ಉಡುಪಿ: ಹಿಂಸಾಮಾರ್ಗ ತೊರೆದು 6 ನಕ್ಸಲರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಶರಣಾಗಿದ್ದರು. ಈ ಮೊದಲೇ ನಕ್ಸಲರು ಶರಣಾಗತಿಗೆ ಮುಂದಾದರೂ, ವಿಕ್ರಂ ಗೌಡ ವಿರೋಧದಿಂದಲೇ ಅದಕ್ಕೆ ಹಿನ್ನಡೆಯಾಗಿತ್ತು ಎಂಬುವುದು ತಿಳಿದುಬಂದಿದೆ. ಸಂಧಾನಕಾರರ ಜತೆ ಶರಣಾಗತಿಗೆ ಒಪ್ಪದ ವಿಕ್ರಂ ಗೌಡ, ನನ್ನ ಹೋರಾಟ ನಂಬಿದ ಜನರಿಗೆ ಮೋಸ ಮಾಡುವುದಿಲ್ಲ. ನಾವು ರಾಜಿಗೆ ಹೋದರೆ ಜನರಿಗೆ ದ್ರೋಹ ಮಾಡಿದಂತೆ ಎಂದು ಹೇಳಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಆಡಿಯೊವೊಂದು ವೈರಲ್ ಆಗುತ್ತಿದೆ.
ಸಂಧಾನಕಾರರ ಜತೆ ವಿಕ್ರಮ್ ಗೌಡ ಮಾತನಾಡಿದ್ದಾನೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ನಕ್ಸಲ್ ನಾಯಕನ ಮನವೊಲಿಸುವ ಪ್ರಯತ್ನ ವಿಫಲವಾಗಿದ್ದಕ್ಕೆ ಈ ಆಡಿಯೊ ಸಾಕ್ಷಿಯಾಗಿದೆ. ನಕ್ಸಲರ ಶರಣಾಗತಿಗೆ ವಿಕ್ರಂ ಗೌಡ ಒಪ್ಪದಿರುವುದು ಈ ಆಡಿಯೊದಿಂದ ತಿಳಿಯುತ್ತದೆ.
ಆಡಿಯೊದಲ್ಲಿ ಏನಿದೆ?
ನನ್ನ ಹೋರಾಟ ನಂಬಿದ ಜನರಿಗೆ ಮೋಸ ಮಾಡುವುದಿಲ್ಲ ಎಂದಿರುವ ವಿಕ್ರಂ ಗೌಡ, ನಾವು ಯಾವುದೇ ರಾಜಿಗೆ ಹೋಗುವುದಿಲ್ಲ. ಪಕ್ಷ ಅಥವಾ ಸಂಘಟನೆ ಜತೆ ಹೋಗುವುದಿಲ್ಲ. ರಾಜಿಗೆ ಹೋಗುವೆಂದರೆ ಅರ್ಥ ಏನು? ದುಡಿಯುವ ಜನರಿಗೆ ದ್ರೋಹ ಮಾಡಿ, ದುಡ್ಡು ಮಾಡಲು ಹೋಗುತ್ತೇವೆ ಎಂದರ್ಥ ಅಲ್ಲವೇ? ನಮ್ಮ ಜತೆ ಮಾತುಕತೆಗೆ ಬನ್ನಿ ಎಂದು ಏಕೆ ಕರೆಯುತ್ತಿದ್ದಾರೆ? ಲಕ್ಷ, ಕೋಟಿಗಟ್ಟಲೆ ಕೊಡುತ್ತೇವೆ ಎಂದೂ ಹೇಳುತ್ತಿದ್ದಾರೆ. ಆದರೆ ನಾವು ಒಪ್ಪುವುದಿಲ್ಲ. ನಾವು ರಾಜಿಗೆ ಹೋದರೆ ನಾವು ಯಾವ ಜನಕ್ಕೆ ನಿಮ್ಮೊಂದಿಗೆ ಇರುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದೇವೋ ಅವರಿಗೆ ಮೋಸ ಮಾಡಿದಂತೆ ಆಗುತ್ತದೆ. ಆ ಕೆಲಸವನ್ನು ನಾವು ಮಾಡುವುದಿಲ್ಲ.
ಸಿಪಿಐಯವರು ರಾಜಿ ಮಾಡಿಕೊಂಡು ಪಕ್ಷ ಕಟ್ಟಿಕೊಂಡರು. ಎಲೆಕ್ಷನ್ ಮೂಲಕವೇ ಈ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅದು ಸಾಧ್ಯವೇ? ನಾವು ಕೆಸರು ಗುಂಡಿಗೆ ಬಿದ್ದು ಕೆಸರಾಗಿಲ್ಲ ಎಂದರೆ ನಂಬುತ್ತಾರಾ? ವ್ಯವಸ್ಥೆಯೇ ಒಂದು ಕೊಚ್ಚೆ ಗುಂಡಿ. ಎಲೆಕ್ಷನ್ ದಾರಿಯಿಂದ ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ದೃಷ್ಟಿಕೋನದಲ್ಲಿ ವ್ಯವಸ್ಥೆ ತಲೆಕೆಳಗಾಗಿದೆ ಅದನ್ನು ಸರಿಪಡಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಒಬ್ಬ ತಾಯಿ ಒಂದು ಮಗುವಿಗೆ ಜನ್ಮ ಕೊಡಬೇಕಾದರೆ, ಎಷ್ಟು ನೋವು ಅನುಭವಿಸುತ್ತಾಳೆ ಎಂದು ಆ ತಾಯಿಗೇ ಗೊತ್ತು. ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಆ ರೀತಿ ಕಷ್ಟಪಡಬೇಕಿದೆ. ಈಗಾಗಲೇ ನಮ್ಮ ಹತ್ತಾರು ಸಹಚರರನ್ನು ಕಳೆದುಕೊಂಡಿದ್ದೇವೆ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆಡಿಯೊದಲ್ಲಿ ವಿಕ್ರಂ ಗೌಡ ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ | Naxals Surrender: ಸಿಎಂ ಸಿದ್ದರಾಮಯ್ಯ ಮುಂದೆ ಶರಣಾದ 6 ನಕ್ಸಲರು; ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು!
ಇನ್ನು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಶರಣಾಗತರಾಗಿದ್ದ ಆರು ಮಂದಿ ನಕ್ಸಲೀಯರನ್ನು ರಾಜ್ಯ ಪೊಲೀಸರು ವಶಕ್ಕೆ ಪಡೆದು, ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಎನ್ಐಎ ಕೋರ್ಟ್ಗೆ ಹಾಜರುಪಡಿಸಲಾದ ನಕ್ಸಲರಿಗೆ ಜ. 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸರ್ಕಾರ ಆಹ್ವಾನಕ್ಕೆ ಒಪ್ಪಿ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಆರು ಮಂದಿ ಮಾಜಿ ನಕ್ಸಲರನ್ನ ಇಂದು ಬೆಳಗ್ಗೆ ಮಡಿವಾಳದ ತಾಂತ್ರಿಕ ಕೇಂದ್ರದಲ್ಲಿರಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಚಿಕ್ಕಮಗಳೂರು ಪೊಲೀಸರ ಜೊತೆಗೆ ನಕ್ಸಲ್ ನಿಗ್ರಹ ಪಡೆ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ನಕ್ಸಲೀಯರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು. ಆರೋಪಿಗಳ ವಿರುದ್ಧ ಬಹುತೇಕ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿನ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ವಿಚಾರಣೆ ನಡೆಸಿದೆ.