ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಮಹಿಳೆ ಹಾಗೂ ಆಕೆಯ ಮಗಳಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಪಾತಕಿತಯೊಬ್ಬ, ಸಂತೆಯಿಂದ ಮಚ್ಚು ಖರೀದಿಸಿ ತಂದು ಮೂವರನ್ನು (Triple Murder Case) ಕೊಚ್ಚಿ ಕೊಂದ ಬರ್ಬರ ಘಟನೆ ಬೆಂಗಳೂರಿನಲ್ಲಿ (Bengaluru Crime news) ನಡೆದಿದೆ.
ನಗರದ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕರಾಳ ಕೃತ್ಯ ನಡೆದಿದೆ. ಕೊಲೆ ಮಾಡಿದ ಆರೋಪಿ ಗಂಗರಾಜು ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆ ಹಾಗೂ ಶರಣಾಗತಿಗೆ ಈತ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಎಂದು ಗೊತ್ತಾಗಿದೆ.
ಕೊಲೆಗಾರ ಗಂಗರಾಜು ಹಾಗೂ ಮೃತಪಟ್ಟ ಭಾಗ್ಯಮ್ಮ ಲಿವ್ ಇನ್ ರಿಲೇಶನ್ಶಿಪ್ ಹೊಂದಿದ್ದರು. ಇಬ್ಬರೂ ತಮ್ಮ ಮೊದಲ ಪತ್ನಿ ಹಾಗೂ ಮೊದಲ ಪತಿಗೆ ವಿಚ್ಛೇದನ ನೀಡದೆ ಈ ಸಂಬಂಧ ಇಟ್ಟುಕೊಂಡಿದ್ದರು. ಭಾಗ್ಯಮ್ಮಗೆ ಒಬ್ಬಳು ಮಗಳಿದ್ದಾಳೆ. ಆದರೆ ಇತ್ತೀಚೆಗೆ ಭಾಗ್ಯಮ್ಮ ಹಾಗೂ ಆಕೆಯ ಮಗಳ ಸಂಶಯಪಿಶಾಚಿ ಗಂಗರಾಜು ಅನುಮಾನ ಹೊಂದಿದ್ದ. ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಈತ ಸಂಶಯಪಟ್ಟಿದ್ದ.
ಇತ್ತೀಚೆಗೆ ಮನೆಗೆ ಬಂದಿದ್ದ ಭಾಗ್ಯಮ್ಮನ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ ಹೆಸರಘಟ್ಟಕ್ಕೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ ರೈತರು ಬಳಸುವ ಹರಿತವಾದ ಮಚ್ಚು ಖರೀದಿ ಮಾಡಿದ್ದ. ಬಳಿಕ ಮೂವರನ್ನು ಕೊಲೆ ಮಾಡಿ ಶರಣಾಗತಿಗೆ ಪ್ಲಾನ್ ಕೂಡಾ ಮಾಡಿಕೊಂಡಿದ್ದ.
ಪತ್ನಿ ಮನೆಯಲ್ಲಿ ಇಲ್ಲದ್ದನ್ನು ಮೊದಲೇ ತಿಳಿದಿದ್ದ ಆರೋಪಿ ಒಬ್ಬೊಬ್ಬರನ್ನೇ ಕೊಲೆ ಮಾಡಲು ಸಂಚು ಹೂಡಿದ್ದ. ಸಂತೆಯಿಂದ ಮನೆಗೆ ಬರುತ್ತಿದ್ದಂತೆಯೇ ಮತ್ತೆ ಗಲಾಟೆ ತೆಗೆದು ಮೊದಲು ಮಲ ಮಗಳಾದ ನವ್ಯಾಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಬಳಿಕ ಅಡ್ಡ ಬಂದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿ ಇಬ್ಬರ ರುಂಡ ಮುಂಡ ಬೇರ್ಪಡಿಸಿದ್ದಾನೆ. ನಂತರ ಮನೆಯಲ್ಲಿ ಭಾಗ್ಯಮ್ಮಗಾಗಿ ಹೊಂಚು ಹಾಕಿ ಕುಳಿತಿದ್ದು, ಆಗಮಿಸಿದ ಪತ್ನಿಯ ಮೇಲೆ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾನೆ.
ಆರೋಪಿಯು ಆರು ವರ್ಷಗಳಿಂದ ಮೃತಳ ಜೊತೆಗೆ ಇದ್ದ. ಆಕೆಯ ಮೇಲಿನ ಅನುಮಾನದಿಂದಲೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.