ತುಮಕೂರು: ಗ್ರಾಮ ಆಡಳಿತಾಧಿಕಾರಿ (ವಿಎಒ) ಹುದ್ದೆಗಳ ನೇಮಕಾತಿಗೆ (VAO Recruitment 2024) ಸಂಬಂಧಿಸಿದಂತೆ ಪ್ರಕಟಿಸಿರುವ 1:3 ಪಟ್ಟಿಯಲ್ಲಿ ಅಭ್ಯರ್ಥಿಗಳ ಅಂಕಗಳಲ್ಲಿ ಭಾರಿ ವ್ಯತ್ಯಾಸವಾಗಿದ್ದು, ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಆಕಾಂಕ್ಷಿಗಳು ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ನಡೆಸಲಾಗಿತ್ತು. ಅದರ ಅನ್ವಯ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ 1:3 ಪಟ್ಟಿಯನ್ನು ಪ್ರಕಟಿಸಿ ದಾಖಲಾತಿ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪಟ್ಟಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಅಂಕಗಳಿಗೆ ಹಾಗೂ ಜಿಲ್ಲಾಡಳಿತದ ವತಿಯಿಂದ ಪ್ರಕಟಿಸಿರುವ ಅಂಕಗಳಿಗೂ ಭಾರಿ ವ್ಯತ್ಯಾಸವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.
1:3 ನಿಯಮದನ್ವಯ ಜಿಲ್ಲೆಯಲ್ಲಿ 213 ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳಿಸಲಾಗಿದ್ದು, ಕೆಇಎ ಹಾಗೂ ಜಿಲ್ಲಾಡಳಿತ ಪ್ರಕಟಮಾಡಿರುವ ಅಂಕಗಳಲ್ಲಿ ಅಜಗಜಾಂತರ ವ್ಯತ್ಯಾಸವಾಗಿರುವುದರಿಂದ 213 ಆಕಾಂಕ್ಷಿಗಳಲ್ಲಿ ಆತಂಕ ಎದುರಾಗಿದೆ.
ಕೆಇಎ ನಡೆಸಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದವರಿಗೆ ಜಿಲ್ಲಾಡಳಿತ ಪ್ರಕಟ ಮಾಡಿರುವ ಪಟ್ಟಿಯಲ್ಲಿ ಕಡಿಮೆ ಅಂಕ ನೀಡಲಾಗಿದೆ. ಯಾವ ಆಧಾರದ ಮೇಲೆ ಈ ರೀತಿ ಮಾಡಿದ್ದಾರೆ ಎಂಬುದು ಅನುಮಾನ ಮೂಡಿದೆಯೆಂದು ನೊಂದ ಆಕಾಂಕ್ಷಿಗಳು ನೋವು ತೋಡಿಕೊಂಡರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಪಟ್ಟಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ದಾಖಲಾತಿಗಳನ್ನು ಪರೀಕ್ಷಿಸಬೇಕು. ಆದರೆ ಜಿಲ್ಲಾಡಳಿತ ಅಂಕಪಟ್ಟಿಯಲ್ಲಿ ಅಂಕಗಳನ್ನು ಹೆಚ್ಚು, ಕಡಿಮೆ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದು, ಇದರ ವಿರುದ್ಧ ಸೂಕ್ತ ತನಿಖೆ ಆಗಬೇಕಿದೆ ಎಂದು ದಾಖಲಾತಿ ಪರಿಶೀಲನೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಒತ್ತಾಯಿಸಿದರು.
ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಅಂಕಗಳಿಗೂ ಹಾಗೂ ತುಮಕೂರು ಜಿಲ್ಲಾಡಳಿತದಿಂದ ನೀಡಿರುವ ಅಂಕಗಳಿಗೆ ಭಾರಿ ವ್ಯತ್ಯಾಸವಾಗಿದ್ದು ಅಧಿಕ ಅಂಕ ಪಡೆದವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರಕಾರ ತನಿಖೆ ನಡೆಸಬೇಕೆಂದು ನೊಂದ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.
ಅಂಕಗಳು ವ್ಯತ್ಯಾಸವಾಗಿರುವ ಪಟ್ಟಿ
ಈ ಸುದ್ದಿಯನ್ನೂ ಓದಿ | Jayadeva Hospital: ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಸಿಎಂ