ಬೆಂಗಳೂರು: ʼʼಎಲ್ಲ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು ಎಂಬ ಜ್ಞಾನಿಗಳ ಮಾತಿನಂತೆ ಈ ಹವ್ಯಕ ಸಮಾಜ ಸದಾ ನಡೆದುಕೊಳ್ಳತ್ತಿದೆ. ನಮ್ಮ ಪರಂಪರೆಯ ಆಚರಣೆಯ ಜತೆ ಜತೆಗೆ ನಾವೆಲ್ಲ ಒಂದಾಗಿ ಭಾರತವನ್ನು ಕಟ್ಟೋಣʼʼ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S. Yediyurappa) ಕರೆ ನೀಡಿದರು (Vishwa Havyaka Sammelana).
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಮಾತನಾಡಿದರು. ʼʼಹವ್ಯಕ ಸಮಾಜದ ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸಿದ್ದೇನೆ. ಅಡಿಕೆ ಕೃಷಿಕರ ಬೆಂಬಲಕ್ಕೆ ನಾನು ಸದಾ ಇದ್ದು, ಅಡಿಕೆ ಕೃಷಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅಗತ್ಯ ಬೆಂಬಲ ನೀಡುತ್ತೇವೆʼʼ ಎಂದು ತಿಳಿಸಿದರು.
ಸಮಸ್ಯೆ, ಪರಿಹಾರಗಳ ಚರ್ಚೆ ಸ್ವಾಗತಾರ್ಹ: ಎಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ʼʼಇಲ್ಲಿ ನೀವೆಲ್ಲ 3 ದಿನಗಳ ಕಾಲ ಹವ್ಯಕ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರೆದಿಡುವುದರ ಜತೆಗೆ ಹವ್ಯಕ ಸಮಾಜದ ಜ್ವಲಂತ ಸಮಸ್ಯೆಗಳ ಹಾಗೂ ಪರಿಹಾರಗಳ ಕುರಿತು ಚರ್ಚಿಸಿರುವುದು ಸ್ವಾಗತಾರ್ಹ. ಸಮಾಜದ ಕುರಿತಾದ ಚಿಂತನ-ಮಂಥನಗಳು ಆಗಾಗ ನಡೆದಾಗ ಸರಿದಾರಿಯಲ್ಲಿ ನಡೆಯಲು ಸಾಧ್ಯ. ರಾಮಚಂದ್ರಾಪುರ ಮಠದ ಶ್ರೀಗಳು ಸೂಚಿಸಿದಂತೆ ಜನಸಂಖ್ಯಾ ಕುಸಿತದ ಬಗ್ಗೆ ಸಮಾಜ ಆಲೋಚಿಸಬೇಕಿದೆʼʼ ಎಂದು ಹೇಳಿದರು.
ʼʼಹವ್ಯಕ ಬ್ರಾಹ್ಮಣರಲ್ಲಿ ಕೃಷಿಯನ್ನು ನಂಬಿ ಬದುಕುವವರ ಸಂಖ್ಯೆ ಹೆಚ್ಚಿದೆ. ಕೇಂದ್ರ ಸರ್ಕಾರ ಕೃಷಿಕರ ಜತೆಗಿದ್ದು, ಅಡಿಕೆ ಕೃಷಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಹವ್ಯಕ ಸಮಾಜದ ಜತೆ ಸದಾ ಇದ್ದು, ಹವ್ಯಕ ಸಮಾಜಕ್ಕೆ ಬೆಂಬಲ ಇರಲಿದೆʼʼ ಎಂದು ಭರವಸೆ ನೀಡಿದರು. ʼʼಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಇನ್ನೊಂದೆಡೆ ನಾವು ಜಗತ್ತಿನ ಆರ್ಥಿಕ ಶಕ್ತಿಯಾಗುತ್ತಿದ್ದೇವೆ. ನಾವು ಇವುಗಳನ್ನು ಸರಿದೂಗಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕುʼʼ ಎಂದು ತಿಳಿಸಿದರು.
ಈ ಸಮಾಜದ ಕೊಡುಗೆ ಅನುಪಮ: ಸಿ.ಟಿ.ರವಿ
ಬಿಜೆಪಿ ನಾಯಕ ಸಿ.ಟಿ.ರವಿ ಮಾತನಾಡಿ, ʼʼಕೇವಲ ಜ್ಞಾನಕ್ಕಾಗಿ ಮಾತ್ರವಲ್ಲ, ದೇಶಭಕ್ತಿ, ರಾಷ್ಟ್ರೀಯ ವಿಚಾರಧಾರೆ ವಿಚಾರದಲ್ಲೂ ಈ ಸಮಾಜದ ಕೊಡುಗೆ ಅನುಪಮವಾಗಿದೆ. ಈ ಸಮಾಜದ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಆತಿಥ್ಯ ಪರಂಪರೆಯನ್ನು ಮುನ್ನಡೆಸುತ್ತಿದೆ. ನಾವು ಕಾಶ್ಮೀರ ಹಾಗೂ ಬಾಂಗ್ಲಾಗಳನ್ನು ನೋಡಿದ ನಂತರವೂ ಪಾಠ ಕಲಿಯದಿದ್ದರೆ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾದೀತುʼʼ ಎಂದು ಹೇಳಿದರು.
ಧರ್ಮ ಪ್ರಚಾರ ಕಾರ್ಯ: ಶ್ರೀ ಶಂಕರವಿಜಯೇಂದ್ರ ಸರಸ್ವತೀ ಮಹಾಸ್ವಾಮಿ
ಕಾಂಚಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶಂಕರವಿಜಯೇಂದ್ರ ಸರಸ್ವತೀ ಮಹಾಸ್ವಾಮಿ ಮಾತನಾಡಿ, ʼʼಹವ್ಯಕ ಸಮಾಜ ಧರ್ಮ ಪ್ರಚಾರ ಕಾರ್ಯದಲ್ಲಿ ಪುಮುಖವಾಗಿ ತೊಡಗಿಸಿಕೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಹವ್ಯಕ ಸಮಾಜ ಸಂಘಟಿತರಾಗಬೇಕು ಹಾಗೂ ಎಲ್ಲ ಸಮುದಾಯಗಳು ಒಟ್ಟಾಗಿ ಸೇರಿ ಸಂಸ್ಕೃತಿಯನ್ನು ಉಳಿಸುವಂತಾಗಬೇಕುʼʼ ಎಂದು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ: Vishwa Havyaka Sammelana: ಸೂಕ್ತ ವಯಸ್ಸಿಗೆ ವಿವಾಹ, ಗೀತ ಪಾರಾಯಣ: ಹವ್ಯಕ ಸಮಾಜದ ಉಳಿವಿಗೆ ಸೂತ್ರ ತಿಳಿಸಿದ ಸ್ವರ್ಣವಲ್ಲಿ ಶ್ರೀ