Friday, 10th January 2025

Vinay Guruji: ಡಿ.ಕೆ. ಶಿವಕುಮಾರ್‌ ಸಿಎಂ ಆಗುವುದು ಗ್ಯಾರಂಟಿ: ವಿನಯ್ ಗುರೂಜಿ ಭವಿಷ್ಯ

Vinay Guruji

ಚಿಕ್ಕೋಡಿ: ಡಿ.ಕೆ.ಶಿವಕುಮಾರ್‌ (DK Shivakumar) ಅವರು ಕಾಂಗ್ರೆಸ್ ಪಕ್ಷಕ್ಕೆ ಅನೇಕ ಕೆಲಸ ಮಾಡಿದ್ದಾರೆ, ಅವರು ಸಿಎಂ ಆದರೆ ಖುಷಿ ಪಡುತ್ತೇವೆ. ಅವರು ಸಿಎಂ ಆಗುವುದು ನಿಶ್ಚಿತ ಎಂದು ಅವಧೂತ ವಿನಯ್ ಗುರೂಜಿ (Vinay Guruji) ಭವಿಷ್ಯ ನುಡಿದಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಕೆಶಿ ನಾಟಕ ಇಲ್ಲದ ರಾಜಕಾರಣಿ. ಅವರಿಗೆ ನಾಟಕ ಮಾಡಲು ಬರುವುದಿಲ್ಲ. ಸಿದ್ದರಾಮಯ್ಯ ಅವರ ನಂತರ ಸಿಎಂ ಆಗಲು ಏನಾದರೂ ಅವಕಾಶ ಸಿಕ್ಕರೆ ಅದು ಡಿ.ಕೆ.ಶಿವಕುಮಾರ್‌ ಅವರಿಗೇ ಸಿಗಲಿದೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದು, ಪಕ್ಷ ಸಂಘಟನೆ ಹಾಗೂ ಪಾದಯಾತ್ರೆ ರೂಪುರೇಷೆ ಸೇರಿ ಎಲ್ಲವನ್ನೂ ಯಶಸ್ವಿಯಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವೈಕುಂಠ ಏಕಾದಶಿ ದಿನ ಡಿಕೆಶಿ ಸಿಎಂ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅಜ್ಜಯ್ಯ ನ ಮೇಲೆ ನಿಷ್ಠೆ, ಧರ್ಮದ ಮೇಲೆ ಶೃದ್ದೆ ಡಿಕೆಶಿಗಿದೆ. ಗುರುಗಳ ಅನುಗ್ರಹದಿಂದ ಇದೇ ಸರಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್‌ ಸಿಎಂ ಸೀಟಲ್ಲಿ ಕೂರುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Fund Release: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅಧಿಕಾರಿ, ಶಿಕ್ಷಕರ ವೇತನಕ್ಕಾಗಿ 628.65 ಕೋಟಿ ಅನುದಾನ ಬಿಡುಗಡೆ

ನನ್ನ ರಕ್ಷಣೆಗಾಗಿ ಹೋಮ ನೆರವೇರಿಸಿರುವೆ‌ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗೆ, ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನವೂ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ವೈಕುಂಠ ಏಕಾದಶಿಯ ಪ್ರಯುಕ್ತ ಮಲ್ಲೇಶ್ವರದ ವೆಂಕಟೇಶ್ವರ ದೇಗುಲದಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.

ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ

ಗುರುವಾರ ತಮಿಳುನಾಡಿನ ದೇವಸ್ಥಾನಗಳಲ್ಲಿ ಹೋಮ ಮಾಡಿಸಿರುವ ಬಗ್ಗೆ ಕೇಳಿದಾಗ, ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು. ನನಗೆ ಧರ್ಮ, ದೇವರು, ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೊ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ ಎಂದು ಹೇಳಿದರು.

ಶತ್ರುಗಳ ನಾಶಕ್ಕೆ ಶಿವಕುಮಾರ್ ಹೋಮ ಮಾಡಿಸಿದ್ದಾರೆ ಎನ್ನುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಪ್ರತಿ ದಿನವೂ ನನಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡುತ್ತಿರುತ್ತೇನೆ. ನನಗೆ ಯಾರ‍್ಯಾರು ತೊಂದರೆ ಕೊಡುತ್ತಾರೆಯೋ ಅವರಿಂದ ನನಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು.

ನೀವು (ಮಾಧ್ಯಮ)ಗಳು ಸಹ ನನಗೆ ಬೇಕಾದಷ್ಟು ತೊಂದರೆ ಕೊಡುತ್ತಿರುತ್ತೀರಿ. ಇಲ್ಲದೇ ಇರುವ ಹೊಸ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾ ಇರುತ್ತೀರಿ. ಅದಕ್ಕಾಗಿ ನಿಮ್ಮಿಂದಲೂ ನಮಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಈ ಸುದ್ದಿಯನ್ನೂ ಓದಿ | Sankranti Festival 2025: ಸಂಕ್ರಾಂತಿಗೆ ಎಳ್ಳು-ಬೆಲ್ಲ ಹಂಚಲು ಬಂತು ಬಗೆಬಗೆಯ ಡಿಸೈನರ್ ಬಾಕ್ಸ್!

ವೆಂಕಟೇಶ್ವರನ ಜತೆ ಲಕ್ಷ್ಮಿ ಸೇರಿದಂತೆ ವೈಕುಂಠ ಏಕಾದಶಿಯ ದಿನದಂದು ಈ ರಾಜ್ಯದ ಎಲ್ಲರ ಮನೆಯಲ್ಲೂ ಐಶ್ವರ್ಯ ಹೆಚ್ಚಾಗಲಿ ಎಂದು ಪ್ರಾರ್ಥಿಸುತ್ತೇನೆ. ಇದು ನಮ್ಮ ನಂಬಿಕೆ, ಆಚಾರ ವಿಚಾರ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮವನ್ನು ನಾವು ಉಳಿಸಿದರೆ ಧರ್ಮವು ನಮ್ಮನ್ನು ಉಳಿಸುತ್ತದೆ. ವಿಷ್ಣುವಿನ ಸ್ವರೂಪವಾದ ವೆಂಕಟೇಶ್ವರನ ದರ್ಶನವನ್ನು ರಾಜ್ಯದ ನಾನಾ ಕಡೆಗಳಲ್ಲಿ ಜನರು ಮಾಡುತ್ತಿದ್ದಾರೆ. ಎಲ್ಲರಿಗೂ ದೇವರ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

Leave a Reply

Your email address will not be published. Required fields are marked *