Wednesday, 18th December 2024

UI movie: ಉಪೇಂದ್ರ ನಟನೆಯ ಯುಐ ಚಿತ್ರ ಡಿ.20ರಂದು ವಿಶ್ವಾದ್ಯಂತ 2000 ತೆರೆಗಳಲ್ಲಿ ಬಿಡುಗಡೆ

UI movie

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ʼUIʼ ಚಿತ್ರ (UI movie) ಡಿಸೆಂಬರ್ 20ರಂದು ಪ್ರಪಂಚದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.

ಒಂಬತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಡಿಸೆಂಬರ್ 20ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

ಡಬಲ್‌ ಕ್ಲೈಮ್ಯಾಕ್ಸ್‌ ಇಲ್ಲ

ಯುಐ ಸಿನಿಮಾದಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಒಂದು ರೀತಿಯ ಕ್ಲೈಮ್ಯಾಕ್ಸ್‌, ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಇನ್ನೊಂದು ರೀತಿಯ ಕ್ಲೈಮ್ಯಾಕ್ಸ್‌ ಇರಲಿದೆ. ಈ ರೀತಿ ಎರಡು ಬಗೆಯ ಕ್ಲೈಮ್ಯಾಕ್ಸ್‌ ಅನ್ನು ಬೇರೆಬೇರೆ ಚಿತ್ರಮಂದಿರಗಳಲ್ಲಿ ತೋರಿಸಲಾಗುತ್ತದೆ. ಒಂದು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು, ಇನ್ನೊಂದು ಕ್ಲೈಮ್ಯಾಕ್ಸ್‌ ಇರುವ ಇನ್ನೊಂದು ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವಂತೆ ಇದು ಮಾಡಲಿದೆ ಎಂದು ವದಂತಿ ಹಬ್ಬಿತ್ತು. ಆದರೆ, ಈ ರೀತಿ ಎರಡು ರೀತಿಯ ಕ್ಲೈಮ್ಯಾಕ್ಸ್‌ ಇಲ್ಲ ಎಂದು ಸ್ವತಃ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.

ಉಪೇಂದ್ರ ಅವರು ತಮ್ಮ ‘ಯುಐ’ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗೆ ಹೈದರಾಬಾದ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಿನಿಮಾದ ಕುರಿತು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಯುಐ ಸಿನಿಮಾದ ಮೊದಲ ಸೀನ್‌ ಶಾಕ್‌ ನೀಡುವಂತಿದೆ. ನನ್ನ ಸಿನಿಮಾದ ಕಥೆ ತುಂಬಾ ವಿಶೇಷವಾಗಿದೆ. ಸಿನಿಮಾದ ಕಥೆಯೇನು ಎಂದು ವೀಕ್ಷಕರು ಡಿಕೋಡ್‌ ಮಾಡಬಹುದು. ಈ ಸಿನಿಮಾದ ಮೊತ್ತಮೊದಲ ಸೀನ್‌ ಖಂಡಿತವಾಗಿಯೂ ಅಭಿಮಾನಿಗಳಿಗೆ ಶಾಕಿಂಗ್‌ ಆಗಿರಲಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಯುಐಡಿಎಐ ಆದಾಯಕ್ಕೆ ಹಣಕಾಸು ಸಚಿವಾಲಯ ವಿನಾಯಿತಿ