Saturday, 14th December 2024

Pralhad Joshi: ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಹೆಜ್ಜೆ; 35 ರೂ. ದರದಲ್ಲಿ ವಿತರಣೆ ಆರಂಭ: ಪ್ರಲ್ಹಾದ್‌ ಜೋಶಿ

Pralhad Joshi

ನವದೆಹಲಿ: ದೇಶದ ಮಾರುಕಟ್ಟೆಯಲ್ಲಿ ಕಣ್ಣೀರು ತರಿಸುವಂತಿರುವ ಈರುಳ್ಳಿ (Onion) ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ (Central Government) ಮಹತ್ತರ ಹೆಜ್ಜೆ ಇಟ್ಟಿದ್ದು, ಗ್ರಾಹಕರ ಕೈಗೆಟುಕುವಂತೆ ಕೇವಲ 35 ರೂ. ಕೆಜಿ ದರದಲ್ಲಿ ವಿತರಣೆ ಆರಂಭಿಸಿದೆ.

ನವದೆಹಲಿಯಲ್ಲಿ ಇಂದು ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು 35 ರೂ. ಕೆಜಿ ಬೆಲೆಯಲ್ಲಿ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಈ ಸುದ್ದಿಯನ್ನೂ ಓದಿ | Muda Scam: ಮುಡಾ ಹಗರಣದಲ್ಲಿ ಕಾನೂನು ಉಲ್ಲಂಘನೆ ಆಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ: ಬೊಮ್ಮಾಯಿ

ಈ ವೇಳೆ ಮಾತನಾಡಿದ ಸಚಿವರು, ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ. ಅಂತೆಯೇ ಈಗ ತೀವ್ರ ಏರಿಕೆ ಕಂಡ ಈರುಳ್ಳಿ ದರ ಇಳಿಕೆಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ದೇಶಾದ್ಯಂತ 35 ರೂ. ದರದಲ್ಲಿ ವಿತರಣೆಗೆ ಕ್ರಮ

ತೀವ್ರ ಬೆಲೆ ಏರಿಕೆಯಲ್ಲಿರುವ ಈರುಳ್ಳಿಯನ್ನು ದೇಶಾದ್ಯಂತ 35 ರೂ. ದರದಲ್ಲಿ ಚಿಲ್ಲರೆ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಈರುಳ್ಳಿ ಮಾರಾಟದ ಸಂಚಾರಿ ವಾಹನಗಳಿಗೆ ಚಾಲನೆ ನೀಡಿದ್ದಾಗಿ ತಿಳಿಸಿದರು.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮುಂದಿನವಾರ ವಿತರಣೆ

ದೆಹಲಿಯ ಎನ್‌ಸಿಆರ್ ಮತ್ತು ಮುಂಬೈನಲ್ಲಿ ಇಂದಿನಿಂದ ಈರುಳ್ಳಿ ಚಿಲ್ಲರೆ ವಿತರಣೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಬೆಂಗಳೂರು ಸೇರಿದಂತೆ ಕೋಲ್ಕತ್ತಾ, ಗುವಾಹಟಿ, ಹೈದರಾಬಾದ್, ಚೆನ್ನೈ, ಅಹಮದಾಬಾದ್, ರಾಯಪುರ ಮತ್ತು ಭುವನೇಶ್ವರದಲ್ಲಿ ಕಡಿಮೆ ಬೆಲೆಯಲ್ಲಿ ಈರುಳ್ಳಿ ವಿತರಣೆ ಶುರುವಾಗಲಿದೆ. ಸೆಪ್ಟೆಂಬರ್ 3ನೇ ವಾರದಲ್ಲಿ ದೇಶಾದ್ಯಂತ ವಿತರಣೆ ಅಗಲಿದೆ ಎಂದು ತಿಳಿಸಿದರು.

4.7 ಲಕ್ಷ ಟನ್ ಈರುಳ್ಳಿ ಲಭ್ಯ

ಹಿಂಗಾರು ಹಂಗಾಮಿನಲ್ಲಿ ಬೆಳೆದ 4.7 ಲಕ್ಷ ಟನ್ ಈರುಳ್ಳಿ ಸದ್ಯ ನಮ್ಮಲ್ಲಿ ಸಂಗ್ರಹವಿದ್ದು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್‌) ಮತ್ತು ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್‌ಎಎಫ್‌ಇಡಿ) ಮಳಿಗೆಗಳು ಮತ್ತು ಸಂಚಾರಿ ವಾಹನಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈರುಳ್ಳಿ ಬೆಲೆ ಪ್ರವೃತ್ತಿಗೆ ಅನುಗುಣವಾಗಿ ಈರುಳ್ಳಿಯ ಪ್ರಮಾಣ ಮತ್ತು ವಿಲೇವಾರಿ ಮಾರ್ಗಗಳನ್ನು ವಿಸ್ತರಿಸಲಾಗುತ್ತದೆ. ಗ್ರಾಹಕ ವ್ಯವಹಾರಗಳ ಇಲಾಖೆ, ದೇಶಾದ್ಯಂತ 550 ಕೇಂದ್ರಗಳು ವರದಿ ಮಾಡಿದ ಈರುಳ್ಳಿ ಸೇರಿದಂತೆ 38 ಸರಕುಗಳ ದೈನಂದಿನ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದರು.

ಕಳೆದ ವರ್ಷ 3 ಲಕ್ಷ ಟನ್ ಈರುಳ್ಳಿ ಖರೀದಿಸಿದ್ದರೆ, ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಅದಕ್ಕಿಂತ ಹೆಚ್ಚು 4.7 ಲಕ್ಷ ಟನ್‌ ಖರೀದಿಸಿ ಬೆಲೆ ಸ್ಥಿರೀಕರಿಸಿರುವುದು ಗಮನಾರ್ಹ ಎಂದರು.

ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ರೈತರು ಮತ್ತು ರೈತ ಸಂಘಗಳಿಂದ ಈರುಳ್ಳಿ ಖರೀದಿಸಲಾಗಿದೆ ಮತ್ತು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಹಣ ಪಾವತಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ ವರ್ಷದ 693 ರಿಂದ 1,205 ರೂ. ಕ್ವಿಂಟಲ್‌ನಂತೆ ಖರೀದಿಸಿದ್ದರೆ ಈ ಬಾರಿ 1,230 ರಿಂದ 2,578 ರೂ. ದರ ನೀಡಿ ಖರೀದಿಸಲಾಗಿದೆ ಎಂದರು.

ಈ ಬಾರಿ ಮುಂಗಾರಿನಲ್ಲಿ ಈರುಳ್ಳಿ ಬಿತ್ತನೆ ಪ್ರದೇಶ ಹೆಚ್ಚಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.102 ರಷ್ಟು ಹೆಚ್ಚು ಬಿತ್ತನೆಯಾಗಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಈರುಳ್ಳಿ ಲಭ್ಯತೆ ಮತ್ತು ಬೆಲೆ ಸಕಾರಾತ್ಮಕವಾಗಿರುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಕೃಷಿ ಇಲಾಖೆ ಮಾಹಿತಿಯಂತೆ 2024ರ ಆಗಸ್ಟ್ 26 ರವರೆಗೆ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಖಾರಿಫ್ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು ಎಂದರು.

ಈ ಸುದ್ದಿಯನ್ನೂ ಓದಿ | Reliance Jio: ರಿಲಯನ್ಸ್ ಜಿಯೊ ವಾರ್ಷಿಕೋತ್ಸವ ಆಫರ್; ಆಯ್ದ ರೀಚಾರ್ಜ್‌ ಮೇಲೆ 700 ರೂ. ಮೌಲ್ಯದ ಬೆನಿಫಿಟ್‌

ರೈತರು, ವರ್ತಕರಲ್ಲಿದೆ ಇನ್ನೂ 38 ಲಕ್ಷ ಟನ್

ದೇಶದಲ್ಲಿ ರೈತರು ಮತ್ತು ವರ್ತಕರಲ್ಲಿ ಸುಮಾರು 38 ಲಕ್ಷ ಟನ್ ಈರುಳ್ಳಿ ಇನ್ನೂ ಸಂಗ್ರಹವಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಈರುಳ್ಳಿಯ ಲಭ್ಯತೆ ಮತ್ತು ಬೆಲೆಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಹೇಳಿದರು.