Thursday, 2nd January 2025

Viral video: ನಾನು ಅಣ್ಣಾಮಲೈ ಅಲ್ಲ ʼಸೊಣ್ಣಾಮಲೈʼ; ಚಾಟಿಯಿಂದ ಹೊಡೆದುಕೊಂಡು ಅಣಕಿಸಿದ ಲಾಯರ್‌ ಜಗದೀಶ್‌!

Viral video

ಬೆಂಗಳೂರು: ಅಣ್ಣಾ ಯೂನಿರ್ವಸಿಟಿಯಲ್ಲಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಚಾಟಿಯಿಂದ ಹೊಡೆದುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕ ಕೆ. ಅಣ್ಣಾಮಲೈ (K. Annamalai) ಟ್ರೋಲ್‌ ಆಗುತ್ತಿದ್ದಾರೆ. ಇದೆಂಥ ಹೋರಾಟ ಎಂದು ಹಲವರು ಗೇಲಿ ಮಾಡುತ್ತಿದ್ದಾರೆ. ಈ ನಡುವೆ ಬಿಗ್‌ ಬಾಸ್‌ ಖ್ಯಾತಿಯ ಲಾಯರ್‌ ಜಗದೀಶ್‌ (lawyer Jagadish) ಅವರು ಅಣ್ಣಾಮಲೈ ರೀತಿ ಪ್ರತಿಭಟನೆ ನಡೆಸಿದ್ದು, ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral video) ಆಗುತ್ತಿದೆ.

ಜಿಎಸ್‌ಟಿ ವಿರುದ್ಧವಾಗಿ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಲಾಯರ್‌ ಜಗದೀಶ್‌ ಹೇಳಿದ್ದು, ಪೆನ್ನು, ಪೆನ್ಸಿಲ್‌, ರಬ್ಬರ್‌ ಮೇಲೂ ಜಿಎಸ್‌ಟಿ ಹಾಕಿದ್ದಾರೆ. ಎಲ್ಲದರ ಮೇಲೂ ಜಿಎಸ್‌ಟಿ ಹಾಕಿದ್ದಾರೆ. ಮುಂದೆ ನಮ್ಮ ಅಂಗಾಂಗಳಿಗೂ ಜಿಎಸ್‌ಟಿ ಹಾಕಬಹುದು. ಆ ಮಟ್ಟಕ್ಕೆ ಸೀತಾರಾಮನ್‌ ಅವರು ಬಂದಿದ್ದಾರೆ. ಹಾಗಾಗಿ ಚಡಿ ಏಟಿನ ಮೂಲಕ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಕೈಯಲ್ಲಿ ಪಂಚೆ ಹಿಡಿದು ಚಾಟಿಯಂತೆ ಹೊಡೆದುಕೊಂಡು ವ್ಯಂಗ್ಯವಾಗಿ ಪ್ರತಿಭಟನೆ ಮಾಡಿದ್ದಾರೆ.

ನನ್ನ ಹೆಸರು ಸೊಣ್ಣಾಮಲೈ…ಕರ್ನಾಟಕದಲ್ಲಿ ನನ್ನನ್ನು ʼಚಿಂಗಂʼ ಎಂದು ಕರೆಯುತ್ತಿದ್ದರು. ಗುಜರಾತ್‌ನ ಟೀ ಮಾರುವವರು, ಸೇಟುಗಳು ನನ್ನನ್ನು ಕೆಲಸದಿಂದ ಬಿಡಿಸಿ, ತಮಿಳುನಾಡು ಸಿಎಂ ಮಾಡ್ತೀನಿ ಎಂದು ಕರೆದುಕೊಂಡು ಹೋಗಿ ಎರಡು ಎಲೆಕ್ಷನ್‌ನಲ್ಲಿ ಸೋಲಿಸಿದ್ರು. ಇದರಿಂದ ಬೇಸರ ಆಗಿದೆ ಎಂದು ಅಣ್ಣಾಮಲೈ ಅವರನ್ನು ಅಪಹಾಸ್ಯ ಮಾಡುತ್ತಾ ಲಾಯರ್‌ ಜಗದೀಶ್‌ ಪಂಚೆಯಿಂದ ಮಾಡಿದ ಚಾಟಿಯಿಂದ ಹೊಡೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ಆನ್‌ಲೈನ್ ಸ್ಕ್ಯಾಮರ್‌ಗೆ ಚಳ್ಳೆ ಹಣ್ಣು! ಯುವಕ ರಾಕ್ಸ್… ನಕಲಿ ಪೊಲೀಸ್‌ ಶಾಕ್‌- ತುಂಬಾ ಮಜವಾಗಿದೆ ಈ ವಿಡಿಯೊ

DMK ಸರ್ಕಾರದ ವಿರುದ್ಧ ಅಣ್ಣಾಮಲೈ ವಿನೂತನ ಪ್ರೊಟೆಸ್ಟ್‌

ತಮಿಳುನಾಡಿನ  ಬಿಜೆಪಿ ರಾಜ್ಯಾಧ್ಯಕ್ಷ (Tamil Nadu BJP state president) ಕೆ ಅಣ್ಣಾಮಲೈ (K Annamalai) ಅವರು ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ (Anna University Case) ಖಂಡಿಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ನಿನ್ನೆಯಷ್ಟೇ ಡಿಎಂಕೆ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ ಅವರು ಇದೀಗ ತಮ್ಮ ನಿವಾಸ ಎದುರು ಆರು ಬಾರಿ ಚಾಟಿಯಿಂದ ಮೈಮೇಲೆ ಹೊಡೆದುಕೊಂಡು ಪ್ರತಿಭಟಿಸಿದ್ದಾರೆ.

ಕೊಯಮತ್ತೂರಿನ ಕಾಲಪಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಯ ಎದುರು ತಮಿಳುನಾಡು ಅಣ್ಣಾಮಲೈ ತಮಗೆ ತಾವೇ ಚಾಟಿ ಏಟನ್ನು ಕೊಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಹಸಿರು ಧೋತಿ ಧರಿಸಿ, ಶರ್ಟ್ ಧರಿಸದೇ ಮನೆಯಿಂದ ಹೊರಬಂದಿದ್ದ ಅಣ್ಣಾಮಲೈ, ಚಾಟಿ ಬೀಸಿಕೊಂಡು ತಮ್ಮ ದೇಹವನ್ನೇ ದಂಡನೆಗೆ ಒಳಪಡಿಸಿಕೊಂಡಿದ್ದರು. ಏಳನೇ ಬಾರಿ ಚಾಟಿ ಬೀಸುತ್ತಿದ್ದಾಗ ಬಿಜೆಪಿ ಸದಸ್ಯರು ಅವರನ್ನು ತಡೆದಿದ್ದರು. ಆದರೆ, ಅಣ್ಣಾಮಲೈ ಪ್ರತಿಭಟನೆ ಶೈಲಿಯನ್ನು ಹಲವರು ಗೇಲಿ ಮಾಡುತ್ತಿದ್ದಾರೆ.