Thursday, 28th November 2024

ಮದ್ಯದಂಗಡಿ ತೆರೆಯದಂತೆ ಒತ್ತಾಯ

ವೈ.ಎನ್.ಹೊಸಕೋಟೆ : ಗ್ರಾಮದ ಬೆಸ್ತರಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮದ್ಯದಂಗಡಿಯನ್ನು ತೆರೆಯದಂತೆ ಸಾರ್ವಜನಿಕರು ಜಿಲ್ಲಾ ಅಬಕಾರಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಮದ್ಯದಂಗಡಿಯ ಕಟ್ಟಡ ಪರಿಶೀಲಿಸಲು ಮಂಗಳವಾರ ಜಿಲ್ಲಾ ಅಬಕಾರಿ ಅಧಿಕಾರಿಗಳ ತಂಡ ಬಂದಿದ್ದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಮದಿಂದ ಆಂಧ್ರಪ್ರದೇಶದ ಗಡಿಭಾಗ 2-3 ಕಿ.ಮೀ ಅಂತರದಲ್ಲಿದ್ದು, ಗ್ರಾಮೀಣರ ಜೊತೆಗೆ ಆಂಧ್ರಿಗ ಗಿರಾಕಿಗಳಿಂದ ಹೆಚ್ಚಿನ ವ್ಯಾಪಾರ ಮಾಡಬಹುದು ಎಂಬ ಚಿಂತನೆಯಲ್ಲಿ ಜಿಲ್ಲೆಯ ಮತ್ತೊಂದು ಪ್ರದೇಶದಲ್ಲಿದ್ದ ಮದ್ಯದಂಗಡಿಯನ್ನು ಗ್ರಾಮದ ಬೆಸ್ತರಹಳ್ಳಿ ರಸ್ತೆಯಲ್ಲಿ ತೆರೆಯಲು ಮಾಲೀಕರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಕೇವಲ ಒಂದು ವಾರದೊಳಗೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಗಡಿರಸ್ತೆಯಲ್ಲಿರುವ ಈ ಮದ್ಯದಂಗಡಿಯು ಎಸ್.ಟಿ ಕಾಲೋನಿಗೆ ಹತ್ತಿರದಲ್ಲೇ ಇದೆ. ಈ ಸ್ಥಳದ ಸನಿಹದಲ್ಲೇ ಈಗಾಗಲೇ ರೈತಸಂಪರ್ಕ ಕೇಂದ್ರ ಮತ್ತು ನಾಡಕಛೇರಿಯ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಯ ಹಂತದಲ್ಲಿವೆ. ಗ್ರಾಮದೇವತೆಯ ಮೂಲದೇವಾಲಯಕ್ಕೆ ಇದೇ ಹಾದಿಯಲ್ಲೇ ಹಾದು ಹೋಗಬೇಕು. ಅಕ್ಕಪಕ್ಕ ಶೇಂಗಾ ಮಿಲ್ಲು ಮತ್ತು ಆಹಾರ ತಿಂಡಿಗಳ ತಯಾರಿಕೆಯ ಘಟಕವಿದೆ.

ಇಲ್ಲಿಗೆ ಸದಾ ಮಹಿಳೆಯರು ಮಕ್ಕಳು ಬಂದು ಹೋಗುತ್ತಿರುತ್ತಾರೆ. ಇದೇ ರಸ್ತೆಯ ಮೂಲಕ ರೈತಾಪಿ ಮಹಿಳೆಯರು ಓಡಾಡುತ್ತಾರೆ. ಗ್ರಾಮದ ಮೊಹರಂ ದೇವರು ಮತ್ತು ಗಣಪತಿ ದೇವರುಗಳ ವಿಸರ್ಜನೆಯ ಸ್ಥಳವು ಇದಕ್ಕೆ ಸಮೀಪವೇ ಇವೆ. ಇಂತಹ ಆಯಕಟ್ಟಿನ ಸ್ಥಳದಲ್ಲಿ ಮದ್ಯದಂಗಡಿ ತೆರೆದರೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು, ರೈತಾಪಿವರ್ಗ ಮತ್ತು ಭಕ್ತಾದಿಗಳು ಹಲವು ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ವೆಂಕಟೇಶ್, ಗೋವಿಂದ, ಶ್ರೀನಿವಾಸ, ಶ್ರೀರಾಮ, ವಿಜಯ ಇನ್ನಿತರರು ಒತ್ತಾಯಿಸಿದರು.

ತಮ್ಮ ಮನವಿಯ ಪತ್ರವನ್ನು ಜಿಲ್ಲಾ ಅಬಕಾರಿ ಅಧಿಕಾರಿ ನಾಗರಾಜು ರವರಿಗೆ ಸ್ಥಳದಲ್ಲೇ ನೀಡಲು ಹೋದಾಗ ಸ್ವೀಕರಿಸದ ಅವರು ಪ್ರಸ್ತುತ ಕಟ್ಟಡ ಪರಿಶೀಲನೆಗೆ ಬಂದಿದ್ದೇವೆ. ಇದೇ ಕೊನೆಯ ತೀರ್ಮಾನವಲ್ಲ.

ನಿಮ್ಮ ಅಹವಾಲನ್ನು ತಾಲ್ಲೂಕು ಕಛೇರಿಯಲ್ಲಿ ನೀಡಿ. ಪರಿಶೀಲಿಸಿ ಕಾನೂನಿನ ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.