Friday, 22nd November 2024

ಹೆಬ್ಬೆಟ್ಟು ಒತ್ತಿ ಅಧ್ಯಕ್ಷ ಸ್ಥಾನ ಕಳೆದುಕೊಂಡ ಸದಸ್ಯೆ

ಮೈಸೂರು: ಹೆಬ್ಬೆಟ್ಟು ಒತ್ತಿದ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅವಕಾಶವನ್ನೇ ಕಳೆದುಕೊಂಡ ಘಟನೆ ನಂಜನೂಡು ತಾಲೂಕಿನ ಸಿಂದುವಳ್ಳಿಯಲ್ಲಿ ನಡೆದಿದೆ.

ಸಿಂದುವಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 8 ಜನ ಬಿಜೆಪಿ ಬೆಂಬಲಿತ, 7 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೇರಿ ಒಟ್ಟು 15 ಜನ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರೇವಮ್ಮ ನಾಗರಾಜ್ ಸ್ಪರ್ಧೆ ಮಾಡಿದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಲತಾಬಸಪ್ಪ ಸ್ಪರ್ಧೆ ಮಾಡಿದ್ದರು.

ಮತ ಚಲಾಯಿಸುವಾಗ ಮತ ಪತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇವಮ್ಮ ನಾಗರಾಜ್ ಚುನಾವಣೆ ಚಿಹ್ನೆ ಒತ್ತುವ ಬದಲು ಹೆಬ್ಬೆಟ್ಟು ಚಿಹ್ನೆ ಹಾಕಿದ್ದರು. ಈ ಹೆಬ್ಬೆಟ್ಟು ಸಹಿ ಅಸಿಂಧು ಮತ ಎಂದು ತಹಸೀಲ್ದಾರ್ ಮಹೇಶ್ ಕುಮಾರ್ ಸ್ಪಷ್ಟಪಡಿಸಿದರು. ಹೀಗಾಗಿ ಇಬ್ಬರು ಕೂಡ 7 ರಂತೆ ಸಮಮತ ಪಡೆದರು.

ಬಳಿಕ ಲಾಟರಿ ಮೂಲಕ ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿ ಆದರು. ಈ ಮೂಲಕ ಗೆಲ್ಲುವ ಅವಕಾಶವಿದ್ದರೂ ಕೇವಲ ಹೆಬ್ಬೆಟ್ಟು ಹಾಕಿದ ಕಾರಣಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಲನ್ನನು ಭವಿಸಬೇಕಾಯಿತು.