ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ (Valmiki Corporation scam) ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಕೋರ್ಟ್ ಜಾಮೀನು ನೀಡಿದೆ. ನಾಗೇಂದ್ರ ವಿರುದ್ಧ 89 ಕೋಟಿ ರೂ. ದುರ್ಬಳಕೆ ಆರೋಪ ಕೇಳಿಬಂದಿತ್ತು. ಹೀಗಾಗಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು ನಾಗೇಂದ್ರರನ್ನು ಬಂಧಿಸಿದ್ದರು. ಇದೀಗ 82ನೇ ಸಿಸಿಎಚ್ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಗೇಂದ್ರ ಸೇರಿ ಇತರ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು 82ನೇ ಸಿಸಿಹೆಚ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಿದ್ದರು. ಹಗರಣದ ಸಂಪೂರ್ಣ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರ (Ex minister B Nagendra) ಆಗಿರುವುದು ಕಂಡುಬಂದಿದೆ ಎಂದು ಆರೋಪ ಪಟ್ಟಿಯಲ್ಲಿ ಕೋರ್ಟ್ಗೆ ತಿಳಿಸಲಾಗಿತ್ತು. ಜೊತೆಗೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣವನ್ನು ಲೋಕಸಭಾ ಚುನಾವಣೆಗೂ ಬಳಕೆ ಮಾಡಲಾಗಿದೆ ಎಂದು ಇಡಿ ಬೊಟ್ಟು ಮಾಡಿತ್ತು.
ಈ ಸುದ್ದಿಯನ್ನೂ ಓದಿ | Actor Darshan: ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮಾಜಿ ಸಚಿವರಾದ ನಾಗೇಂದ್ರ ಪ್ರಕರಣದ ಪ್ರತಿ ಹಂತದಲ್ಲಿಯೂ ಹಣದ ದುರ್ಬಳಕೆಯ ಮೇಲೆ ನಿಯಂತ್ರಣ ಹೊಂದಿದ್ದರು. ಪ್ರತಿ ಹಂತದಲ್ಲಿಯೂ ಸ್ವತಃ ಸಚಿವ ನಾಗೇಂದ್ರ ಭಾಗಿಯಾಗಿದ್ದಾರೆ. ಅವರೇ ಡೀಲ್ ಮಾಡಿಸಿದ್ದಾರೆ. ಅಂದರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಸಂಪೂರ್ಣ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರನೇ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದರಿಂದ ನಾಗೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ.