Saturday, 28th September 2024

Vijay Sindhur: ಖ್ಯಾತ ಹಿರಿಯ ಚಿತ್ರ ಕಲಾವಿದ ವಿಜಯ ಸಿಂಧೂರ್ ನಿಧನ

Vijay Sindhur

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರ ಕಲಾವಿದ ವಿಜಯ ಸಿಂಧೂರ್ (Vijay Sindhur) ಅವರು ಅವರು ಜಮಖಂಡಿಯ ಸ್ವಗೃಹದಲ್ಲಿ ಶನಿವಾರ ಮುಂಜಾನೆ ನಿಧನರಾದರು. ಚಿತ್ರಕಲಾ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಬಂದಿವೆ.

ವಿಜಯ ಸಿಂಧೂರ 1940ರ ಜೂನ್ 7ರಂದು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ಜನಿಸಿದರು. ತಂದೆ ಗಂಗಪ್ಪ. ತಾಯಿ ಬಸಮ್ಮ. ಬಾಲ್ಯದಿಂದಲೇ ಮನೆಯಲ್ಲಿ ತೂಗು ಹಾಕಿದ್ದ ರವಿವರ್ಮನ ಚಿತ್ರಗಳಿಂದ ಆಕರ್ಷಿತರಾಗಿ ತಾವೂ ಅದರಂತೆ ಮಾಡಬೇಕೆಂದು ಚಿತ್ರಕಲೆಗೆ ತೊಡಗಿ ಶಿವ-ಪಾರ್ವತಿ ಚಿತ್ರ ಬರೆದರು. ಗಣಪತಿ ಚಿತ್ರಬಿಡಿಸಿ ಬಣ್ಣ ತುಂಬಿದರು.

ಎಂಜಿನಿಯರ್‌ ಅಥವಾ ಡಾಕ್ಟರ್‌ ಆಗಬೇಕೆಂದು ಇವರು ಆರಿಸಿಕೊಂಡ ಐಚ್ಛಿಕ ವಿಷಯ ಗಣಿತ ಕೈಕೊಟ್ಟು ಚಿತ್ರಕಲೆಯತ್ತ ಮನಸ್ಸು ಹೊರಳಿತು. ಪುಣೆಯ ಅಭಿನವ ಕಲಾ ವಿದ್ಯಾಲಯದ ಎಸ್.ಎಸ್. ಕಾಮತ್ ಮತ್ತು ಮುಂಬೈನ ದಂಡಾವತಿ ಅವರ ನೂತನ ವಿದ್ಯಾಶಾಲೆಯಲ್ಲಿ ಚಿತ್ರಕಲಾಭ್ಯಾಸ ಮಾಡಿದರು. ಶಂಕರ ರಾವ್ ಪಲ್ಸೀಕರ್‌ರವರ ಮಾರ್ಗದರ್ಶನ ದೊರಕಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದರು. ಶಿಷ್ಯವೇತನದಿಂದ ಭಿತ್ತಿ ಚಿತ್ರಕಲೆ ಅಭ್ಯಾಸ ಮಾಡಿದ ಇವರು, ತೈಲವರ್ಣ ಮಾಧ್ಯಮದಲ್ಲಿ ಅಪಾರ ಸಾಧನೆ ಮಾಡಿದರು. ಇವರ ಭಾವಚಿತ್ರಗಳ ರಚನೆಯಲ್ಲಿ ಜೀವ ಕಳೆ ತುಂಬಿತುಳುಕುತ್ತಿತ್ತು.

ಈ ಸುದ್ದಿಯನ್ನೂ ಓದಿ | Self Harming: ಫ್ಲ್ಯಾಟೊಂದರಲ್ಲಿ 5 ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ, ಕಾರಣ ನಿಗೂಢ

ವಿಜಯ ಸಿಂಧೂರ ಅವರಿಗೆ ಬಾಂಬೆ ಆರ್ಟ್‌ ಸೊಸೈಟಿ ಪ್ರಶಸ್ತಿ, ಆರ್ಟ್‌ ಸೊಸೈಟಿ ಆಫ್ ಇಂಡಿಯಾದ ಪಟೇಲ್ ಟ್ರೋಫಿ, ಕೇಂದ್ರ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಕೋಲ್ಕತ್ತಾದ ಅಖಿಲ ಭಾರತ ಕಲಾ ಪ್ರದರ್ಶನ ಪ್ರಶಸ್ತಿ, ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಲಭಿಸಿವೆ.