Friday, 10th January 2025

Vaikunta Ekadashi: ವೈಕುಂಠ ಏಕಾದಶಿ: ಪವಿತ್ರ ದಿನದ ನಿಜವಾದ ಅರ್ಥ ತಿಳಿದು ಆಚರಿಸಿ

Vaikunta Ekadashi
  • ಯೋಗೀಂದ್ರ ಭಟ್ ಉಳಿ

ಇತ್ತೀಚೆಗೆ ನಮ್ಮ ಕೆಲವೊಂದು ಧಾರ್ಮಿಕ ಆಚರಣೆಗಳಿಗೆ ಇನ್ನಿಲ್ಲದ ಮಹತ್ವ ಕಂಡುಬರುತ್ತಿದೆ! ವೈಕುಂಠ ಏಕಾದಶೀ (Vaikunta Ekadashi), ಅಕ್ಷಯ ತೃತೀಯಾ, ವರಲಕ್ಷ್ಮಿ ಇತ್ಯಾದಿಗಳ ಆಚರಣೆಗಳಿಗಂತೂ ’ ಸ್ಟಾರ್ ವ್ಯಾಲ್ಯೂ ’ ಬಂದು ಬಿಟ್ಟಿದೆ! ಕಾರಣ, ದೂರ ದರ್ಶನ! ಸಾಮಾಜಿಕ ಜಾಲತಾಣ!

ಒಂದು ದೃಷ್ಟಿಯಿಂದ ಇದನ್ನು ಒಳ್ಳೆಯ ಬೆಳವಣಿಗೆಯೆಂದೇ ಹೇಳಬೇಕು. ಹಲವು ವರ್ಷಗಳಿಂದ ಕೇವಲ ಪಾಶ್ಚಾತ್ಯ ಆಚರಣೆಗಳನ್ನಷ್ಟೇ ವೈಭವೀಕರಿಸುತ್ತಿದ್ದ ಪ್ರಸಿದ್ಧ ಮಾಧ್ಯಮಗಳು ಕೂಡ ಇದೀಗ ದೇಶೀಯ ಸಂಸ್ಕೃತಿಯನ್ನು, ಸದಾಚಾರವನ್ನು ಪ್ರಚುರಪಡಿಸುತ್ತಿವೆ. ಅಷ್ಟರ ಮಟ್ಟಿಗೆ ಈಗ ಭಾರತೀಯರಲ್ಲಿ ಸ್ವಾಭಿಮಾನದ ಹುರುಪು ಹೆಚ್ಚಿದೆ ಎನ್ನಬಹುದು. ಪರಂಪರಾಗತವಾಗ ಪುರಾತನ ಆಚರಣೆಗಳನ್ನು ಗೊಡ್ಡು ಸಂಪ್ರದಾಯವೆಂದು ಹೀಗಳೆಯುತ್ತಿದ್ದ ಕಾಲ ಕಳೆದು ಇದೀಗ ಅಭಿಮಾನದಿಂದ, ಹೆಮ್ಮೆಯಿಂದ ನಮ್ಮದೆಂದು ಸಂಭ್ರಮಿಸುವ ಕಾಲ ಬಂದಿದೆ, ಸಂತೋಷ.

ಆದರೆ ವೈಕುಂಠ ಏಕಾದಶಿಯಂತಹ ಪವಿತ್ರ ವ್ರತಗಳ ಅನುಷ್ಠಾನಗಳ ವಿಷಯದಲ್ಲಿ ಸರಿಯಾದ ಮಾಹಿತಿಯನ್ನು ಮತ್ತು ಆಚರಣೆಯ ಸ್ಪಷ್ಟ ವಿಧಾನವನ್ನು ಪ್ರಚುರಪಡಿಸಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ. ಏಕೆಂದರೆ ಪ್ರಾಚೀನ ಧರ್ಮಶಾಸ್ತ್ರಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಮತ್ತು ಪುರಾಣಕತೆಗಳ ಕುರಿತು ಸರಿಯಾದ ಮಾಹಿತಿಯಿಲ್ಲದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮಗೆ ತೋಚಿದಂತೆ ವ್ಯಾಖ್ಯಾನಿಸುತ್ತಿದ್ದಾರೆ. ಹೆಚ್ಚಿನ ಪ್ರೇಕ್ಷಕರು ಅದನ್ನೇ ಸತ್ಯವೆಂದು ನಂಬಿ ಕಣ್ಣುಮುಚ್ಚಿ ಅನುಸರಿಸುತ್ತಿದ್ದಾರೆ.

ಅದರಲ್ಲೂ ವೈಕುಂಠ ಏಕಾದಶಿಯೆಂದರೆ ಅತ್ಯಂತ ಮಹತ್ವಪೂರ್ಣವಾದದ್ದು. ವೈಕುಂಠದ ಬಾಗಿಲು ತೆಗೆಯುವ ಪುಣ್ಯದಿನ. ಆ ದಿವಸ ಯಾವುದಾದರೊಂದು ವೆಂಕಟೇಶ್ವರನ ದೇಗುಲಕ್ಕೆ ಭೇಟಿ ನೀಡಲೇ ಬೇಕು, ಅಲ್ಲಿ ವಿಶೇಷವಾಗಿ ನಿರ್ಮಿಸಿದ ತಾತ್ಕಾಲಿಕ ’ ವೈಕುಂಠ’ ದ್ವಾರವನ್ನು ಪ್ರವೇಶಿಸಿ ದೇವರ ದರ್ಶನ ಮಾಡಲೇಬೇಕು ಎಂಬುವುದಾಗಿ ಬಹಳ ಜನ ನಂಬಿದ್ದಾರೆ. ಹಾಗೆಂದು ಅನೇಕ ಮಂದಿ ಪ್ರಚುರಪಡಿಸುತ್ತಿದ್ದಾರೆ ಕೂಡ. ಇರಲಿ, ಆ ನೆಪದಲ್ಲಾದರೂ ಏಕಾದಶಿಯ ಪುಣ್ಯದಿನದಂದು ದೇಗುಲಯಾತ್ರೆ ಮಾಡಿ ದೇವರ ದರ್ಶನ ಪಡೆಯುವುದು ಸಂತೋಷದ ವಿಷಯ.

ಆದರೆ ಈ ವೈಕುಂಠ ಏಕಾದಶಿ ಎಂದರೇನು? ಅಂದು ವೈಕುಂಠ ದ್ವಾರ ತೆರೆಯುವುದು ಎಂದರೇನು? ಕೇವಲ ಆ ದಿನಕ್ಕೋಸ್ಕರ ನಾವೇ ಒಂದು ತಾತ್ಕಾಲಿಕ ದ್ವಾರವನ್ನು ನಿರ್ಮಿಸಿ, ಅದನ್ನು ವೈಕುಂಠ ದ್ವಾರವೆಂದು ಕರೆದು ಅದರೊಳಗೆ ಪ್ರವೇಶಿಸುವುದಕ್ಕೆ ಏನು ಮಹತ್ವವಿದೆ? ಅಂತಹ ಆಚರಣೆಗೆ ಸ್ಪಷ್ಟವಾದ ಶಾಸ್ತ್ರ ಪ್ರಮಾಣಗಳಿವೆಯೇ? ಪುರಾಣ ಕತೆಗಳೇನು ಹೇಳುತ್ತವೆ?

ಮುಖ್ಯವಾಗಿ ಏಕಾದಶೀ ಎಂದರೇನು ಎನ್ನುವುದನ್ನು ಮೊದಲು ತಿಳಿಯಬೇಕು. ಹುಣ್ಣಿಮೆ ಮತ್ತು ಅಮಾವಾಸ್ಯೆಯ ನಂತರದ ಹನ್ನೊಂದನೇ ದಿನವನ್ನು ಅಂದರೆ ಶೋಡಷ ಕಲೆಯ ಚಂದ್ರನ ಹನ್ನೊಂದನೇ ಭಾಗವನ್ನು ಏಕಾದಶೀ ಎಂದು ಶಾಸ್ತ್ರಕಾರರು ಗುರುತಿಸಿದ್ದಾರೆ. ಅನೇಕ ಮೌಲ್ಯಯುತ ಕಾರಣಗಳಿಂದಾಗಿ ಆ ದಿವಸವನ್ನು ಉಪವಾಸದ ಆಚರಣೆಗೆ ಅತ್ಯಂತ ಪ್ರಶಸ್ತ ಎಂಬುವುದಾಗಿ ನಿರ್ಣಯಿಸಿದ್ದಾರೆ. ತಿಂಗಳಿಗೆ ಎರಡರಂತೆ ವರ್ಷದಲ್ಲಿ ಇಪ್ಪತ್ನಾಲ್ಕು ಹಾಗೂ ಅಧಿಕ ಮಾಸವನ್ನು ಸೇರಿಸಿದರೆ ಇಪ್ಪತ್ತಾರು ಏಕಾದಶಿಗಳು ಬರುತ್ತವೆ. ಅಷ್ಟೂ ಏಕಾದಶಿಗಳು ಅತ್ಯಂತ ಪುಣ್ಯಪ್ರದ ಪವಿತ್ರ ದಿನಗಳು ಎಂಬುವುದಾಗಿಯೂ ತಿಳಿಸಿದ್ದಾರೆ. ಎಲ್ಲ ಪುರಾಣಗಳು ಮತ್ತು ಮಹಾಭಾರತದಲ್ಲಿ ಕೂಡ ಈ ಶುಭದಿನಗಳ ಮಹತ್ವದ ಬಗ್ಗೆ ವರ್ಣನೆಯಿದೆ. ಏಕಾದಶಿಯಷ್ಟು ಪವಿತ್ರವಾದ ಪುಣ್ಯದಿನ ಇನ್ನೊಂದಿಲ್ಲ ಎಂಬುವುದಾಗಿ ಪುರಾಣಗಳು ಮುಕ್ತ ಕಂಠದಿಂದ ಹೊಗಳುತ್ತವೆ. ’ ನೇದೃಶಂ ಪಾವನಂ ಕಿಂಚತ್ ನರಾಣಾಂ ಭುವಿ ವಿದ್ಯತೇ’

ಪ್ರತಿಯೊಂದು ಏಕಾದಶಿಯನ್ನೂ ಒಂದೊಂದು ವಿಶಿಷ್ಟವಾದ ಹೆಸರಿನಿಂದ ಗುರುತಿಸಿದ್ದಾರೆ. ಮತ್ತು ಪ್ರತಿಯೊಂದು ಏಕಾದಶಿಯ ವೈಶಿಷ್ಟ್ಯದ ಬಗೆಗಿನ ಸ್ವಾರಸ್ಯಕರ ಕತೆಗಳೂ ಪುರಾಣಗಳಲ್ಲಿ ಪ್ರಸಿದ್ಧವಾಗಿವೆ. ಒಟ್ಟಿನಲ್ಲಿ ಎಲ್ಲ ಏಕಾದಶಿಯನ್ನೂ ಶುದ್ಧ ಉಪವಾಸದೊಂದಿಗೆ ಕಡ್ಡಾಯವಾಗಿ ಆಚರಿಸಬೇಕೆನ್ನುವುದೇ ಎಲ್ಲ ಪುರಾಣವಚನಗಳ ತಾತ್ಪರ್ಯ ನಿರ್ಣಯ ಎಂಬುವುದು ಸ್ಪಷ್ಟವಾಗುತ್ತದೆ. ’ ರಟಂತಿ ಹಿ ಪುರಾಣಾನಿ ಭೂಯೋ ಭೂಯೋ ವರಾನನೇ ನ ಭೋಕ್ತವ್ಯಂ ನ ಭೋಕ್ತವ್ಯಂ ಸಂಪ್ರಾಪ್ತೇ ಹರಿವಾಸರೇ’ ’ ಏಕಾದಶಿಯಂದು ಉಣ್ಣಲೇಬಾರದು, ಉಣ್ಣಲೇಬಾರದು ಎಂಬುವುದಾಗಿ ಎಲ್ಲ ಪುರಾಣಗಳು ಸಾರಿಹೇಳುತ್ತವೆ’ ಎಂದು ಶಿವನು ಪಾರ್ವತಿಗೆ ಹೇಳಿದ್ದು ಪದ್ಮಪುರಾಣದಲ್ಲಿ ದಾಖಲಾಗಿದೆ. ಕೇವಲ ಪುರಾಣಗಳಷ್ಟೇ ಅಲ್ಲ, ಮೈತ್ರಾವರುಣೊಪನಿಷತ್ತು, ಪೈಂಗಿ, ಬಾಭ್ರವ್ಯ ಮೊದಲಾದ ವೇದವಚನಗಳು ಮತ್ತು ಅನೇಕ ಸ್ಮೃತಿವಾಕ್ಯಗಳು ಕೂಡ ಏಕಾದಶಿಯ ಉಪವಾಸವನ್ನು ಸ್ಪಷ್ಟವಾಗಿ ಆದೇಶಿಸುತ್ತವೆ.

vaikunta Ekadashi

ಹೀಗೆ ಬಹುರೂಪದಿಂದ ವರ್ಣಿತವಾದ ಎಲ್ಲ ಇಪ್ಪತ್ತಾರು ಏಕಾದಶಿಗಳ ಪೈಕಿ ಧನುರ್ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯು ’ವೈಕುಂಠ ಏಕಾದಶೀ’ ಎಂದು ಪ್ರಚಲಿತದಲ್ಲಿ ಪ್ರಸಿದ್ಧವಾಗಿದೆ. ಕೆಲವೆಡೆ ಇದನ್ನು ’ಮುಕ್ಕೋಟಿ ಏಕಾದಶೀ’ ಎಂಬುವುದಾಗಿಯೂ ಕರೆಯುತ್ತಾರೆ. ಅಂದರೆ ಮುಕ್ಕೋಟಿ ದೇವತೆಗಳೂ ನಮ್ಮ ಉಪವಾಸದಿಂದ ಪ್ರಸನ್ನರಾಗಿ ನಮಗೆ ಇಷ್ಟಾರ್ಥವನ್ನು ಅನುಗ್ರಹಿಸುವ ದಿನ ಎಂದರ್ಥ. ಚಾಂದ್ರಮಾನ ಪ್ರಕಾರ ಇದಕ್ಕೆ ಬೇರೆಯೇ ಹೆಸರಿದೆ. ಈ ಸಲದ ಈ ಏಕಾದಶಿಯು ಪುಷ್ಯಮಾಸದಲ್ಲಿ ಬಂದಿರುವುದರಿಂದ ಅದರ ಮೂಲ ಹೆಸರು ’ಪುತ್ರದಾ’

ಇನ್ನು ಪ್ರಸಿದ್ಧವಾದ ಪುರಾಣಕತೆಯೊಂದು ಹೇಳುವಂತೆ ಮಧುಕೈಟರೆಂಬ ಅಸುರರನ್ನು ಶ್ರೀಮನ್ನಾರಾಯಣನು ಸಂಹರಿಸಿದನಂತೆ. ಬಳಿಕ ಅವರಿಗೆ ಅವರ ಪ್ರಾರ್ಥನೆಯಂತೆ, ವೈಕುಂಠ ಲೋಕದ ಉತ್ತರದ್ವಾರದ ಮೂಲಕ ಅವರನ್ನು ಪ್ರವೇಶಿಸುವಂತೆ ಮಾಡಿ ಸದ್ಗತಿಯನ್ನು ಕರುಣಿಸಿದ್ದು ಇದೇ ದಿವಸವಂತೆ. ಅಂದರೆ ತಪ್ಪುಗಳನ್ನು ಮಾಡಿದವರು ಕೂಡ ಪ್ರಾಯಶ್ಚಿತ್ತ ಪೂರ್ವಕವಾಗಿ ಭಗವಂತನಿಗೆ ಸಂಪೂರ್ಣವಾಗಿ ಶರಣಾದರೆಂದರೆ, ಅವರಿಗೂ ಸದ್ಗತಿಯಾಗುತ್ತದಂತೆ. ವೈಕುಂಠದ ವಿಶೇಷದ್ವಾರ ಅವರಿಗೋಸ್ಕರ ತೆರೆಯುತ್ತದಂತೆ. ಇದನ್ನೇ ನಿಮಿತ್ತವಾಗಿಟ್ಟುಕೊಂಡು ವೈಕುಂಠ ಏಕಾದಶಿಯಂದು ವಿಶೇಷದ್ವಾರವನ್ನು ನಿರ್ಮಿಸಿ, ಅದರ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆಯುವ ಆಚರಣೆ ಇಂದು ಕೆಲವು ಕಡೆಗಳಲ್ಲಿ ಪ್ರಚಲಿತದಲ್ಲಿದೆ.

ಇತ್ತೀಚೆಗಂತೂ ಇದು ಎಲ್ಲೆಡೆ ವ್ಯಾಪಕವಾಗಿ, ಅದರಲ್ಲಿಯೂ ಎಲ್ಲ ಶ್ರೀನಿವಾಸ ದೇಗುಲಗಳಲ್ಲಿ ಕಡ್ಡಾಯವಾಗಿ ಆಚರಣೆಗೆ ಬಂದಿದೆ. ತನ್ಮೂಲಕ ನಮ್ಮೆಲ್ಲಾ ತಪ್ಪುಗಳನ್ನು ಮನ್ನಿಸಿ ದೇವರು ನಮ್ಮನ್ನು ವಿಶೇಷ ದ್ವಾರದ ಮೂಲಕ ತನ್ನ ಲೋಕಕ್ಕೆ ಕರೆದುಕೊಂಡು ಹೋಗಿ ಶಾಶ್ವತ ಸುಖವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇಂದಿನ ಭಕ್ತರದ್ದು. ಮತ್ತು ಇದನ್ನು, ಇಂದಲ್ಲ ನಾಳೆ ನಾವು ಸಾಯಲೇ ಬೇಕು, ದೇವರನ್ನು ಸೇರಲೇ ಬೇಕು ’ ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ’ ಎಂಬ ಪರಮ ಸತ್ಯವನ್ನು ಮನಸಾರೆ ಒಪ್ಪಿಕೊಂಡು, ಕಡ್ದಾಯವಾಗಿ ಸಂಭವಿಸಲಿರುವ ನಮ್ಮ ಅವಸಾನವನ್ನು ಪೂರ್ವಭಾವಿಯಾಗಿ ಸಂಭ್ರಮಿಸುವ ಆಚರಣೆಯನ್ನಾಗಿಯೂ ತಿಳಿಯಬಹುದು.

ಆದರೆ ಈ ರೀತಿಯ ಆಚರಣೆಯನ್ನು ಯಾರು ಶುರುಮಾಡಿದರು, ಈಗ ಯಾಕೆ ಪ್ರಸಿದ್ಧವಾಯಿತು ಎಂಬುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗೇ ಆಚರಿಸಬೇಕು ಎಂದು ವಿಧಿಸುವ ಶಾಸ್ತ್ರವಚನಗಳೂ ಕಾಣಸಿಗುವುದಿಲ್ಲ. ಈ ರೀತಿಯ ವೈಚಿತ್ರ್ಯಪೂರ್ಣ ಆಚರಣೆಗಳ ಮೂಲಕ ಏಕಾದಶೀ ವ್ರತದ ಪ್ರಸಿದ್ಧಿಗಾಗಿ ಕೆಲವರು ಪ್ರಯತ್ನ ಮಾಡಿರಲೂಬಹುದು. ಆದರೆ ನಾವು ಅದರ ಮೂಲ ಉದ್ದೇಶದಿಂದ ದೂರ ಉಳಿದರೆ ಇಂತಹ ಯಾವ ಆಚರಣೆಗೂ ಮಹತ್ವವಿರುವುದಿಲ್ಲ.

ಇದೀಗ ಪ್ರಸಿದ್ಧವಾದ ವೈಕುಂಠ ಏಕಾದಶೀ ಹೆಚ್ಚಿನ ಕಡೆಗಳಲ್ಲಿ ಸ್ಪರ್ಧಾತ್ಮಕವಾಗಿ ಅಲಂಕೃತವಾದ ವೈಕುಂಠದ್ವಾರ ಪ್ರವೇಶ ಮತ್ತು ದೇವರ ದರ್ಶನಕ್ಕಷ್ಟೇ ಸೀಮಿತವಾದಂತೆ ಕಾಣುತ್ತದೆ. ಶ್ರದ್ಧೆಯಿಂದ ಉಪವಾಸ ಮಾಡುವ ಕೆಲವೇ ಕೆಲವು ಶ್ರದ್ದಾಳುಗಳೂ ಇದ್ದಾರೆ. ಆದರೆ ದುರಂತವೆಂದರೆ ಬಹುತೇಕ ದೇಗುಲಗಳಲ್ಲಿ ಅತ್ಯಂತ ಹೆಚ್ಚು ಪ್ರಸಾದದ ವಿನಿಯೋಗವಾಗುವುದೇ ಈ ವೈಕುಂಠ ಏಕಾದಶಿಯಂದು! ಲಡ್ಡು ಪ್ರಸಾದ, ಫಲಾರ, ಉಪಾಹಾರ, ಅನ್ನಪ್ರಸಾದ ಎಂಬಿತ್ಯಾದಿಯಾಗಿ ನಾನಾವಿಧದ ಜನಾಕರ್ಷಣೆಗಳು! ಒಟ್ಟಿನಲ್ಲಿ ಜನ ಬರಬೇಕು, ಕಾಣಿಕೆ, ದಕ್ಷಿಣೆಗಳನ್ನು ತಂದು ಸುರಿಯಬೇಕು. ಏಕಾದಶಿಯ ಮೂಲ ಉದ್ದೇಶವೇ ಅಲ್ಲಿಗೆ ಬಿದ್ದು ಹೋಯಿತು! ಪುಣ್ಯದ ಬದಲು ಗೌಜಿ ಗದ್ದಲಗಳೊಂದಿಗೆ ಸಾಮೂಹಿಕ ಪಾಪಸಂಚಯನವನ್ನು ಮುಕ್ತವಾಗಿ ಮಾಡುವ ಪ್ರಕ್ರಿಯೆ ಮೊದಲುಗೊಂಡಿತು!

ಏಕಾದಶಿಯಂದು ಊಟಮಾಡುವುದಕ್ಕಿಂತ ದೊಡ್ಡ ಪಾಪಕರ್ಮ ಇನ್ನೊಂದಿಲ್ಲವಂತೆ. ಅದನ್ನು ದೇವರ ಸನ್ನಿಧಾನದಲ್ಲೇ ಮಾಡುವುದೆಂದರೆ ? ದೇವರ ಸನ್ನಿಧಿಗೆ ಏನೂ ಅರಿಯದ ಮುಗ್ಧಜನರು ಧಾವಿಸುವುದು ಪುಣ್ಯ ಬರಲೆಂದು. ತನ್ಮೂಲಕ ತಮ್ಮ ಕಷ್ಟನಿವಾರಣೆಯಾಗಲೆಂದು. ಆದರೆ ಅಲ್ಲಿ ಅವರು ನಿಜವಾಗಿಯೂ ಸಂಪಾದಿಸುವುದೇನನ್ನು? ಎಲ್ಲೆಲ್ಲೋ ಮಾಡಿದ ಪಾಪಕರ್ಮಗಳಿಗೆ ಪುಣ್ಯಕ್ಷೇತ್ರಗಳಲ್ಲಿ ವಿಮೋಚನೆಯಂತೆ. ಪುಣ್ಯಕ್ಷೇತ್ರಗಳಲ್ಲೇ ಪಾಪ ಮಾಡಿದರೆ ? ’ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ ಪುಣ್ಯಕ್ಷೇತ್ರೇ ಕೃತಂ ಪಾಪಂ ವಜ್ರಲೇಪೋ ಭವಿಷ್ಯತಿ’

ಪುರಾತನವಾದ ಪುರಾಣದ ಈ ಮಾತೊಂದನ್ನು ಗಮನಿಸಿ. ಏಕಾದಶಿಯಂದು ಉಣ್ಣುವುದು ಎಷ್ಟು ದೊಡ್ಡ ಪಾಪವೆಂದು ನಿಮಗೇ ಗೊತ್ತಾಗುತ್ತದೆ. ’ವರಂ ಸ್ವಮಾತೃಗಮನಂ ವರಂ ಗೋಮಾಂಸ ಭಕ್ಷಣಮ್ ವರಂ ಹತ್ಯಾ ಸುರಾಪಾನಂ ಏಕಾದಶ್ಯಾಂ ತು ಭೋಜನಾತ್’

ಎಲ್ಲ ಏಕಾದಶಿಗಳಂತೆ ಈ ವೈಕುಂಠ ಏಕಾದಶಿಯೂ ಸಮಾನವಾದ ಮಹತ್ವವನ್ನು ಹೊಂದಿದೆ. ಆದರೂ ವೈಕುಂಠ ಏಕಾದಶಿಯನ್ನು ಮಾತ್ರ ಇನ್ನಿಲ್ಲದಂತೆ ಹೊಗಳುವ ಮಾತುಗಳೂ ಕೇಳಿಬರುತ್ತವೆ. ವೈಕುಂಠ ಏಕಾದಶಿಯಂದು ಉಪವಾಸಮಾಡಿದರೆ ವರ್ಷದ ಎಲ್ಲ ಏಕಾದಶಿಗಳಂದು ಉಪವಾಸ ಮಾಡಿದ ಪುಣ್ಯಬರುತ್ತದಂತೆ!

ಕೆಲವೊಂದು ಉತ್ಪ್ರೇಕ್ಷೆಯ ಮಾತುಗಳಿಗೆ ಅಂತರಾರ್ಥ ಬೇರೆಯೇ ಇರುತ್ತದೆ. ಈ ಏಕಾದಶಿಯು ಬರುವುದು ಚಳಿಗಾಲದಲ್ಲಿ. ಈ ಸಮಯದಲ್ಲಿ ನಮ್ಮ ಹೊರಗಿನ ಚಟುವಟಿಕೆ ಸಹಜವಾಗಿಯೇ ಕಡಿಮೆಯಿರುತ್ತದೆ. ಮನೆಯೊಳಗೇ ಹೆಚ್ಚು ಹೊತ್ತು ಇರುವಾಗ ಬಾಯಿರುಚಿಯೂ ಬಾಧಿಸಬಹುದು. ಹಸಿವೂ ಹೆಚ್ಚಾಗಬಹುದು. ಮುಂಜಾವಿನ ಚಳಿಗೆ ಮುಸುಕು ಹೊದ್ದು ಮುದುಡಿ ಮತ್ತಷ್ಟು ಹೊತ್ತು ಮಲಗೋಣವೆಂದೂ ಮನಸ್ಸಾಗುತ್ತದೆ. ಅದಕ್ಕೇ ಇರಬೇಕು, ಶಾಸ್ತ್ರಕಾರರು ಧನುರ್ಮಾಸದಲ್ಲಿ ಬೇಗ ಏಳಲೇ ಬೇಕು, ಸೂರ್ಯೋದಯದೊಳಗೆ ದೇವರಿಗೆ ನೈವೇದ್ಯವಾಗಬೇಕು, ಪೂಜೆ ಮುಗಿಯಬೇಕು ಎಂಬ ವಿಧಿಯನ್ನು ತಂದದ್ದು! ಹಾಗೆಯೇ ಈ ಏಕಾದಶಿಯನ್ನು ಕೂಡ ಸ್ವಲ್ಪ ಹೆಚ್ಚೇ ಎತ್ತಿ ಕಟ್ಟಿದ್ದಾರೆ. ಹಾಗೆಂದು ಹೇಳಿ ಬೇರೆ ಏಕಾದಶಿಯಂದು ಉಪವಾಸ ಮಾಡಬೇಕಿಲ್ಲ ಎಂಬ ಎಕ್ಸ್ ಕ್ಯೂಸ್ ಕೊಟ್ಟದ್ದಲ್ಲ. ಬೇರೆ ತರಗತಿಗಳನ್ನು ತಪ್ಪಿಸಿಕೊಂಡರೂ, ಕೆಮಿಸ್ಟ್ರಿ ತರಗತಿಯನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ ಎಂದರೆ ಬೇರೆಯದನ್ನು ತಪ್ಪಿಸಿಕೊಳ್ಳಲು ಕೊಡುವ ಪರ್ಮಿಷನ್ ಅಲ್ಲ ತಾನೆ? ಒಳ್ಳೆಯ ಮಾರ್ಕ್ ತೆಗೆದು ಪಾಸಾಗಬೇಕೆಂದರೆ ಎಲ್ಲ ತರಗತಿಗಳನ್ನೂ ಕಡ್ಡಾಯವಾಗಿ ಹಾಜರಾಗಬೇಕು. ದೇವರ ಪೂರ್ಣ ಅನುಗ್ರಹ ಬೇಕೆಂದರೆ ಎಲ್ಲ ಏಕಾದಶಿಗಳನ್ನೂ ಕಡ್ಡಾಯವಾಗಿ ಆಚರಿಸಲೇ ಬೇಕು.

ಇನ್ನು ಒಂದು ದಿನದ ಉಪವಾಸವೆನ್ನುವುದು ದೊಡ್ಡ ಸಂಗತಿಯೇನೂ ಅಲ್ಲ. ಒಂದು ದಿನ ಉಪವಾಸವಿದ್ದರೆ ಯಾರೂ ಸಾಯುವುದಿಲ್ಲ. ಉಪವಾಸ ಎಂದರೆ ಏನನ್ನೂ ತಿನ್ನದಿರುವುದು, ಕುಡಿಯದಿರುವುದು ಎನ್ನುವುದೇ ನಿಜವಾದ ಅರ್ಥ. ಹಾಲು, ಹಣ್ಣು, ಉಪಾಹಾರ ಇತ್ಯಾದಿಗಳ ವಿನಿಯೋಗವೂ ಶುದ್ಧತಪ್ಪು. ಅತ್ಯಂತ ಅಶಕ್ತರಿಗೆ ಅಂದರೆ, ಗರ್ಭಿಣಿ, ಬಾಣಂತಿ, ಹಸುಗೂಸು, ಮತ್ತು ಅತೀವ ಅನಾರೋಗ್ಯಪೀಡಿತರಿಗೆ ಮಾತ್ರ ದ್ರವಾಹಾರ ಅಥವಾ ಅಲ್ಪಾಹಾರವನ್ನು ಶಾಸ್ತ್ರಗಳು ಹೇಳಿವೆ.

ಒಟ್ಟಿನಲ್ಲಿ ಎಲ್ಲ ಏಕಾದಶಿಗಳನ್ನು ಮತ್ತು ಈ ವೈಕುಂಠ ಏಕಾದಶಿಯನ್ನು ಕೂಡ ಎಲ್ಲರೂ ವಿಧ್ಯುಕ್ತವಾಗಿ ಆಚರಿಸುವಂತಾಗಲಿ ಎನ್ನುವುದಷ್ಟೇ ನನ್ನ ಆಶಯ. ಶುಭವಾಗಲಿ.

Leave a Reply

Your email address will not be published. Required fields are marked *