ಬೆಂಗಳೂರು: ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ʼಅನ್ಲಾಕ್ ರಾಘವʼ ಚಿತ್ರಕ್ಕಾಗಿ (Unlock Raghava Movie) ಪ್ರಮೋದ್ ಮರವಂತೆ ಬರೆದಿರುವ, ಅನೂಪ್ ಸೀಳಿನ್ ಸಂಗೀತ ನೀಡಿರುವ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ʼಲಾಕ್ ಲಾಕ್ʼ ಹಾಡು ಇತ್ತೀಚಿಗೆ ಶಿವಮೊಗ್ಗದ ಭಾರತ್ ಸಿನಿಮಾಸ್ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸಹಸ್ರಾರು ಕನ್ನಡ ಕಲಾಭಿಮಾನಿಗಳು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಹಾಡು ಬಿಡುಗಡೆಗೂ ಮುನ್ನ ಚಿತ್ರತಂಡದವರು ಬೆಂಗಳೂರಿನಲ್ಲಿ ಹಾಡಿನ ಕುರಿತು ಮಾತನಾಡಿದರು.
ಈ ಹಾಡಿನಲ್ಲಿ ನೋಡಿರುವ ಎನರ್ಜಿ ಇಡೀ ಸಿನಿಮಾದಲ್ಲಿ ಇದೆ ಎಂದು ಮಾತನಾಡಿದ ನಿರ್ದೇಶಕ ದೀಪಕ್ ಮಧುವನಹಳ್ಳಿ, ನಮ್ಮ ಚಿತ್ರದಲ್ಲಿ ಕಂಪೋಸ್ ಆದ ಮೊದಲ ಹಾಡು ಇದು. ಆದರೆ, ಲಾಸ್ಟ್ ವಾಯ್ಸ್ ಮಿಕ್ಸಿಂಗ್ ಆದ ಹಾಡು ಕೂಡ ಇದು. ಚಿತ್ರದ ಶೀರ್ಷಿಕೆ ಗೀತೆಯೂ ಹೌದು. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸೊಗಸಾಗಿ ಹಾಡಿದ್ದಾರೆ. ಅಷ್ಟೇ ಸೊಗಸಾಗಿ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಫೆಬ್ರವರಿ 7 ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು.
ನನಗೆ ನಿರ್ದೇಶಕರು ಮೊದಲ ಸಲ ಕಾರಿನಲ್ಲಿ ಈ ಹಾಡು ಕೇಳಿಸಿದರು. ಹಾಡು ಕೇಳಿ ಬಹಳ ಖುಷಿಯಾಯಿತು. ಆನಂತರ ಮುರಳಿ ಮಾಸ್ಟರ್ ಜತೆಗೆ ಚರ್ಚೆ ಮಾಡಿ, ಹಾಡಿಗೆ ಹೆಜ್ಜೆ ಹಾಕಿದೆ. ಇದು ನನ್ನನ್ನು ಚಿತ್ರದಲ್ಲಿ ಪರಿಚಯಿಸುವ ಗೀತೆ ಕೂಡ. ಚಿತ್ರದ ಮೂರು ಹಾಡುಗಳಲ್ಲಿ ನನ್ನಗಿಷ್ಟವಾದ ಹಾಡು ಇದು. ಸುಂದರ ಹಾಡು ಕೊಟ್ಟ ಪ್ರಮೋದ್ ಮರವಂತೆ ಅವರಿಗೆ, ಸಂಗೀತ ಅನೂಪ್ ಸೀಳಿನ್ ಅವರಿಗೆ ಧನ್ಯವಾದ. ನನ್ನ ಮೊದಲ ಚಿತ್ರದ ಮೊದಲ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿರುವುದು ಹೆಚ್ಚು ಖುಷಿಯಾಗಿದೆ ಎಂದರು ನಾಯಕ ಮಿಲಿಂದ್.
ಈ ಹಾಡನ್ನು ಸೆಟ್ನಲ್ಲಿ ಮಾಡುವ ಯೋಚನೆಯಿತ್ತು. ಆದರೆ ಮುರಳಿ ಮಾಸ್ಟರ್, ಡೆಸ್ಟಿನೊ ರೆಸಾರ್ಟ್ನ ಕುರಿತು ಹೇಳಿದರು. ಆ ಜಾಗ ಈ ಹಾಡಿಗೆ ಸೂಕ್ತವೆನಿಸಿತು. ಹಾಡು ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ನಾವು ಮೂಲತಃ ಶಿವಮೊಗ್ಗದವರು. ನಮ್ಮೂರಿನಲ್ಲೇ ಈ ಹಾಡು ಬಿಡುಗಡೆಯಾಗಿದ್ದು ಸಂತೋಷವಾಗಿದೆ. ನಾನು ಹಾಗೂ ಗಿರೀಶ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ನನ್ನ ಮಗ ಮಿಲಿಂದ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ರೆಚೆಲ್ ಡೇವಿಡ್ ನಾಯಕಿಯಾಗಿ ನಟಿಸಿದ್ದಾರೆ. ಡಿ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಲವಿತ್ ಛಾಯಾಗ್ರಹಣ, ಅಜಯ್ ಕುಮಾರ್ ಸಂಕಲನ ʼಅನ್ಲಾಕ್ ರಾಘವʼ ಚಿತ್ರಕ್ಕಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್ ದಾಸೇಗೌಡ.
ಈ ಸುದ್ದಿಯನ್ನೂ ಓದಿ | Winter Mix Match Fashion 2025: ಬದಲಾಗಿದೆ 2025ರ ಚಳಿಗಾಲದ ಮಿಕ್ಸ್ ಮ್ಯಾಚ್ ಫ್ಯಾಷನ್
ಇದು ಮಿಲಿಂದ್ ಅವರ ಮೊದಲ ಚಿತ್ರ ಅನಿಸುವುದಿಲ್ಲ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಮೂರು ದಿನಗಳ ಕಾಲ ಚಿತ್ರೀಕರಣವಾಗಿದೆ ಎಂದು ನೃತ್ಯ ನಿರ್ದೇಶಕ ಮುರಳಿ ತಿಳಿಸಿದರು.