ಉಡುಪಿ: ಮೀನುಗಾರಿಕೆಗೆ ತೆರಳಿದ ʼಥವಕಲ್ʼ ಹೆಸರಿನ ಬೋಟ್ ಮುಳುಗಿದ್ದು, ಅದೃಷ್ಟವಶಾತ್ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗೊಳ್ಳಿಯಿಂದ ಆಳ ಸಮುದ್ರದ ಕಡೆಗೆ ಮೀನುಗಾರಿಕೆಗಾಗಿ ಬೋಟ್ ತೆರಳಿತ್ತು ಎನ್ನಲಾಗಿದೆ. ಗಂಗೊಳ್ಳಿಯಿಂದ 10 ನಾಟಿ ಕಲ್ ದೂರದಲ್ಲಿ ಈ ಘಟನೆ ನಡೆದಿದೆ (Udupi Boat Capsize).
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಥವಕಲ್ ಹೆಸರಿನ ಬೋಟ್ ಮುಳುಗಿದ್ದು, ಮೀನುಗಾರರನ್ನು ಮತ್ತೊಂದು ಬೋಟ್ನ ಮೀನುಗಾರರು ರಕ್ಷಿಸಿದ್ದಾರೆ. ಪ್ರಾಣಾಪಾಯದಲ್ಲಿದ್ದ ಮೀನುಗಾರರು ಅದೃಷ್ಟವಶಾತ್ ಬಚಾವಾಗಿದ್ದಾರೆ ಎಂಬ ಮಾಹಿತಿಯಿದೆ. ಬೋಟ್ ಮುಳುಗಡೆಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಹಡಗು ಮುಳುಗಿ ಅಪಾಯಕ್ಕೆ ಸಿಲುಕಿದ 12 ಭಾರತೀಯ ಸಿಬ್ಬಂದಿ
ಕಳೆದ ತಿಂಗಳಷ್ಟೇ ಗುಜರಾತ್ನ ಪೋರ್ಬಂದರ್ನಿಂದ ಇರಾನ್ನ ಅಬ್ಬಾಸ್ ಬಂದರಿನತ್ತ ಸಾಗುತ್ತಿದ್ದ ವಾಣಿಜ್ಯ ಹಡಗೊಂದು ಮುಳುಗಿತ್ತು. 12 ಭಾರತೀಯ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನು ಪಾಕಿಸ್ತಾನದ ನೆರವಿನೊಂದಿಗೆ ಭಾರತೀಯ ಕರಾವಳಿ ಪಡೆ (ಐಸಿಜಿ) ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಉತ್ತರ ಅರಬ್ಬೀ ಸಮುದ್ರದಲ್ಲಿ ಭಾರತದ ಸಾಗರ ವ್ಯಾಪ್ತಿಯ ಹೊರಗೆ ಪಾಕಿಸ್ತಾನದ ಸಾಗರ ವಲಯದಲ್ಲಿ ‘ಎಂಎಸ್ವಿ ಅಲ್ ಪಿರನ್ಪಿರ್’ ಎಂಬ ಹಡಗು ಮುಳುಗಡೆಯಾಗಿತ್ತು. ಈ ವೇಳೆ 12 ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿದ್ದು, ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಬಳಿಕ ಪಾಕಿಸ್ತಾನದ ಸಾಗರ ಭದ್ರತಾ ಪಡೆ(ಪಿಎಂಎಸ್ಎ) ಸಹಯೋಗದಲ್ಲಿ ಭಾರತೀಯ ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಡಿಸೆಂಬರ್ 4ರಂದು ಹಡಗು ಮುಳುಗಿದ್ದು, ಭಾರತೀಯ ಕರಾವಳಿ ಪಡೆಯ ‘ಸಾರ್ತಕ್’ ಹಡಗಿನ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಭಾರತೀಯ ಕರಾವಳಿ ಪಡೆ ತಿಳಿಸಿತ್ತು. ಡಿಸೆಂಬರ್ 2ರಂದು ವಾಣಿಜ್ಯ ಹಡಗು ಸರಕುಗಳೊಂದಿಗೆ ಪೋರ್ಬಂದರ್ನಿಂದ ಇರಾನ್ನತ್ತ ಹೊರಟಿತ್ತು. ಸಾಗರದ ಪ್ರಕ್ಷುಬ್ಧತೆ ಮತ್ತು ಪ್ರವಾಹಕ್ಕೆ ಸಿಲುಕಿ ಹಡಗು ಡಿಸೆಂರ್ 4ರ ಬೆಳಗ್ಗೆ ಮುಳುಗಡೆಗೊಂಡಿತ್ತು. 12 ಸಿಬ್ಬಂದಿಗಳನ್ನು ರಕ್ಷಿಸಿದ್ದು, ಈಗ ಎಲ್ಲರೂ ಆರೋಗ್ಯವಾಗಿದ್ದಾರೆ ಅವರನ್ನು ಪೋರ್ಬಂದರ್ ನ ಬಂದರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಐಸಿಜಿ ತಿಳಿಸಿತ್ತು. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸಾಗರ ಭದ್ರತಾ ಪಡೆಯ ವಿಮಾನ ಹಾಗೂ ಎಂವಿ ಕಾಸ್ಕೊ ಗ್ಲೋರಿ ಹಡಗು ನೆರವಿಗೆ ಬಂದಿದೆ ಎಂಬ ಮಾಹಿತಿಯಿತ್ತು.
ಮೀನುಗಾರಿಕಾ ದೋಣಿ ಡಿಕ್ಕಿ; ಇಬ್ಬರು ದಾರುಣ ಸಾವು
ಇತ್ತೀಚೆಗಷ್ಟೇ ಗೋವಾ (Goa) ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ(Submarine) ಐಎನ್ಎಸ್ ಕಾರಂಜ್ (INS Karanj) ಮತ್ತು ಮೀನುಗಾರಿಕಾ ದೋಣಿ ನಡುವೆ ಡಿಕ್ಕಿ ಸಂಭವಿಸಿತ್ತು. ಪರಿಣಾಮ ಇಬ್ಬರು ಮೀನುಗಾರರು ದಾರುಣವಾಗಿ ಸಾವನ್ನಪ್ಪಿದ್ದರು. ಜಲಾಂತರ್ಗಾಮಿ ನೌಕೆಗೆ ಕೋಟ್ಯಂತರ ಮೌಲ್ಯದ ಹಾನಿ ಸಂಭವಿಸಿತ್ತು.
ಈ ಸುದ್ದಿಯನ್ನೂ ಓದಿ:Udit Narayan: ಗಾಯಕ ಉದಿತ್ ನಾರಾಯಣ್ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ; ಓರ್ವ ಬಲಿ