ಬೆಂಗಳೂರು : ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಕಡಿದು ಹಾಕಿದ ಆರೋಪದಡಿ ಯಶ್ (Actor Yash) ನಟನೆಯ ʼಟಾಕ್ಸಿಕ್ʼ (Toxic movie) ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಎಚ್‌ಎಂಟಿ (HMT) ವಶದಲ್ಲಿರುವ ಜಮೀನಿನಲ್ಲಿ ನಡೆಯುತ್ತಿದ್ದು, ಈ ವೇಳೆ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಿದೆ. ಸದ್ಯ ಚಿತ್ರದ ನಿರ್ಮಾಪಕರ ವಿರುದ್ಧ ಮರ ಕಡಿದ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ.
“ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar khandre) ಹೇಳಿದ್ದಾರೆ.
ಜಮೀನು ಅರಣ್ಯಾಧಿಕಾರಿಗಳ ವಶಕ್ಕೆ
ಬೆಂಗಳೂರಿನ ಪೀಣ್ಯ- ಜಾಲಹಳ್ಳಿ ಸರ್ವೆ ನಂ.1 ರಲ್ಲಿಎಚ್‌ಎಂಟಿ ವಶದಲ್ಲಿದ್ದ 5 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ಶುಕ್ರವಾರ (ಅಕ್ಟೋಬರ್ 25) ಮರುವಶಕ್ಕೆ ಪಡೆದುಕೊಂಡಿದ್ದರು. ಬೆಂಗಳೂರು ನಗರ ವಲಯದ ಅಧಿಕಾರಿಗಳು ಸಿಬ್ಬಂದಿ ಹಾಗೂ ಜೆಸಿಬಿ ಯಂತ್ರದ ನೆರವಿನೊಂದಿಗೆ ಖಾಲಿ ಜಾಗವನ್ನು ಮರುವಶಪಡಿಸಿಕೊಳ್ಳುವ ಜತೆಗೆ ಅರಣ್ಯ ಇಲಾಖೆಯ ಫಲಕ ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು.
1896 ರ ಮೇ 29 ಹಾಗೂ 1901 ರ ಜನವರಿ 7ರ ಅಧಿಸೂಚನೆಯನ್ವಯ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾಗದ ಈ ಜಮೀನು ‘ಒಮ್ಮೆ ಅರಣ್ಯವಾದುದು ಸದಾಕಾಲ ಅರಣ್ಯ’ ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.
ಆ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದ್ದು, ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮ ಬಾಹಿರವಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಿಂಪಡೆಯಲೂ ಸೂಚನೆ ನೀಡಿದ್ದರು. ಈ ಮಧ್ಯೆ ಎಚ್‌ಎಂಟಿ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯ ಪೈಕಿ 165ಕ್ಕೂ ಹೆಚ್ಚು ಎಕರೆ ಜಮೀನನ್ನು ಕೇವಲ 300 ಕೋಟಿ ರೂ.ಗೆ ಖಾಸಗಿ ಮತ್ತು ಸರಕಾರದ ನಾನಾ ಸಂಸ್ಥೆಗಳಿಗೆ ಮಾರಾಟ ಮಾಡಿತ್ತು.
ಈ ಭೂಮಿಯನ್ನು ವಶಕ್ಕೆ ಪಡೆದು ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಂತಹ ಬೃಹತ್ ಉದ್ಯಾನ ಇಲ್ಲವೇ ಉತ್ತರ ಬೆಂಗಳೂರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಆ ಭಾಗದ ಜನರಿಗೆ ಹಸಿರು ವಲಯ ಸೃಷ್ಟಿಸುವ ಆಶಯ ಈಶ್ವರ ಖಂಡ್ರೆ ಅವರದ್ದು. ಐದು ಎಕರೆ ಭೂಮಿ ಮರುವಶದ ಮೂಲಕ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಂತೆ ಕಾಣುತ್ತಿದೆ.
ಇದನ್ನೂ ಓದಿ: Yash’s Toxic: ಯಶ್ ‘ಟಾಕ್ಸಿಕ್’ಗೆ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ ಸೇರ್ಪಡೆ; ಹೆಚ್ಚಿದ ಕುತೂಹಲ