Wednesday, 23rd October 2024

Tirupati train: ಭಕ್ತಾದಿಗಳಿಗೆ ಸಿಹಿ ಸುದ್ದಿ, ಕರಾವಳಿಯಿಂದ ತಿರುಪತಿಗೆ ರೈಲು ಸೇವೆ ವಿಸ್ತರಣೆ

tirupati train

ಉಡುಪಿ: ಕರ್ನಾಟಕದ ಕರಾವಳಿಯಿಂದ ತಿರುಪತಿಗೆ (Tirupati Train) ಭೇಟಿ ನೀಡುವ ಭಕ್ತರಿಗೆ ಸಿಹಿಸುದ್ದಿ ದೊರೆತಿದೆ. ಭಾರತೀಯ ರೈಲ್ವೆ (Indian Railways) ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ.

ಲೋಕಸಭೆ ಚುನಾವಣೆ 2024ರ (Loksabha Election 2024) ಸಂದರ್ಭದಲ್ಲಿ ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ (Ashwini Vaishnav) ಮನವಿ ಸಲ್ಲಿಕೆ ಮಾಡಲಾಗಿತ್ತು. ಕರಾವಳಿ ಭಾಗದ ಜನರ ಈ ಬಹುದಿನದ ಬೇಡಿಕೆಗೆ ಈಗ ಅನುಮೋದನೆ ದೊರೆತಿದೆ. ಈ ಕುರಿತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ಭಕ್ತರು ಈ ರೈಲು ಬಳಸಬಹುದು ಎಂದು ಹೇಳಿದ್ದಾರೆ.

ಸಂಸದರು ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ‘ಈ ವಿಷಯವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಸಂತಸಪಡುತ್ತೇನೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕರಾವಳಿ ಭಾಗದಿಂದ ತಿರುಪತಿಗೆ ಸಂಪರ್ಕಿಸುವ ರೈಲು ಯೋಜನೆಯ ಬಗ್ಗೆ ಬೇಡಿಕೆ ಕೇಳಿ ಬಂದಿತ್ತು.ಸಂಸದನಾದ ನೂರು ದಿನದೊಳಗೆ ಈ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದ್ದೆ. ಈ ಬಗ್ಗೆ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣರವರ ಬಳಿ ವಿಸ್ತೃತವಾದ ವಿವರಣೆಯೊಂದಿಗೆ ಮನವಿ ಸಲ್ಲಿಸಿದ್ದೆ’ ಎಂದು ತಿಳಿಸಿದ್ದಾರೆ.

‘ಇದೀಗ ನಮ್ಮ ಬೇಡಿಕೆ ಈಡೇರಿದೆ. ಇನ್ನುಮುಂದೆ ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ರೈಲು ಬಳಸಬಹುದು. ನಮ್ಮ ಬೇಡಿಕೆಯನ್ನು ಗೌರವಿಸಿ ಆದೇಶ ಹೊರಡಿಸಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಹಾಗೂ ರೈಲ್ವೆ ಇಲಾಖಾ ಅಧಿಕಾರಿಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಇದನ್ನು ಓದಿ: V Somanna: 88.41 ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಕೇಂದ್ರ ಸಚಿವ ಸೋಮಣ್ಣ