Wednesday, 1st January 2025

Vishwa Havyaka Sammelana: ಸೂಕ್ತ ವಯಸ್ಸಿಗೆ ವಿವಾಹ, ಗೀತ ಪಾರಾಯಣ: ಹವ್ಯಕ ಸಮಾಜದ ಉಳಿವಿಗೆ ಸೂತ್ರ ತಿಳಿಸಿದ ಸ್ವರ್ಣವಲ್ಲಿ ಶ್ರೀ

Vishwa Havyaka Sammelana

ಬೆಂಗಳೂರು: ʼʼನೈತಿಕತೆಯ ಪತನ, ಜನಸಂಖ್ಯೆಯ ಕುಸಿತದಂತಹ ಜ್ವಲಂತ ಸಮಸ್ಯೆ ಎದುರಿಸುತ್ತಿರುವ ಹವ್ಯಕ ಸಮಾಜದ ಉಳಿವಿಗೆ ಇರುವ ಸೂತ್ರ ಕೇವಲ 2. ಅದರಲ್ಲಿ ಒಂದು ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ. ಮತ್ತೊಂದು ಗೀತ ಪಾರಾಯಣʼʼ ಎಂದು ಶಿರಸಿ ಸ್ವರ್ಣವಲ್ಲಿ ಮಠದ ಶ್ರೀಮದ್ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ (Shri Gangadharendra Saraswati Swamiji) ಹೇಳಿದರು (Vishwa Havyaka Sammelana).

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಹಸ್ರ ಚಂದ್ರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ʼʼಪ್ರಸ್ತುತ ನಾಸ್ತಿಕತೆ ಮತ್ತು ಭೋಗಜೀವನದತ್ತ ವಾಲಿರುವ ಹವ್ಯಕ ಜೀವನ ಪದ್ಧತಿಯಿಂದ ಖಂಡಿತ ನೆಮ್ಮದಿಯಿಲ್ಲ. ನಕಾರಾತ್ಮಕ ವಿಷಯಗಳನ್ನು ಪೋಷಿಸುವ ಕಾರ್ಯ ಆಧುನಿಕ ವ್ಯವಸ್ಥೆ ಒದಗಿಸುತ್ತಿದೆ. ಇದರ ಪರಿಣಾಮ ವಿವಾಹ ವ್ಯವಸ್ಥೆಯಿಂದ ವಿಮುಖರಾಗುತ್ತಿರುವ ಯುವ ಜನತೆ ಅಧರ್ಮ ಮಾರ್ಗ ಅನುಸರಿಸುತ್ತಿದೆ. ಧರ್ಮ ಪ್ರಜ್ಞೆಯಿಲ್ಲದೆ ಆಧುನಿಕ ವಿಜ್ಞಾನದ ಮೊರೆಹೊಕ್ಕಿರುವ ಪರಿಣಾಮ ಹವ್ಯಕ ಸಮಾಜದ ಪತನಕ್ಕೆ ಕಾರಣವಾಗುತ್ತಿದೆ ಮತ್ತು ವಿವಾಹ ವಿಚ್ಛೇದನ ಕೂಡ ಸಮಸ್ಯೆಯಾಗಿದೆ. ಇದಕ್ಕೂ ಕಾನೂನಿನಲ್ಲಿ ವಿಫುಲ ಅವಕಾಶವಿರುವುದೇ ಸಮಸ್ಯೆಯ ಮೂಲವಾಗಿದೆ. ಆಡಂಬರಕ್ಕೆ ಪ್ರಾಧಾನ್ಯತೆ ಕೊಡುವ ನಾವು ಶಾಸ್ತ್ರೀಯತೆಗೆ ಅವಕಾಶ ಕೊಡುತ್ತಿಲ್ಲʼʼ ಎಂದು ಹೇಳಿದರು.

ಆಧ್ಯಾತ್ಮ ವಿದ್ಯೆ ಶ್ರೇಷ್ಠ

ʼʼಹವ್ಯಕ ಸಮಾಜ ಉಳಿಯ ಬೇಕು. ಆದರೆ ಹೇಗ್‌ಹೇಗೋ ಉಳಿದರೆ ಪ್ರಯೋಜನವಿಲ್ಲ. ಹವ್ಯ-ಕವ್ಯದ ಜತೆಗೆ ಬ್ರಹ್ಮ ಜ್ಞಾನಿಯಾದರೆ ಮಾತ್ರ ಉಳಿವಿದೆ. ಆಧ್ಯಾತ್ಮ ವಿದ್ಯೆಯು ಎಲ್ಲ ವಿದ್ಯೆಗಿಂತ ಶ್ರೇಷ್ಠ. ಹಾಗಾಗಿಯೇ ಸಂಸ್ಕಾರ ಹಿನ್ನಡೆಗೆ ಗೀತ ಪಾರಾಯಣ, ಜನಸಂಖ್ಯೆ ಹಿನ್ನಡೆಗೆ ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಪರಿಹಾರʼʼ ಎಂದು ತಿಳಿಸಿದರು.

ಕೃಷಿ ಉಳಿಸಿ, ಹಳ್ಳಿ ಬೆಳೆಸಿ

ಸ್ವರ್ಣವಲ್ಲಿ ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಆನಂದಭೋದೇಂದ್ರ ಸರಸ್ವತಿ ಶ್ರೀಗಳು ಮಾತನಾಡಿ, ʼʼಹಳ್ಳಿ ಶ್ರೇಷ್ಠ ಜೀವನ ಎನ್ನುವುದನ್ನು ತೋರಿಸಿದವರೇ ಹವ್ಯಕರು. ಈಗ ಹಳ್ಳಿಯಿಂದ ಪಟ್ಟಣದತ್ತ ವಲಸೆ ಹೆಚ್ಚುತ್ತಿದ್ದು, ನಮ್ಮ ಸಲಹೆ ಧರ್ಮ ರಕ್ಷಣೆಯ ಜತೆಯಲ್ಲಿ ಕೃಷಿ ಉಳಿಸಿ, ಹಳ್ಳಿ ಬೆಳೆಸಿʼʼ ಎಂದು ಕರೆ ನೀಡಿದರು.

ಸಚಿವ ಎಚ್.ಕೆ. ಪಾಟೀಲ್‌ ಮಾತನಾಡಿ, ʼʼಜಾತ್ಯಾತೀತ ನಾಯಕತ್ವ ನೀಡಬಹುದಾದ ಸಮಾಜವೆಂದರೆ ಅದು ಹವ್ಯಕ ಸಮಾಜ. ಇದಕ್ಕೆ ದೊಡ್ಡ ಉದಾಹರಣೆ ರಾಮಕೃಷ್ಣ ಹೆಗಡೆ. ಮಾತ್ರವಲ್ಲ ಹವ್ಯಕರು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಗಳು. ಇಂದಿಗೂ ಸಹಕಾರಿ ಸಂಸ್ಥೆಗಳ ಯಶಸ್ಸಿಗೆ ಹವ್ಯಕರ ಕೊಡುಗೆ ಅಪಾರʼʼ ಎಂದರು.

ಬೆಂಗಳೂರು ರಾಮಕೃಷ್ಣಾಶ್ರಮದ ಚಂದ್ರಶೇಖರಾನಂದ ಸ್ವಾಮೀಜಿ ಮಾತನಾಡಿ, ʼʼಹವ್ಯಕ ಸಮಾಜ ತನ್ನ ಪ್ರತಿಭಾ ಶ್ರೇಷ್ಠತೆಯಿಂದ ಉಳಿದ ಸಮಾಜಕ್ಕೂ, ವಿಶ್ವಕ್ಕೂ ಮಾದರಿಯಾಗಿರುವುದನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ. ವೈಚಾರಿಕತೆಯ ಜತೆಯಲ್ಲಿ ತಮ್ಮ ಸಂಸ್ಕೃತಿಯ ಮೈಗೂಡಿಸಿಕೊಂಡು ಸಮಾಜ ಕಟ್ಟುವ ಅವರ ನಡೆ ಇತರರಿಗೆ ಮಾದರಿʼʼ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Vishwa Havyaka Sammelana: ಹುತಾತ್ಮ ಯೋಧರ ಜಾತಿ ಹುಡುಕುವ ಪ್ರವೃತ್ತಿ ಖಂಡನೀಯ: ಅಜಿತ್ ಹನಮಕ್ಕನವರ್