾರಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸದಾ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲೂ ಎಚ್ಚರ ವಹಿಸಿ

ಆಂಧ್ರಪ್ರದೇಶ ಪ್ರಕರಣದಿಂದ ಕರ್ನಾಟಕ ಸಹ ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನು ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಚಿವ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದು ಎಂದೂ ಸಚಿವ ಪ್ರಲ್ಹಾದ್‌ ಜೋಶಿ ಸರ್ಕಾರಕ್ಕೆ ಆಗ್ರಹಿದ್ದಾರೆ.