Tuesday, 7th January 2025

Viral Post: ವೈರಲ್ ಆಯ್ತು 1986ರ ಸಂಗೀತ ರಸ ಸಂಜೆಯ ಪ್ಯಾಂಪ್ಲೆಟ್; ಯಾರ ಕಾರ್ಯಕ್ರಮವಿದು ಗೆಸ್ ಮಾಡಿ ನೋಡೋಣ…!?

ಬೆಂಗಳೂರು: ಹಳೆಯ ಕಾಲದ ಕಾರ್ಯಕ್ರಮಗಳ ಕರಪತ್ರಗಳು, ಟಿಕೆಟ್‌ಗಳು ಈ ಡಿಜಿಟಲ್ ಯುಗದಲ್ಲಿ (Digital Era) ವೈರಲ್ ಆಗುವುದು ಸಾಮಾನ್ಯ. ಸಾಮಾಜಿಕ ಜಾಲತಾಣಗಳು ಇಲ್ಲದೇ ಇದ್ದ ಆ ಕಾಲದಲ್ಲಿ ಯಾವುದೇ ಕಾರ್ಯಕ್ರಮಗಳ ಪ್ರಚಾರಕ್ಕೆ ಕರಪತ್ರಗಳು (Pamphlet) ಮತ್ತು ಬ್ಯಾನರ್‌ಗಳೇ ಆಧಾರವಾಗಿದ್ದವು. ಆದರೆ ಕಾಲ ಕಳೆದಂತೆ ಪ್ರಚಾರ ಮಾಧ್ಯಮಗಳಲ್ಲಿ ಕಾರ್ಯಕ್ರಮಗಳ ಜಾಹೀರಾತುಗಳು ಮೂಡಿ ಬರಲಾರಂಭಿಸಿದವು. ಆ ಬಳಿಕ ಡಿಜಿಟಲ್ ಮಾಧ್ಯಮಗಳ ಬಳಕೆ ಹೆಚ್ಚಾದಂತೆ ಇದೀಗ ಬಹುತೇಕ ಎಲ್ಲ ಕಾರ್ಯಕ್ರಮಗಳ ಪ್ರಚಾರಗಳು ಈ ಮೂಲಕವೇ ನಡೆಯುತ್ತದೆ. ಆದರೆ ಹಿಂದಿನ ಕಾಲದಲ್ಲಿ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸುತ್ತಿದ್ದ ಕರಪತ್ರಗಳು ಇದೀಗ ಶೇರ್ ಆಗುತ್ತಾ ವೈರಲ್ ಆಗುವುದು ಒಂದು ಹೊಸ ಟ್ರೆಂಡ್ ಆಗಿದೆ. ಅದಕ್ಕೆ ಪೂರಕವಾಗಿ ಅಣ್ಣಾವ್ರ ಸಂಗೀತ ಕಾರ್ಯಕ್ರಮವೊಂದರ ಕರಪತ್ರ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Post) ಆಗುತ್ತಿದೆ.

1986ನೇ ಇಸವಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಅಪ್ರತಿಮ ಕಲಾವಿದ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ, ಕನ್ನಡ ಚಿತ್ರಪ್ರೇಮಿಗಳ ಪಾಲಿನ ‘ಅಣ್ಣಾವ್ರು’ ಡಾ. ರಾಜ್ ಕುಮಾರ್ (Dr Raj Kumar) ಅವರು ಭಾಗವಹಿಸಿದ್ದ ಈ ಸಂಗೀತ ಕಾರ್ಯಕ್ರಮದ ಕರಪತ್ರ ಇದಾಗಿದ್ದು, ಸದ್ಯ ವೈರಲ್ ಆಗುವ ಮೂಲಕ ನೆಟ್ಟಿಗರು ವಾಹ್… ವಾಹ್… ಎನ್ನುವಂತಾಗಿದೆ.

ಈ ಸಂಗೀತ ಕಾರ್ಯಕ್ರಮ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ (Cubbon Park) ಟೆನ್ನಿಸ್ ಸ್ಟೇಡಿಯಂನಲ್ಲಿ (Tennis Stadium) ನಡೆದಿತ್ತು. ಈ ಕಾರ್ಯಕ್ರಮದ ಟಿಕೆಟ್ ದರ 30 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಇತ್ತು.

ಈ ಕರಪತ್ರವನ್ನು ‘ಕನ್ನಡ ದೇಶ ಗೆಲ್ಗೆ’ ಎಂಬ ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಆಗಿ ವೈರಲ್ ಆಗುತ್ತಿರುವಂತೆ ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆ ಕಾಲದ ಕರಪತ್ರದ ಸ್ವರೂಪ, ನಟ ಡಾ. ರಾಜ್ ಕುಮಾರ್ ಬಗ್ಗೆ ಹಾಗೂ ಪ್ರಮುಖ ಕಾರ್ಯಕ್ರಮಗಳ ಟಿಕೆಟ್ ದರಗಳ ಬಗ್ಗೆ ಇದೀಗ ನೆಟ್ಟಿಗರ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.

‘ಅಣ್ಣಾವ್ರ ಹಾಡುಗಳನ್ನು ಕೇಳುವುದಕ್ಕಾಗಿಯೇ ನಾನು 2 ಸಾವಿರ ರೂಪಾಯಿಗಳನ್ನು ಪಾವತಿಸಲು ಸಿದ್ಧನಿದ್ದೇನೆ’ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ. ‘ಸರಿದೂಗಿಸಲಾಗದ ಸ್ಟಾರ್ ಗಿರಿ ಮತ್ತು ಬೆಲೆ ಕಟ್ಟಲಾಗದ ವ್ಯಕ್ತಿತ್ವ ನಮ್ಮ ಅಣ್ಣಾವ್ರದ್ದು’ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Digital Arrest: ‘ಡಿಜಿಟಲ್ ಅರೆಸ್ಟ್’ ಜಾಲಕ್ಕೆ ಯೂಟ್ಯೂಬರ್ ಟ್ರ್ಯಾಪ್‌! 40 ಗಂಟೆಗಳ ಕಾಲ ಬಂಧಿಯಾಗಿದ್ದು ಹೇಗೆ?

ಇನ್ನು ಕೆಲವರು ಟಿಕೆಟ್ ದರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದು 30 ರೂ.ಗಳಿಂದ 200 ರೂ.ಗಳವರೆಗೆ ಆ ಕಾಲದಲ್ಲಿ ಇತ್ತು. ‘ಇದು ಜಾಸ್ತಿಯಾಗಲಿಲ್ಲವೇ? ಇದೇ ಮೊತ್ತಕ್ಕೆ ನಾನು ಒಂದು ಸೈಟ್ ಖರೀದಿಸುತ್ತಿದ್ದೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಟಿಕೆಟ್ ದರವನ್ನು ಸಮರ್ಥಿಸಿಕೊಂಡಿದ್ದಾರೆ. ‘ಟಿಕೆಟ್ ದರವನ್ನು ಬಿಟ್ಟುಬಿಡಿ, ಈ ಕಾರ್ಯಕ್ರಮದ ಉದ್ದೇಶವನ್ನು ನೋಡಿ. ಇಂತಹ ವ್ಯಕ್ತಿತ್ವ ಇರುವ ವ್ಯಕ್ತಿಗಳನ್ನು ನಾವಿಂದು ನೋಡಲು ಸಾಧ್ಯವೇ?’ ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು ಆ ಕಾಲದ ಸಿನೆಮಾ ಟಿಕೆಟ್ ದರಗಳ ಬಗ್ಗೆ ಗಮನ ಸೆಳೆದಿದ್ದಾರೆ. ʼ30 ರೂ. ಇವತ್ತು ನಮಗೆ ಕಡಿಮೆ ಎಂದುಕಂಡರೂ ಆ ಕಾಲದಲ್ಲಿ ಇದು ದೊಡ್ಡ ಮೊತ್ತವಾಗಿತ್ತು. ಆ ಕಾಲದಲ್ಲಿ ಗಾಂಧಿ ಕ್ಲಾಸ್ ಸಿನೆಮಾ ಟಿಕೆಟ್ 1 ರೂ. ಇತ್ತು. 1990ರ ಸುಮಾರಿಗೆ ಟೆಂಟ್ ಸಿನಿಮಾಗೆ ನಾನು 1.50 ರೂ. ಪಾವತಿಸಿದ್ದೆ’ ಎಂದು ಒಬ್ಬರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *