ಬೆಂಗಳೂರು: ʼʼಹವ್ಯಕ ಬ್ರಾಹ್ಮಣರಿಗೆ ಮತ್ತು ಇಸ್ರೇಲಿನ ಯಹೂದಿಯರ ಮಧ್ಯೆ ಶೇ. 100ರಷ್ಟು ಸಾಮ್ಯತೆ ಇದೆ. ನಾನು ಆ ದೇಶಕ್ಕೆ 9 ಬಾರಿ ಹೋಗಿ ಬಂದಿದ್ದೇನೆ. ಆ ದೇಶ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ದೊಡ್ಡದು. 52 ವೈರಿ ರಾಷ್ಟ್ರಗಳನ್ನು ಎದುರು ಹಾಕಿಕೊಂಡು ಇಸ್ರೇಲ್ ಅತ್ಯಂತ ಭದ್ರವಾಗಿ ನೆಲೆಯೂರಿದೆ. ಅದೇ ರೀತಿ ಹವ್ಯಕರು ಕೂಡʼʼ ಎಂದು ವಿಶ್ವವಾಣಿ ಸಂಪಾದಕ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ (Vishweshwar Bhat) ಅಭಿಪ್ರಾಯಪಟ್ಟರು (Vishwa Havyaka Sammelana).
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಮಾತನಾಡಿದರು. ʼʼಇದುವರೆಗೆ ಸುಮಾರು 950 ವಿಜ್ಞಾನಿಗಳಿಗೆ ಮತ್ತು ಪರಿಣಿತರಿಗೆ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ನೀಡಲಾಗಿದೆ. ಆ ಪೈಕಿ 650ಕ್ಕೂ ಹೆಚ್ಚು ಪ್ರಶಸ್ತಿ ಇಸ್ರೇಲಿಗರಿಗೇ ಲಭಿಸಿದೆ. ಹಾಗೆಯೇ ಹವ್ಯಕರ ಜನಸಂಖ್ಯೆ ಹೆಚ್ಚೆಂದರೆ 4 ಲಕ್ಷ ಇರಬಹುದು. ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ ಹವ್ಯಕರು ಇಂತಹ ಅದ್ಭುತ ಸಮಾವೇಶ ಮಾಡುವುದರ ಜತೆಗೆ ರಾಜ್ಯ, ರಾಷ್ಟ್ರ ಮತ್ತು ವಿದೇಶದಲ್ಲಿ ತಮ್ಮ ಅಸ್ತಿತ್ವವನ್ನು ಸಾರಿದ್ದಾರೆ. ಉಳಿದ ಜಾತಿಯವರ ಹಾಗೆ ಹವ್ಯಕರ ಸಂಖ್ಯೆ ಹೆಚ್ಚಿದ್ದರೆ ರಾಜ್ಯವನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದೆವು. ಇಸ್ರೇಲಿಗರು ಹೀಬ್ರೂ ಭಾಷೆ ಮಾತನಾಡಿದರೆ ನಾವು ಹವ್ಯಕ ಕನ್ನಡ ಮಾತನಾಡುತ್ತೇವೆ. ಅವರಿಗೂ ನಮಗೂ ಯಾವುದೇ ರೀತಿಯಲ್ಲೂ ವ್ಯತ್ಯಾಸವಿಲ್ಲʼʼ ಎಂದರು.
ʼʼಸಮ್ಮೇಳನಕ್ಕೆ ಬಂದಾಗ ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ ಅವರಿಗೆ ಯಾವುದಾದರೂ ಸಲಹೆ ನೀಡಬಹುದಾ ಎನ್ನುವುದನ್ನು ಆಲೋಚಿಸುತ್ತಿದ್ದೆ. ಯಾವುದೇ ನ್ಯೂನತೆಯನ್ನು ಕಂಡು ಹಿಡಿಯುವಲ್ಲಿ ನನ್ನ ಪತ್ರಕರ್ತನ ಕಣ್ಣು ವಿಫಲವಾಗಿದೆ. ಹೇಳುವಂತಹ ಯಾವುದೇ ಕುಂದು-ಕೊರತೆ ನನಗೆ ಕಂಡು ಬಂದಿಲ್ಲ. ನನಗೆ ಕಾಣಲಿಲ್ಲ ಎನ್ನುವ ಕಾರಣಕ್ಕೆ ಬಂದವರಲ್ಲಿ ಕೇಳಿದೆ. ಅವರೂ ಯಾವುದೇ ದೂರು ಹೇಳಲಿಲ್ಲ. ಹೀಗಾಗಿ 3 ದಿನ ನಡೆದ ಈ ಸಮ್ಮೇಳನ ಸರ್ವಾರ್ಥದಲ್ಲಿ ಯಶಸ್ವಿಯಾಗಿದೆʼʼ ಎಂದು ತಿಳಿಸಿದರು.
ಯತಿ ಶ್ರೇಷ್ಠರ ಸಂದೇಶ
ʼʼಹವ್ಯಕ ಸಂತತಿಯ ಪುನರುತ್ಥಾನ ಆಗಬೇಕು, ಬೆಳೆಯಬೇಕು ಎಂದು ಯತಿ ಶ್ರೇಷ್ಠರು ಸಂದೇಶ ನೀಡಿದ್ದಾರೆ. ಕೇವಲ ಬೆಳೆಯಬೇಕು ಎಂದಿಲ್ಲ; ಸಂತಾನವನ್ನು ಬೆಳೆಸಿದರೆ ಅದರ ಯೋಗ ಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಮ್ಮ ಮಠಗಳು ಹೊರುತ್ತವೆ ಎಂದಿದ್ದಾರೆ. ಹಿಂದೆಲ್ಲ ಹವ್ಯಕರು ಹೆಚ್ಚಿನ ಸಂತಾನ ಹೊಂದಿದ್ದರು. ಕ್ರಮೇಣ ಅದು ಕಡಿಮೆಯಾಗುತ್ತ ಬಂತು. ಹೀಗಾಗಿ ಸಂತಾನವನ್ನು ಹೆಚ್ಚಿಸಲು ಹವ್ಯಕರು ಮಾಡು ಇಲ್ಲವೇ ಮಡಿ ತತ್ವವನ್ನು ಅಳವಡಿಸಿಕೊಳ್ಳಬೇಕು. ಅಂದರೆ ಸಂತಾನೋತ್ಪತ್ತಿ ಹೆಚ್ಚಿಸದಿದ್ದರೆ ಹವ್ಯಕ ಸಂತತಿ ಮಡಿಯುತ್ತದೆ ಅರ್ಥಾತ್ ನಾಶವಾಗುತ್ತದೆ. ಇದು ತಮಾಷೆಯ ವಿಚಾರವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಹವ್ಯಕತನವನ್ನು ಉಳಿಸಿಕೊಳ್ಳಬೇಕಾದ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕುʼʼ ಎಂಸು ಕರೆ ನೀಡಿದರು.
ʼʼಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಮತ್ತು ಹವ್ಯಕ ಹುಡುಗರಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹು ದೊಡ್ಡ ಚರ್ಚೆಯಾಗುತ್ತಿದೆ. ಈ ಸಮಸ್ಯೆ ಹವ್ಯಕರನ್ನು ಮಾತ್ರವಲ್ಲ ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಹವ್ಯಕರದ್ದು ಮೂಲತಃ ಜ್ಞಾನ ಆಧಾರಿತ ಜಗತ್ತು. ನಾವು ಅದ್ಭುತ ಕಾಲಘಟ್ಟದಲ್ಲಿ ವಾಸಿಸುತ್ತಿದ್ದೇವೆ. ಯಾವುದೇ ಗುರಿಯನ್ನು ಹೊಂದಿದರೆ ಅದನ್ನು ಸಾಧಿಸಲು ಸಾಧ್ಯವಿದೆ. ಹೀಗಾಗಿ ನಮ್ಮ ಮುಂದೆ ಹರಡಿರುವ ಸದಾವಕಾಶವನ್ನು ಸ್ವೀಕರಿಸುವ ಸಂಕಲ್ಪ ಕೈಗೊಳ್ಳಬೇಕುʼʼ ಎಂದು ಸಲಹೆ ನೀಡಿದರು.
ನಮ್ಮತನ ಉಳಿಸಿ ಬೆಳೆಸಿ
ʼʼಸುಮಾರು 30 ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆ ಅವರು, ನಾವು ಬೇರೆಯವರಿಗೆ ನೀವು ಜಾತಿಯವರು ಎಂದು ಕೇಳಬಾರದು. ನಮ್ಮ ಜಾತಿಯನ್ನೂ ಹೇಳಬಾರದು. ಆದರೆ ನಮ್ಮ ಹಸರಿನಿಂದ ಜಾತಿ ಗೊತ್ತಾಗಬೇಕು. ಆದ್ದರಿಂದ ನೀವು ವಿಶ್ವೇಶ್ವರ ಭಟ್ಟ ಎಂದು ಹೆಸರಿಟ್ಟುಕೊಂಡಿದ್ದು ಯೋಗ್ಯವಾಗಿದೆ ಎಂದಿದ್ದರು. ನಾನು 35 ವರ್ಷದಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಇದುವರೆಗೆ ಯಾರೂ ನನ್ನಲ್ಲಿ ಜಾತಿ ಯಾವುದೆಂದು ಕೇಳಿಲ್ಲ. ಇತ್ತೀಚೆಗೆ ಯಾರೂ ತಮ್ಮ ಹೆಸರಿನ ಮುಂದೆ ಶರ್ಮ, ಭಟ್ಟ, ಹೆಗಡೆ, ಭಾಗವತ ಮುಂತಾದ ಸರ್ ನೇಮ್ ಇಟ್ಟುಕೊಳ್ಳುತ್ತಿಲ್ಲ. ಇದು ಬಹಳ ಅಚ್ಚರಿ ಉಂಟು ಮಾಡುತ್ತೆ. ನಮ್ಮತನ ಎನ್ನುವುದು ಬಹಳ ಮುಖ್ಯ. ನಮ್ಮ ಭಾಷೆ ಮುಖ್ಯ. ಹವ್ಯಕ ಕನ್ನಡವನ್ನು ನಾವೇ ಮಾತನಾಡಬೇಕು. ಇದನ್ನು ಉಳಿಸಿಬೇಕಾದವರು ಹವ್ಯಕರೇ. ಕನಿಷ್ಠ ನಮ್ಮ ಮನೆಯಲ್ಲಾದರೂ ಮಾತನಾಡೋಣ. ನಮ್ಮತನ ಇರುವುದು ಭಾಷೆ, ಸಂಸ್ಕೃತಿ, ಒಡನಾಟ, ವರ್ತನೆ, ದೈನಂದಿನ ಚಟುವಟಿಕೆಯಲ್ಲಿʼʼ ಎಂದು ತಿಳಿಸಿದರು.
ʼʼಎಲ್ಲೇ ಇದ್ದರೂ ಆ ಮನೆಯನ್ನು ಪುಟ್ಟ ಹವ್ಯಕ ಪ್ರಪಂಚವನ್ನಾಗಿ ಮಾಡೋಣ. ನಾವು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹವ್ಯಕ ಸಂಸ್ಕೃತಿಯ ರಾಯಭಾರಿಯಾಗಿರೋಣʼʼ ಎಂದು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ: Vishwa Havyaka Sammelana: ಪರಂಪರೆಯ ನೆರವಿನಿಂದ ಭವ್ಯ ಭಾರತ ಕಟ್ಟೋಣ: ಬಿ.ಎಸ್.ಯಡಿಯೂರಪ್ಪ