Monday, 23rd December 2024

V Somanna: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ಕೇಂದ್ರಕ್ಕೆ ಪತ್ರ: ವಿ.ಸೋಮಣ್ಣ

V Somanna

ತುಮಕೂರು: ಬೆಂಗಳೂರು ಹಾಗೂ ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವೇಳೆ ಆದಂತಹ ತೊಂದರೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೆ. ಈ ಕುರಿತು ಸವಿಸ್ತಾರವಾಗಿ ಪತ್ರವನ್ನು ಸಹ ಬರೆದಿದ್ದೆ, ಎಷ್ಟು ಕಾಮಗಾರಿ ಆಗಿದೆ ಎಂಬ ಬಗ್ಗೆ ಎಲ್ಲವನ್ನು ಹೇಳಿದ್ದೆ ಎಂದು ಸಚಿವ ಸೋಮಣ್ಣ (V Somanna) ತಿಳಿಸಿದರು.

ನೆಲಮಂಗಲದ ಬಳಿ ಕಾರಿನ ಮೇಲೆ ಟ್ರಕ್ ಉರುಳಿ ಬಿದ್ದ ಅಪಘಾತ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 20ರಂದು ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೆ. ಹೆದ್ದಾರಿಯ ಬಗ್ಗೆ ಸಂಪೂರ್ಣ ಎಂಟು, ಹತ್ತು ಪುಟದ ವರದಿಯನ್ನು ನಮ್ಮ ಅಧಿಕಾರಿಗಳು ನೀಡಿದ್ದರು. ಮೂರು ವರ್ಷದಲ್ಲಿ 256 ಜನ ಮೃತಪಟ್ಟಿದ್ದಾರೆ. ಎಲ್ಲಿ ಅಪಘಾತಗಳು ಆಗುತ್ತಿದ್ದವು, ಅದೇ ಸ್ಥಳದಲ್ಲಿ ಪದೇ ಪದೇ ಆಗುತ್ತಿವೆ. ಜನವರಿ ಎರಡರಿಂದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

ಯುದ್ಧೋಪಾದಿಯಲ್ಲಿ ಕಾಮಗಾರಿಯನ್ನು ನಡೆಸಿ, ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಒತ್ತಡ ತಂದಿದ್ದೇನೆ. ನೆಲಮಂಗಲದಿಂದ ತುಮಕೂರು ಜಿಲ್ಲೆಯ ಊರುಕೆರೆವರೆಗೂ ಆರು ಪಥದ ರಸ್ತೆ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ನೆಲಮಂಗಲದಿಂದ 45 ಕಿ ಮೀ ಹೊರಗಿನ ರಸ್ತೆಗೆ 2,046 ಕೋಟಿ ರೂ. ಅನುದಾನ ಸಿಕ್ಕಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ತಿಳಿಸಿದರು.

ಗುತ್ತಿಗೆದಾರ ಬಿಟ್ಟು ಹೋಗುವ ಸ್ಥಿತಿಯಲ್ಲಿ ಇದ್ದ. ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿಯ ವರದಿಯನ್ನು ಕೇಂದ್ರ ಸಚಿವ ಗಡ್ಕರಿ ಅವರ ಗಮನಕ್ಕೆ ತಂದಿದ್ದೇವೆ. ಅವರು ಗುತ್ತಿಗೆದಾರರನ್ನು ಕರೆಸಿ ಮಾತನಾಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ರಾಜ್ಯದಲ್ಲಿ 9,823 ಕೋಟಿ ರೂ. ಹೂಡಿಕೆಗೆ ಸಿಎಂ ನೇತೃತ್ವದ ಸಮಿತಿ ಒಪ್ಪಿಗೆ ; 5,605 ಉದ್ಯೋಗ ಸೃಷ್ಟಿ

ಸಿಎಂ ಭೇಟಿಯಾದ ಚನ್ನರಾಯಪಟ್ಟಣ ರೈತ ನಿಯೋಗ; ಭೂ ಸ್ವಾಧೀನ ಕೈಬಿಡುವಂತೆ ಮನವಿ

CM Siddaramaiah

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸೋಮವಾರ ಸಭೆ ನಡೆಸಿದರು. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ 13 ಹಳ್ಳಿಗಳ ವ್ಯಾಪ್ತಿಯಲ್ಲಿ 1777 ಎಕರೆ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದರಿಂದ ಹೊಸದಾಗಿ ಭೂಸ್ವಾಧೀನ ನಡೆಸಬಾರದು ಎಂದು ರೈತರು ಮನವಿ ಮಾಡಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎನ್ನುವ ರೈತರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, 430 ಎಕರೆ ಜಮೀನು ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ ಆಗಿರುವ ಜಮೀನು ವಾಪಾಸು ಪಡೆಯಲು ಸಾಧ್ಯವಿಲ್ಲ. ಸರ್ಕಾರ ರೈತರ ಪರವಾಗಿದ್ದು, ಈ ವಿಷಯದ ಕುರಿತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದರು.

ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನು ಸಹ ಪಡೆದುಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ವೇಳೆ ಸಚಿವರಾದ ಎಂ.ಬಿ.ಪಾಟೀಲ್‌, ಕೆ.ಎಚ್.ಮುನಿಯಪ್ಪ, ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್‌ ಸೇರಿ ಹಿರಿಯ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Laxmi Hebbalkar: ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೊ ರಿಲೀಸ್‌ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್