Thursday, 12th December 2024

Marriage: ಇವರು ಕೇವಲ 1.5 ಲಕ್ಷ ರೂ.ನಲ್ಲಿ ಮದುವೆ ಮುಗಿಸಿ ಕೊಡ್ತಾರೆ! ಬಡವರಿಗೆ ತಾಳಿಯೂ ಫ್ರೀ!

marriage service

ಮೈಸೂರು: ಇಂದು ರಿಜಿಸ್ಟರ್ಡ್‌ ಮದುವೆಗಳನ್ನು (Marriage) ಹೊರತುಪಡಿಸಿದರೆ, ಬೇರೆ ಯಾವುದೇ ರೀತಿಯಲ್ಲಿ ಮದುವೆ ಆಗುತ್ತೇವೆಂದರೆ ಕನಿಷ್ಠ ಐದಾರು ಲಕ್ಷ ರೂಪಾಯಿ ಚೆಲ್ಲಬೇಕು. ಅದ್ದೂರಿ ಮದುವೆ ಯೋಜಿಸಿದರೆ ಆ ಖರ್ಚಿಗೆ ಮಿತಿಯೇ ಇಲ್ಲ. ಆದರೆ ಬಡವರು ತಮ್ಮ ಜೀವಮಾನದ ಗಳಿಕೆಯನ್ನೆಲ್ಲ ವಿನಿಯೋಗಿಸಿದರೂ ಒಳ್ಳೆಯ ಮದುವೆ ಕಾರ್ಯಕ್ರಮ ಆಯೋಜಿಸುವುದು ಕನಸೇ ಸರಿ. ಈ ಕನಸು ನನಸಾಗಿಸಿಕೊಳ್ಳಲು ಹೋಗಿ ಮೈತುಂಬ ಸಾಲ ಮಾಡುವವರು ಬಹಳ.

ಇಂಥ ಹೊತ್ತಿನಲ್ಲಿ ಇಲ್ಲೊಬ್ಬರು ವ್ಯಕ್ತಿ ಇದ್ದಾರೆ. ಇವರು ಇವೆಂಟ್‌ ಆರ್ಗನೈಸರ್.‌ ನೀವು ಒಂದೂವರೆ ಲಕ್ಷ ರೂಪಾಯಿ ಇವರ ಕೈಗಿಟ್ಟರೆ ಸಾಕು. ಹಾಲ್‌ ಬುಕ್‌ ಮಾಡುವುದರಿಂದ ಹಿಡಿದು ಮದುವೆಯ ಫೋಟೋ ಆಲ್ಬಂ ರೆಡಿ ಮಾಡಿಸಿಕೊಡುವವರೆಗೂ ಇಡೀ ಮದುವೆಯನ್ನು ನೆರವೇರಿಸಿಕೊಡುತ್ತಾರೆ.

ಈ ಪ್ಯಾಕೇಜ್‌ನಲ್ಲಿ ಹಾಲ್ ಬುಕಿಂಗ್‌, ವಾಲಗ, ವೇದಿಕೆ ಡೆಕೋರೇಶನ್‌, ಮದುವೆಗೆ ಆಗಮಿಸಿದ ಅತಿಥಿಗಳ ಊಟದ ಖರ್ಚು ಎಲ್ಲ ಸೇರಿವೆ. ಮದುವೆಯ ಬಳಿಕ ಅದರ ಫೋಟೋ ಆಲ್ಬಂ ಕೂಡ ರೆಡಿ ಮಾಡಿಸಿಕೊಡುತ್ತಾರೆ. ನಂಬಲು ಕಷ್ಟವಾಗುತ್ತಿದೆ ಅಲ್ಲವೇ?

ಹೌದು. ಇವರ ಹೆಸರು ಮೈಸೂರು ಮನೀಶ್.‌ ಮೈಸೂರು ನಗರದಲ್ಲಿ ಇವರು ಈ ಕೆಲಸ ಮಾಡುತ್ತಿದ್ದಾರೆ. “ಕೇವಲ ಒಂದು ಲಕ್ಷದ 50 ಸಾವಿರದಲ್ಲಿ, ಒಂದು ಮದುವೆಯನ್ನು ಸಂಪೂರ್ಣವಾಗಿ ನಾವೇ ವಹಿಸಿಕೊಂಡು ಮಾಡಿಕೊಡಲಾಗುತ್ತದೆ. ಯಾರಾದರೂ ಬಡವರು / ಸರಳವಾಗಿ ಮದುವೆಯಾಗುವವರು ಇದ್ದರೆ ದಯಮಾಡಿ ತಿಳಿಸಿ” ಎನ್ನುತ್ತಾರೆ ಇವರು.

marriage manish

ಈ ಕೆಲಸವನ್ನು ಉದ್ಯಮ ಎಂದಲ್ಲ, ಬದಲಾಗಿ ಸೇವೆ ಎಂದು ತಿಳಿದುಕೊಂಡು ಮಾಡುತ್ತಿದ್ದೇನೆ ಎಂಬುದು ಅವರ ಮಾತು. ಬಡ ಜನತೆಗಾಗಿ, ಕಡಿಮೆ ದರದಲ್ಲಿ ಮದುವೆ ಮಾಡಿಸಲು ಯೋಚಿಸಿರುವ ಪೋಷಕರಿಗಾಗಿ ಅತಿ ಕಡಿಮೆ ದರದಲ್ಲಿ ಈ ಆಯೋಜನೆ ಮಾಡುತ್ತಾರೆ ಇವರು.

ಒಂದೂವರೆ ಲಕ್ಷದಲ್ಲಿ ಏನೆಲ್ಲಾ ಬರುತ್ತದೆ?:

ಒಂದು ದಿನದ ಮಿನಿ ಫಂಕ್ಷನ್‌ ಹಾಲ್‌ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಬುಕ್‌ ಮಾಡಿಕೊಡಲಾಗುತ್ತದೆ. ಬೆಳಗ್ಗೆ 100 ಜನಕ್ಕೆ ತಿಂಡಿ, ಮಧ್ಯಾಹ್ನ 150 ಜನಕ್ಕೆ ಊಟ ರೆಡಿ ಮಾಡಿಕೊಡಲಾಗುತ್ತದೆ. ಫೋಟೋಗ್ರಫಿ ಒಂದು ಆಲ್ಬಂ, ವಿಡಿಯೋಗ್ರಫಿ ಮಾಡಿಕೊಡಲಾಗುತ್ತದೆ.

ಒಂದು ಸುಂದರವಾದ ವೇದಿಕೆಯ ಮೇಲೆ ಡೆಕೊರೇಶನ್‌ ಮಾಡಿಕೊಡಲಾಗುತ್ತದೆ. ನಾದಸ್ವರ ಮತ್ತು ಡೋಲು ಒದಗಿಸಲಾಗುತ್ತದೆ. ಒಬ್ಬರು ಪುರೋಹಿತರು ಲಭ್ಯರಿರುತ್ತಾರೆ. ವಧು ಮತ್ತು ವರ ಬಿಪಿಎಲ್‌ ಕಾರ್ಡ್‌ ಹೊಂದಿದವರಾಗಿದ್ದರೆ, ಚಿನ್ನದ ತಾಳಿಯನ್ನೂ ಇವರೇ ಒದಗಿಸಿಕೊಡುತ್ತಾರೆ. ಜೊತೆಗೆ ವಧು- ವರರಿಗೆ ಸಾಂಪ್ರದಾಯಿಕ ಬಟ್ಟೆ, ಸೀರೆ, ಪೇಟಾ, ಗಾಜಿನ ಬಳೆ, ಛತ್ರಿ, ಅರಶಿನ ಕುಂಕುಮ ನೀಡುತ್ತಾರೆ.

ಕೇವಲ ಒಂದೂವರೆ ಲಕ್ಷ ರೂ.ನಲ್ಲಿ ಈ ರೀತಿ ಸರಳ ಮದುವೆ ಮಾಡಲು ಸಾಧ್ಯವಿದೆ. ನಾನು ಇದನ್ನು ಈಗಾಗಲೇ ಕೆಲವು ವರ್ಷಗಳಿಂದ ಮಾಡುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಕೇವಲ ಒಂದು ಲಕ್ಷ ರೂ.ನಲ್ಲಿ ಮದುವೆ ಮಾಡಿಸುತ್ತಿದ್ದೆ ಎಂದು ಮೈಸೂರು ಮನೀಶ್‌ “ವಿಶ್ವವಾಣಿʼಗೆ ವಿವರಿಸಿದರು.

ಮನೀಶ್‌ ಅವರ ಈ ಸೇವಾರೂಪದ ಕೆಲಸದ ಪ್ರಯೋಜನವನ್ನು ಪಡೆಯಬೇಕೆಂದಿದ್ದರೆ ಸಂಪರ್ಕಿಸಿ: 9342183867