ಬೆಂಗಳೂರು: ಯಾರನ್ನು ಕಂಡರೆ ಯಾರಿಗೆ ಭಯ? ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೇ? ಅವರೇನು ದೆವ್ವ ಅಲ್ಲವಲ್ಲಾ! ಅವರೆಂದರೆ ನಾನು ಯಾಕೆ ಭಯಪಡಲಿ? ಇಷ್ಟಕ್ಕೂ ನಾನು ದೆವ್ವಕ್ಕೂ ಹೆದರಲ್ಲ. ಇದು ಸಿದ್ದರಾಮಯ್ಯಗೆ (Siddaramaiah) ಗೊತ್ತಿರಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಹೆದರಿಸೋಕೆ ಯಾರಿಂದಲೂ ಆಗಲ್ಲ. ನಾನು ಯಾರಿಗೂ ಹೆದರಲ್ಲ. ಹೆದರೋದು ದೇವರಿಗೆ ಮತ್ತು ನಾಡಿನ ಜನರಿಗಷ್ಟೇ. ಸಿದ್ದರಾಮಯ್ಯನಂಥವರು ಲಕ್ಷ ಜನ ಬರಲಿ, ನಾನು ಹೆದರಲ್ಲ. ಹೆದರೋದು ನನ್ನ ಬೆಳೆಸಿರುವ ನಾಡಿನ ಜನಕ್ಕೆ. ಇಂತಹ ಸಿದ್ದರಾಮಯ್ಯಗೆ ನಾನು ಹೆದರುತ್ತೀನಾ ಎಂದು ಸಚಿವರು ತಿರುಗೇಟು ನೀಡಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಪಿಎಂ ಕಿಸಾನ್ ಸಮ್ಮಾನ್; ರಾಜ್ಯದ 47.12 ಲಕ್ಷ ರೈತರಿಗೆ 942 ಕೋಟಿ ರೂ.
ನಾನು ರಾಜಕೀಯದಲ್ಲಿ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ? ಸ್ವತಃ ದುಡಿಮೆ ಮೇಲೆ, ಕಾರ್ಯಕರ್ತರು, ಜನರ ಆಶೀರ್ವಾದದಿಂದ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಸ್ವತಃ ದುಡಿಮೆ ಮೇಲೆ ಬಂದಿದ್ದೇನೆ. ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು. ನನ್ನ ಹೆದರಿಸುವುದಕ್ಕೆ ಆಗುತ್ತಾ? ಎಂದು ಕಿಡಿಕಾರಿದರು
ಅದು ಯಾವುದೋ ಕೇಸ್ ಹಾಕಿಕೊಂಡು ನನ್ನ ಹೆದರಿಸೋಕೆ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿಗೆ ಬಂಧನದ ಭೀತಿ ಹೇಳುತ್ತಿದ್ದಾರೆ. ನನಗೆ ಅಂತಹ ಯಾವುದೇ ಭೀತಿಯೂ ಇಲ್ಲ ಎಂದರು.
ನನ್ನ ಹತ್ತಿರ ಇವರದ್ದು ಏನೂ ನಡೆಯಲ್ಲ
ಐದು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿಗೆ ಯಾವ ತರ ರಾಜಕಾರಣ ಇದೆ ನೋಡಿ. ಯಾರು ಯಾರು ಯಾವ ಹೇಳಿಕೆ ಕೊಡ್ತಾರೆ. ಆ ಹೇಳಿಕೆ ಮೇಲೆ ನೀವು ತೀರ್ಮಾನಕ್ಕೆ ಬನ್ನಿ. ಇಲ್ಲಿ ಕುಮಾರಸ್ವಾಮಿ ಹತ್ತಿರ ಇವರದ್ದು, ಯಾರದ್ದು ಏನು ನಡೆಯಲ್ಲ ಎಂದರು.
ಕಾಲವೇ ಉತ್ತರ ಕೊಡುತ್ತೆ
ಎಫ್ಐಆರ್ ಮಾಡಿ ಬೆದರಿಸುವ ತಂತ್ರವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆದರಿಕೆ ಅಲ್ಲದೆ ಇನ್ನೇನು? ಏನಿದೆ ಎಫ್ಐಆರ್ನಲ್ಲಿ? ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನವಶ್ಯಕ. ಕಾಲವೇ ನಿರ್ಧಾರ ಮಾಡುತ್ತದೆ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡುತ್ತದೆ ಎಂದು ಕಿಡಿಕಾರಿದರು.
ಈ ಸುದ್ದಿಯನ್ನೂ ಓದಿ | Jollywood: ಜಾಲಿವುಡ್ ಸ್ಟುಡಿಯೋ, ಅಡ್ವೆಂಚರ್ಸ್ಗೆ ಮೊದಲ ವಾರ್ಷಿಕೋತ್ಸವದ ಸಂಭ್ರಮ
ಭಂಡ ಸರ್ಕಾರ ಇದು
ಮುಡಾ ವಿಚಾರ ಡೈವರ್ಟ್ ಮಾಡಲು ಎಫ್ಐಆರ್ ಹಾಕಲಾಗಿದೀಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದೂ ಡೈವರ್ಟ್ ಮಾಡಲಿಕ್ಕೆ ನಡೆಯುತ್ತಿರೋದು. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಭಂಡ ಸರ್ಕಾರ ಇದು. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವುದು ಅರ್ಥ ಇಲ್ಲ. ಅದರಿಂದ ನಾನು ಹೇಳ್ತಾ ಇರೋದು. ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಕಾಲವೇ ಉತ್ತರ ನೀಡುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.