Wednesday, 1st January 2025

Vishwa Havyaka Sammelana: ಹುತಾತ್ಮ ಯೋಧರ ಜಾತಿ ಹುಡುಕುವ ಪ್ರವೃತ್ತಿ ಖಂಡನೀಯ: ಅಜಿತ್ ಹನಮಕ್ಕನವರ್

ಬೆಂಗಳೂರು: ʼʼಜಾತಿ ಎನ್ನುವ ಪಿಡುಗನ್ನು ಸೈನ್ಯ ಇಟ್ಟುಕೊಂಡಿಲ್ಲ. ಹುತಾತ್ಮರಾದ ಯೋಧರಲ್ಲಿ ಜಾತಿ ಹುಡುಕುವ ಕೆಟ್ಟ ಕಾರ್ಯವನ್ನು ಕೆಲವರು ಮಾಡುತ್ತಾರೆ. ಅಂತಹ ಹೀನ ಮನಸ್ಥಿತಿಗಳಿಗೆ ಈ ಕಾರ್ಯಕ್ರಮ ಸ್ಪಷ್ಟ ಉತ್ತರ. ಸಾವಿರಾರು ಸಂಖ್ಯೆಯಲ್ಲಿ ಹವ್ಯಕ ಬ್ರಾಹ್ಮಣ ಸಮುದಾಯದವರು ಯೋಧರಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯʼʼ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು (Vishwa Havyaka Sammelana).

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಡೆದ ಯೋಧ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ʼʼದೇಶದ ಗಡಿಯಲ್ಲಿ ಒಂದು ದಿನ ನಿಂತು ದೇಶ ಕಾಯ್ದರೂ ಅವರು ದೇಶದ ಗೌರವಕ್ಕೆ ಅರ್ಹರು. ಏಕೆಂದರೆ ಗಡಿ ಕಾಯುವುದು ಅತ್ಯಂತ ಕಷ್ಟದ ಕಾರ್ಯ. ನಾವಿಂದು ಇಲ್ಲಿ ಸಂಭ್ರಮದಿಂದ ಕಾರ್ಯಕ್ರಮವನ್ನು ಆಚರಿಸುತ್ತಿದ್ದರೆ ಅದಕ್ಕೆ ನಮ್ಮ ವೀರ ಯೋಧರು ಕಾರಣ. ನಾವು ಸುರಕ್ಷಿತರಾಗಿ ಇರುವಂತೆ ಅವರು ದೇಶವನ್ನು ಕಾಯುತ್ತಿರುವುದಕ್ಕೆ ನಾವು ಸುರಕ್ಷಿತರಾಗಿ ಸಂಭ್ರಮದಿಂದ ಇದ್ದೇವೆ. ಯೋಧರಿಗೆ ಮಾತ್ರವಲ್ಲ. ಯೋಧರ ಕುಟುಂಬದವರನ್ನು ಗೌರವಿಸುವಂತಾಗಬೇಕು. ಯೋಧರ ಕುಟುಂಬದ ತ್ಯಾಗಕ್ಕೆ ಬೆಲೆ ಕಟ್ಟಲಾಗದುʼʼ ಎಂದು ತಿಳಿಸಿದರು.

ʼʼಯೋಧರು ಗಡಿ ಕಾಯುತ್ತಿದ್ದರೆ, ಇಲ್ಲಿ ಅವರ ಕುಟುಂಬಕ್ಕೆ ಪ್ರಾಶಸ್ತ್ಯ ಹಾಗೂ ಗೌರವವನ್ನು ಕೊಡುವ ಕಾರ್ಯವನ್ನು ಸಮಾಜ ಮಾಡಬೇಕು. ಯೋಧರು ದೇಶದ ಗಡಿಯಲ್ಲಿ ಮಾತ್ರ ಹೋರಾಡುವಂತಾಗಬೇಕು. ದೇಶದ ಒಳಗೂ ಅವರು ಹೋರಾಡುವ ಪರಿಸ್ಥಿತಿಯನ್ನು ಸಮಾಜ ತಂದೊಡ್ಡಬಾರದುʼʼ ಎಂದು ಅಭಿಪ್ರಾಯಪಟ್ಟರು.

ದೇಶರತ್ನ ಪುರಸ್ಕಾರದಿಂದ ಉತ್ತೇಜನ

ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಂದೇಶ್ ಎಚ್.ಪಿ. ಮಾತನಾಡಿ, ʼʼಯೋಧರ ಬೆವರು ಹಾಗೂ ರಕ್ತದ ಕಾರಣದಿಂದಾಗಿ ದೇಶ ಸುಭದ್ರವಾಗಿದೆ. ದೇಶರತ್ನ ಪುರಸ್ಕಾರ ಯೋಧರಿಗೆ ಹುರುಪನ್ನು ನೀಡಿ ಅವರ ಜವಾಬ್ದಾರಿಯನ್ನು ಹೆಚ್ಚಿಸುವುದರ ಜತೆಗೆ ಅವರು ಕರ್ತವ್ಯವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ಪ್ರೋತ್ಸಾಹ ನೀಡುತ್ತದೆ. ಕೃಷಿ, ಶಿಕ್ಷಕ, ಯೋಧ, ಸಾಧಕ ಮುಂತಾದ ವಿಭಾಗಗಳಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೌಟುಂಬಿಕ ಆತ್ಮೀಯತೆಯನ್ನು ಉಳಿಸಿಕೊಳ್ಳಬೇಕು

ಭೀಮೇಶ್ವರ ಜೋಷಿ ಹೊರನಾಡು ಮಾತನಾಡಿ, ʼʼಸಹಸ್ರ ಚಂದ್ರ ದರ್ಶನದ ಮೂಲಕ ಹವ್ಯಕ ಮಹಾಸಭೆ ಪರಿಪೂರ್ಣತೆಯನ್ನು ಸಾಧಿಸಿದೆ. ಹಿಂದೆ ಅಮೃತಮಹೋತ್ಸವದ ಸಂದರ್ಭದಲ್ಲಿ ಇದ್ದಂತಹ ಕೆಲವಾರು ಕೊರತೆಗಳನ್ನು ಈ ಸಮ್ಮೇಳನ ನೀಗಿಸಿದೆ. ಧಾರ್ಮಿಕ – ಸಾಮಾಜಿಕ – ಸಾಂಸ್ಕೃತಿಕ ಮುಂತಾದ ಎಲ್ಲ ರೀತಿಯ ಕಾರ್ಯಕ್ರಮಗಳ ವೈವಿಧ್ಯತೆಯಿಂದ ಇದೊಂದು ಬೃಹತ್ ಸಮ್ಮೇಳನವಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆಯ ಈ ಸಮಾಜ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರಮಠದ ಶ್ರೀಗಳು ಹೇಳಿದಂತೆ ಸಮಾಜ ಪಾಲಿಸುವ ಮೂಲಕ ನಾವು ಸಮಸ್ಯೆಗಳಿಗೆ ಉತ್ತರಿಸಬೇಕಿದೆ. ಐಟಿಬಿಟಿ ಕಾಲದಲ್ಲೂ ನಾವು ನಮ್ಮ ಕೌಟುಂಬಿಕ ಆತ್ಮೀಯತೆಯನ್ನು ಉಳಿಸಿಕೊಳ್ಳಬೇಕುʼʼ ಎಂದು ಕರೆ ನೀಡಿದರು.

ಹವಿಗನ್ನಡವನ್ನೇ ಬಳಸಿ

ಹೊಸದಿಗಂತ ಪ್ರತಿಕೆಯ ಸಮೂಹ ಸಂಪಾದಕ ವಿನಾಯಕ ಭಟ್ ಮೂರೂರು ಅಭಿಪ್ರಾಯ ವ್ಯಕ್ತಪಡಿಸಿ, ʼʼನಮ್ಮ ಸಂಸ್ಕೃತಿ ಹಾಗೂ ನಮ್ಮ ಭಾಷೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲೇ ಇದ್ದು, ಭಾಷೆ ಉಳಿದರಷ್ಟೇ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮ ಭಾಷೆಯಲ್ಲಿ ಮಾತನಾಡಲು ನಾವು ಹಿಂಜರಿದುಕೊಳ್ಳಬಾರದು, ನಮ್ಮವರ ಜತೆ ವ್ಯವಹರಿಸುವಾಗ ಹವಿಗನ್ನಡವನ್ನೇ ಬಳಸಬೇಕು. ಹಾಗಾಗಿ ನಾವು ಹವಿಗನ್ನಡವನ್ನೇ ಬಳಸುವ ಮೂಲಕ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕುʼʼ ಎಂದು ಸಲಹೆ ನೀಡಿದರು.

ಹವ್ಯಕರ ಗುರುಪೀಠಗಳಿಗೆ ಯತಿಶ್ರೇಷ್ಠರನ್ನು ನೀಡಿದ ಮಾತಾಪಿತರಿಗೆ ಸನ್ಮಾನ

ಇದೇ ವೇಳೆ ಹವ್ಯಕರ ಗುರುಪೀಠಗಳಿಗೆ ಯತಿಶ್ರೇಷ್ಠರನ್ನು ನೀಡಿದ ರಾಮಚಂದ್ರಾಪುರಮಠದ ಗುರುಗಳ ಪೂರ್ವಾಶ್ರಮದ ತಂದೆತಾಯಿ, ಸ್ವರ್ಣವಲ್ಲೀ ಮಠದ ಹಿರಿಯ ಶ್ರೀಗಳ ಪೂರ್ವಾಶ್ರಮದ ತಾಯಿ, ಸ್ವರ್ಣವಲ್ಲಿ ಮಠದ ಕಿರಿಯ ಶ್ರೀಗಳ ಪೂರ್ವಾಶ್ರಮದ ತಂದೆ ತಾಯಿ, ನೆಲಮಾವಿನ ಮಠದ ಶ್ರೀಗಳ ಪೂರ್ವಾಶ್ರಮದ ತಂದೆ ತಾಯಿಯರನ್ನು ಸನ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ: Vishwa Havyaka Sammelana: ಸಂಪ್ರದಾಯ ಉಳಿಯಬೇಕಿದ್ದರೆ ಅದು ಆಚರಣೆಯಲ್ಲಿರಬೇಕು: ಮಾಧವಾನಂದ ಭಾರತೀ ಸ್ವಾಮೀಜಿ