Saturday, 28th December 2024

Vishwa Havyaka Sammelana: ‘ನಾನು’ ಸತ್ತಾಗ ಮಾತ್ರ ಸಮಾಜದ ಉದ್ಧಾರ ಸಾಧ್ಯ: ರಾಘವೇಶ್ವರಭಾರತೀ ಶ್ರೀ

ಬೆಂಗಳೂರು: ನಾನು, ನನ್ನ ಎಂಬ ಶಬ್ದಗಳು ಸತ್ತು ನಾವು ಜಾಗೃತವಾಗುವುದೇ ಸಮ್ಮೇಳನವಾಗಿದೆ (Vishwa Havyaka Sammelana). ‘ನಾನು’ ಸತ್ತಾಗ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಹಣದ ಸಂಪತ್ತು ಸಂಪತ್ತಲ್ಲ. ನಮ್ಮ ಸಂಸ್ಕೃತಿಯೇ ನಿಜವಾದ ಸಂಪತ್ತು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು (Sri Raghaveshwara Bharathi Mahaswamiji) ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಯೂರ ವರ್ಮ ದೂರದ ಉತ್ತರದ ಅಹಿಚ್ಛತ್ರದಿಂದ ನಮ್ಮ ಪೂರ್ವಜರನ್ನು ಕರೆತಂದ ಎಂಬ ಉದಾಹರಣೆಯೇ ಹವ್ಯಕ ಸಮಾಜದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಹಾಗೆಯೇ ಆನಂತರ ನಾವು ನಾಡಿನಾದ್ಯಂತ ವಿಸ್ತರಿಸಿರುವುದು ಕೂಡ ಹವ್ಯಕ ಸಮಾಜದ ಶ್ರೇಷ್ಠತೆಯನ್ನು ತೋರ್ಪಡಿಸುತ್ತದೆ. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂಬುದಕ್ಕೆ ಹವ್ಯಕ ಸಮುದಾಯ ಉದಾಹರಣೆ ಎಂದ ಶ್ರೀಗಳು, ತುಂಬಿರುವ ಅರಮನೆ ಮೈದಾನ ಸಮಾಜ ಪುರುಷ ಜಾಗೃತವಾಗಿರುವುದನ್ನು ಸೂಚಿಸುತ್ತದೆ. ಸಮಾಜದ ಸಂಖ್ಯೆ ಎಷ್ಟೇ ಇರಲಿ ನಾವು ಒಗ್ಗಟ್ಟಾಗಿ ಇರುವತ್ತ ಯೋಚಿಸೋಣ ಎಂದರು.

ಕ್ಷೀಣಿಸುತ್ತಿದೆ ಹವ್ಯಕ ಸಮಾಜ!
ಹವ್ಯಕ ಸಮಾಜ ತುಂಬಾ ವೇಗವಾಗಿ ಕ್ಷೀಣಿಸುತ್ತಿದ್ದು, ಹವ್ಯಕ ಸಂಸ್ಕೃತಿಗೆ ಅಪಾಯ ಎದುರಾಗಿದೆ. ನಾವು ಗೋವಂಶವನ್ನು ಉಳಿಸುವ ಅಭಿಯಾನ ಮಾಡುತ್ತಿದ್ದೇವೆ. ಇದೀಗ ಹವ್ಯಕ ಸಮುದಾಯವನ್ನು ಸಂರಕ್ಷಿಸುವ ಆಪತ್ತು ಎದುರಾಗಿದೆ. ದಕ್ಷಿಣ ಕೊರಿಯಾದ ಉದಾಹರಣೆಯನ್ನು ನೀಡಿದ ಶ್ರೀಗಳು, ಜನಸಂಖ್ಯಾ ನಿಯಂತ್ರಣದ ಕಾರಣದಿಂದಾಗಿ ದಕ್ಷಿಣ ಕೊರಿಯಾ ವಿನಾಶದ ಅಂಚಿನಲ್ಲಿದೆ. ಅದೇ ರೀತಿ ಹವ್ಯಕ ಸಮಾಜಕ್ಕೂ ಅಪಾಯ ಎದುರಾಗುವ ಸಂಭವವಿದೆ. ಮಕ್ಕಳೆಂದರೆ ಸಂಪತ್ತಾಗಿದ್ದು, ಸತ್ಪ್ರಜೆಗಳನ್ನು ಪಡೆಯುವ ಮೂಲಕ ಸಮಾಜವನ್ನು ಹಾಗೂ ಸಂಸ್ಕೃತಿಯನ್ನು ಉಳಿಸಬೇಕು. ಮಕ್ಕಳನ್ನು ಸಾಕಲು ನಿಮಗೆ ಕಷ್ಠವಾದರೆ, ಮಠವು ಮಕ್ಕಳನ್ನು ಸಲಹಲು ಸಿದ್ಧವಾಗಿದೆ ಎಂದು ಹವ್ಯಕ ಸಮಾಜಕ್ಕೆ ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ | World Havyaka Sammelana: ಹವ್ಯಕ ಮಹಾಸಭಾ ದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ

ಮಂತ್ರಾಲಯದ ಶ್ರೀಶ್ರೀ ಸುಭುದೇಂದ್ರತೀರ್ಥ ಮಹಾಸ್ವಾಮಿಗಳು ಮಾತನಾಡಿ, ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿಗೆ ಉದಾಹರಣೆಯಾಗಿ ಇರುವವರು ಹವ್ಯಕರು. ಎಲ್ಲಾ ಆಯಾಮಗಳಲ್ಲಿ ದೇಶದ ಹಿತಕ್ಕೆ ತೊಡಗಿಸಿಕೊಂಡವರು ಹವ್ಯಕರು. ಇದು ಬೇಡದ ಸಮುದಾಯ ಮಾತ್ರವಲ್ಲ ಎಲ್ಲರಿಗೂ ಬೇಕಾದ ಸಮಾಜ ಇದು. ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲಾ ಸಮುದಾಯಗಳ ಸೌಹಾರ್ಧತೆ ಬೇಕು. ಅದಕ್ಕೆ ಹವ್ಯಕ ಮಹಾಸಭೆ ಮುನ್ನುಡಿ ಹಾಕಿದೆ. ಪತ್ರಿಕಾ ರಂಗದಿಂದ ಹಿಡಿದು ಎಲ್ಲಾ ರಂಗದಲ್ಲಿ ಛಾಪು ಮೂಡಿಸಿದ ಕೀರ್ತಿ ಹವ್ಯಕರದ್ದು.

ಕರೋನಾ ಸಂದರ್ಭದಲ್ಲಿ ನಾಡಿಗೆ ಬಹುದೊಡ್ದ ಕೊಡುಗೆ ನೀಡಿದವರು ಡಾ.ಗಿರಿಧರ ಕಜೆಯವರು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಔಷಧದ ಮೂಲಕ ಸಮಾಜದ ನೆರವಿಗೆ ಧಾವಿಸಿದವರು ಅವರು. ಇದೂ ಕೂಡ ಹವ್ಯಕ ಸಮುದಾಯದ ಲೋಕಕಲ್ಯಾಣ ಕಾರ್ಯುಕ್ಕೆ ಉದಾಹರಣೆ ಎಂದರು.

ಆದಿಚುಂಚನಗಿರಿಯ ಶ್ರೀಶ್ರೀ ಸೌಮ್ಯನಾಥ ಮಹಾಸ್ವಾಮಿಗಳು ಮಾತನಾಡಿ, ಈ ಸಮ್ಮೇಳನ ಹವ್ಯಕ ಸಮಾಜದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಎಲ್ಲ ಸಮುದಾಯಗಳೂ ಸೇರಿ ಸಮಸ್ತ ಮಾನವ ಜನಾಂಗಕ್ಕೆ ಒಳಿತುಮಾಡೋಣ ಎಂದು ಕರೆ ನೀಡಿದರು.

ಸ್ವಾಗತ ಭಾಷಣ ಮಾಡಿದ ಡಾ.ಗಿರಿಧರ ಕಜೆ, ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾಪಿತವಾದ ಹೆಮ್ಮೆ ಶ್ರೀ ಅಖಿಲ ಹವ್ಯಕ ಮಹಾಸಭೆಯದ್ದು. ಕದಂಬ ವಂಶದ ರಾಜಾ ಮಯೂರವರ್ಮನ ಆಶಯದಂತೆ ಉತ್ತರದ ಅಹಿಚ್ಛತ್ರದಿಂದ ಪುನಃ ಈ ನಾಡಿಗೆ ಮರಳಿದ ಶ್ರೇಷ್ಠ ವಂಶಜರು ಹವ್ಯಕರು. ಲೋಕ ಕಲ್ಯಾಣಕ್ಕಾಗಿ ಹುಟ್ಟಿದ ಸಮುದಾಯ ಈ ಹವ್ಯಕರು. ಅಡಕೆ ಹವ್ಯಕರ ಪಾರಂಪರಿಕ ಕೃಷಿ. ವೇದ ಹಾಗೂ ಕೃಷಿ ಎರಡನ್ನೂ ಸಮರ್ಪಕವಾಗಿ ಉಳಿಸಿ ಬೆಳೆಸಿಕೊಂಡ ಹೆಚ್ಚುಗಾರಿಕೆ ಹವ್ಯಕ ಸಮುದಾಯದ್ದು ಎಂದರು.

ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾದ ಭಾಷೆ ಇರುವುದು ಹವ್ಯಕ ಸಮುದಾಯದ ಹೆಮ್ಮೆಯಾಗಿದ್ದು, ಹವಿಗನ್ನಡ ಹವ್ಯಕ ಸಮುದಾಯದ ಹೆಮ್ಮೆಯಾಗಿದ್ದು, ಸಮೃದ್ಧ ಸಾಹಿತ್ಯವನ್ನು ಹೊಂದಿದ ಹಿರೆಮೆ ಹವಿಗನ್ನಡದ್ದು. ಕನ್ನಡದ ಪ್ರಥಮ ನಾಟಕವಾದ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನವು ಹವ್ಯಕ ಕನ್ನಡದಲ್ಲಿ ಇರುವುದು ಇದಕ್ಕೆ ಉದಾಹರಣೆಯಾಗಿದೆ. ಯಕ್ಷಗಾನ ಪ್ರಮುಖವಾಗಿ ಹವ್ಯಕರ ಕಲೆಯಾಗಿದ್ದು, ಶುದ್ಧ ಕನ್ನಡವನ್ನು ಇಂದಿಗೂ ಉಳಿಸಿಕೊಂಡಿರುವ ಖ್ಯಾತಿ ಯಕ್ಷಗಾನಕ್ಕಿದ್ದು, ಭಾಷಾ ಸಂರಕ್ಷಣೆಗೆ ಹವ್ಯಕರ ಕೊಡುಗೆ ಅಪರಿಮಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ ಮಾತನಾಡಿ, ಎಲ್ಲೆಲ್ಲಿ ಪ್ರತಿಭೆಗೆ ಮನ್ನಣೆಯಿದೆಯೋ ಅಲ್ಲೆಲ್ಲಾ ಹವ್ಯಕರ ಛಾಪು ಇರುವುದನ್ನು ನಾವು ಗಮನಿಸಬಹುದು. ಹವ್ಯಕ ಸಮಾಜ ಶಿಸ್ತುಬದ್ಧ ಸಮಾಜ. ಹವ್ಯಕರು ಸ್ವಾಭಿಮಾನಿಗಳು. ಸರ್ಕಾರದ ಮುಂದೆ ಮೀಸಲಾತಿಗಳಂತಹ ಬೇಡಿಕೆ ಇಟ್ಟು ಸಂದರ್ಭಗಳನ್ನು ನಾವು ನೋಡಲು ಸಾಧ್ಯವಿಲ್ಲ. ಧಾರ್ಮಿಕತೆಯಿಂದ ಆರಂಭಿಸಿ ಸಾಫ್ಟ್‌ವೇರ್ ತನಕವೂ ಹವ್ಯಕರ ಪ್ರಭಾವವಿದೆ. ಅಡಕೆ ಕೇವಲ ತಿಂದುಗುಳುವ ವಸ್ತುವಲ್ಲ. ಅದು ನಮ್ಮ ಸಂಪ್ರದಾಯದ ಜತೆಗೆ ಅನ್ಯೋನ್ಯ ಸಂಬಂಧವನ್ನೂ ಹೊಂದಿದೆ. ಅಂತಹ ಅಡಕೆಯ ಜತೆಗೆ ನಂಟು ಹೊಂದಿದವರು ಹವ್ಯಕರು. ಜಾತಿಜಾತಿಗಳ ಮಧ್ಯೆ ಸಾಮರಸ್ಯ ಅತ್ಯಗತ್ಯವಾಗಿದ್ದು, ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಸಾಮರಸ್ಯ ಅಗತ್ಯ. ಈ ದಿಶೆಯಲ್ಲಿ ಹವ್ಯಕ ಸಮಾಜ ಮುನ್ನುಡಿ ಹಾಕಿದೆ ಎಂದರು.

ಸಮ್ಮೇಳನಾಧ್ಯಕ್ಷರು ಹಾಗೂ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸವಾಲನ್ನು ಮೀರಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿತೋರಿಸಿದವರು ನಮ್ಮ ಪೂರ್ವಜರು. ನಾವು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಸಮಾಜ ಸಂಘಟನೆಗೆ ತೊಡಗಿಸಿಕೊಳ್ಳೋಣ ಎಂದರು. ಹಳ್ಳಿಸೊಗಡಿನ ಹಳ್ಳಿಮನೆ ರಾಜಧಾನಿಯ ಅರಮನೆ ಮೈದಾನದಲ್ಲಿ ನಿರ್ಮಾಣವಾಗಿದೆ. ಇದನ್ನು ನೋಡುವುದೇ ಒಂದು ಸಂತಸದ ವಿಚಾರವಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮಾತನಾಡಿ, ಭವ್ಯ ಭಾರತದ ಸಂಸ್ಕೃತಿಯನ್ನು ಜಗದಗಲ ವಿಸ್ತರಿಸಿದ ಕೀರ್ತಿ ಹವ್ಯಕ ಸಮಾಜದ್ದು. ಜನಸಂಖ್ಯಾ ದೃಷ್ಟಿಯಲ್ಲಿ ಸಣ್ಣದಾದರೂ ದೇಶಕ್ಕೆ ಈ ಸಮಾಜದ ಕೊಡುಗೆ ಅಪಾರ. ಪ್ರತಿಭೆಗೆ ಮತ್ತೊಂದು ಹೆಸರು ಹವ್ಯಕ ಸಮಾಜವೋ ಎಂಬಂತಿರುವ ಅಪರೂಪದ ಸಮಾಜ ಹವ್ಯಕ ಸಮಾಜ. ಸಮಾವೇಶದಲ್ಲಿ ವ್ಯಕ್ತವಾಗಿರುವ ಒಗ್ಗಟ್ಟು ಈ ಸಮಾಜಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಒಳಿತುಮಾಡುವುದು ನಿಶ್ಚಿತ ಎಂದರು.

ಮಾಜಿ ಕೇಂದ್ರಮಂತ್ರಿಗಳಾದ ಸದಾನಂದ ಗೌಡ ಮಾತನಾಡಿ, ನಾನು ಎತ್ತರಕ್ಕೆ ಏರಲು ಹವ್ಯಕ ಸಮಾಜದ ಕೊಡುಗೆ ಅಪರಿಮಿತವಾಗಿದೆ. ಈ ಸಮಾಜದ ಜೊತೆ ನನ್ನ ಸಂಬಂಧ ಸುಮಧುರವಾಗಿದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರ್ನಳ್ಳಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ, ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹ ಮುಂತಾದ ಹೋರಾಟದಲ್ಲಿ ಹವ್ಯಕ ಸಮಾಜದ ತೊಡಗಿಕೊಳ್ಳುವಿಕೆ ದೊಡ್ದಮಟ್ಟದಲ್ಲಿದೆ. ಬ್ರಾಹ್ಮಣ ಸಮುದಾಯ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹ ಮಾತನಾಡಿ, ಬ್ರಾಹ್ಮಣ ಸಮಾಜ ಎತ್ತರಕ್ಕೆ ಬೆಳದಿದ್ದರೆ ಅದಕ್ಕೆ ಗುರುಗಳ ಅನುಗ್ರಹವೇ ಕಾರಣ. ಸಮುದಾಯಗಳಿಗೆ ನಾಯಕತ್ವ ಕೊಡುವ ಶಕ್ತಿ ಹವ್ಯಕರಲ್ಲಿದೆ. ಇದಕ್ಕೆ ರಾಮಕೃಷ್ಣ ಹೆಗಡೆಯವರೇ ಉದಾಹರಣೆ ಎಂದರು.

ಈ ವೇಳೆ ಮಾತನಾಡಿದ ನಟ ರಮೇಶ್‌ ಅರವಿಂದ್‌, ಸಾಧಕರ ಸಾಧನೆಯ ಹಾದಿ ಸುಲಭವಲ್ಲ. ಪ್ರತಿಕ್ಷಣ ಸಾಧಕನೊಬ್ಬ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸಾಧಕನ ಸಾಧನೆ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಜಾತಿಗಳು ಸಂಘಟಿತವಾಗಿ ತನ್ಮೂಲಕ ಹಿಂದೂ ಸಮಾಜವನ್ನು ಬಲಗೊಳಿಸುವುದು ಸ್ವಾಗತಾರ್ಹವಾಗಿದ್ದು, ಜಾತಿ ಸಂಘಟನೆಗಳು ಸಂಘರ್ಷಕ್ಕೆ ಕಾರಣವಾಗದೇ, ಸಂಘಟನೆಗೆ ಕಾರಣವಾದಗ ಅದು ಸಮಾಜಕ್ಕೆ ಒಳ್ಳೆಯದು ಎಂದರು. ರೈತರನ್ನು ಕೇವಲವಾಗಿ ಚಿತ್ರಿಸುವುದು ಸರಿಯಲ್ಲ. ರೈತರನ್ನು ಅನುಕಂಪದ ದೃಷ್ಟಿಯಲ್ಲಿ ನೋಡುವ ಬದಲು ಹೆಮ್ಮೆಯ ದೃಷ್ಟಿಯಿಂದ ನೋಡುವಂತಾಗಬೇಕು. ಏಕೆಂದರೆ ನಾಡಿಗೆ ಅನ್ನಕೊಡುವವನು ರೈತ. ಕೃಷಿ ಉತ್ಪನ್ನಗಳನ್ನು ದುಡ್ದಿನ ದೃಷ್ಟಿಯಿಂದ ಅಳೆಯುವ ಬದಲು ಭಾವನೆಯಿಂದ ನೋಡಬೇಕು ಎಂದು ಹೇಳಿದರು.

ಸಮಾಜದ ವಿದ್ವಾಂಸರು ಹಾಗೂ ಚಿಂತಕರಿಂದ 3 ಗೋಷ್ಠಿಗಳು ನಡೆದವು. ಸಮಾಜಕ್ಕೆ ಹೊಸ ಚಿಂತನೆಗಳನ್ನು ನೀಡುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರದ ದಾರಿಗಳನ್ನು ಸೂಚಿಸಿತು. ಇದಕ್ಕೂ ಮೊದಲು ಸಂತರು ಹಾಗೂ ಗಣ್ಯರಿಗೆ ಭವ್ಯ ಸ್ವಾಗತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಅಹಿಚ್ಛತ್ರ ಜ್ಯೋತಿಯನ್ನು ಬೆಳಗುವ ಮೂಲಕ ಕಾರ್ಯಕ್ರಮ ವಿಧುಕ್ತವಾಗಿ ಉದ್ಘಾಟನೆಯಾಯಿತು. ಇದೇ ಸಂಧರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಾಂಸ್ಕೃತಿಕ ಸೌರಭ:
ಕನ್ನಡದ ಪ್ರಥಮ ನಾಟಕ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ ನಾಟಕ ಹಾಗೂ ಶಾಸ್ತ್ರೀಯ ಸಂಗೀತ ಅರಮನೆ ಮೈದಾನಕ್ಕೆ ಗಂಧರ್ವಲೋಕವನ್ನು ಕರೆತಂದಿತು.

ಸಾಧಕ ರತ್ನ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ 81 ಹವ್ಯಕ ಸಾಧಕರನ್ನು ‘ಹವ್ಯಕ ಸಾಧಕರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಗಣ್ಯಮಾನ್ಯರು ಸಾಧಕರನ್ನು ಸನ್ಮಾನಿಸಿದರು.

ಕೃಷಿರತ್ನ ಪ್ರಶಸ್ತಿ:
ಕೃಷಿಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಸಾಧನೆಯನ್ನು ಮಾಡಿದ 81 ಕೃಷಿಕರನ್ನು ‘ಹವ್ಯಕ ಕೃಷಿರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ಡಿ.28ರಂದು ಸಂಜನಾ ರಮೇಶ್ ಕಥಕ್ ರಂಗಪ್ರವೇಶ