Wednesday, 1st January 2025

ಹವ್ಯಕ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರಕ್ಕೆ ಮನವಿ, ಹವ್ಯಕತ್ವ ಉಳಿಸುವ ಬದ್ಧತೆ; ವಿಶ್ವ ಹವ್ಯಕ ಸಮ್ಮೇಳನದ ಪ್ರಮುಖ ನಿರ್ಣಯಗಳಿವು

Vishwa Havyaka Sammelana

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ತೆರೆ ಬಿದ್ದಿದೆ (Vishwa Havyaka Sammelana). ಭಾನುವಾರ (ಡಿ. 29) ನಡೆದ ಸಮಾರೋಪ ಸಮಾರಂಭದಲ್ಲಿ ಕೈಗೊಂಡ ನಿರ್ಣಯಗಳು ಯಾವುವು ಎನ್ನುವ ವಿವರ ಇಲ್ಲಿದೆ.

  1. ಆಧುನಿಕತೆಯನ್ನು ಅಳವಡಿಸಿಕೊಳ್ಳುವುದರ ಜತೆಗೆ ಹವ್ಯಕರ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನು ಒಳಗೊಂಡ ಹವ್ಯಕತ್ವವನ್ನು ಉಳಿಸಿ-ಬೆಳೆಸುವಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳುವುದು. ವ್ಯಸನ ಮುಕ್ತ ಸಮಾಜವಾಗಿ ಕಾಪಾಡಿಕೊಳ್ಳಲು ಪ್ರೇರೇಪಣೆ ನೀಡುವುದು.
  2. ಹಳೆಗನ್ನಡಕ್ಕೆ ಸಮೀಪವಾದ, ವಿಶಿಷ್ಟ ಲಕ್ಷಣಗಳನ್ನು ಒಳಗೊಂಡ, ಭಾಷಾ ಶ್ರೀಮಂತಿಕೆಯಿಂದ ಕೂಡಿದ, ಹವ್ಯಕ ಕನ್ನಡವನ್ನು ಸಂರಕ್ಷಿಸುವಲ್ಲಿ ವಿಶೇಷ ಒತ್ತುಕೊಡುವ ದೃಷ್ಟಿಯಿಂದ ‘ಹವ್ಯಕ ಅಧ್ಯಯನ ಪೀಠ’ವನ್ನು ಸ್ಥಾಪಿಸಲು ಸರ್ಕಾರಕ್ಕೆ ಆಗ್ರಹ.
  3. ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು, ಅವಶ್ಯ ತರಬೇತಿ ಇತ್ಯಾದಿ ಮೂಲ ಸೌಕರ್ಯ ನೀಡುವಿಕೆ.
  4. ಮಹಾಸಭೆಯ ಆಡಳಿತ ವಿಕೇಂದ್ರೀಕರಣದ ಮೂಲಕ ಹವ್ಯಕರು ಪ್ರಮುಖವಾಗಿ ಇರುವ ಪ್ರಾಂತ್ಯಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಟನೆಯನ್ನು ಬಲಗೊಳಿಸುವುದು ಹಾಗೂ ಸಂಸ್ಕೃತಿಯನ್ನು ಆರ್ಷ ಪರಂಪರೆಯನ್ನು ಉಳಿಸಿಕೊಳ್ಳುವುದು. ಜತೆಗೆ ಹವ್ಯಕ ಸಮಾಜವನ್ನು ಶ್ರೇಷ್ಠವಾಗಿರಿಸಿದ ಸಾಹಿತ್ಯ, ಸಂಗೀತ, ನೃತ್ಯ ಯಕ್ಷಗಾನ ಇತ್ಯಾದಿ ಲಲಿತ ಕಲೆಗಳಿಗೆ ಪ್ರೋತ್ಸಾಹ.
  5. ಅಪರ ಕಾರ್ಯಗಳನ್ನು ಶಾಸ್ರೋಕ್ತವಾಗಿ ನೆರವೇರಿಸಲು ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ‘ತರ್ಪಣ ಭವನ’ವನ್ನು ನಿರ್ಮಾಣ.
  6. ಹವ್ಯಕರ ಅವಿಭಾಜ್ಯ ಸಂಸ್ಕೃತಿಯಾದ ಪಾರಂಪರಿಕ ಅಡಿಕೆ ಹಾಗೂ ಇತರ ಕೃಷಿಗಳನ್ನು ಮುಂದುವರಿಸಿಕೊಂಡು ಕೃಷಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಸರ್ಕಾರಕ್ಕೆ ಆಗ್ರಹ.
  7. ಸಮ್ಮೇಳನದ ಫಲಶ್ರುತಿಯ ಭಾಗವಾಗಿ ಹವ್ಯಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹವ್ಯಕರು ಮುಂದೆ ಬರುವಂತೆ ಮೂಲ ಸೌಕರ್ಯಗಳನ್ನು ಒದಗಿಸುವುದರ ಜತೆ ಯುವ ಸಮುದಾಯವನ್ನು ಆಯಕಟ್ಟಿನ ಕ್ಷೇತ್ರದಲ್ಲಿ ಬೆಳೆಯಲು ಸಹಕಾರ.
  8. ಜನಸಂಖ್ಯಾನಿ ಯಂತ್ರಣ ಮನಸ್ಥಿತಿಯಿಂದ ಯುವಜನರು ಹೊರಬರಲು ಪ್ರೇರೇಪಿಸುವುದು ಹಾಗೂ ನಶಿಸಿಹೋಗುತ್ತಿರುವ ವಿಶಿಷ್ಟ ಹವ್ಯಕ ತಳಿಯನ್ನು ಉಳಿಸಲು ಪ್ರೇರೇಪಣೆ ನೀಡುವುದರ ಮೂಲಕ ಹವ್ಯಕರ ಸಂಖ್ಯಾ ಬಲವನ್ನು ವೃದ್ಧಿಸುವುದು. ಜತೆಗೆ ಕೌಟುಂಬಿಕ ಸಾಮರಸ್ಯವನ್ನು ಪ್ರೋತ್ಸಾಹಿಸಿ ವಿಚ್ಛೇದನದ ಪಿಡುಗನ್ನು ನಿವಾರಿಸಲು ಶ್ರಮ.

ಈ ಸುದ್ದಿಯನ್ನೂ ಓದಿ: Vishwa Havyaka Sammelana: ಇಸ್ರೇಲ್‌ನ ಯಹೂದಿಯರಿಗೂ ಹವ್ಯಕರಿಗೂ ಬಹಳಷ್ಟು ಸಾಮ್ಯತೆ ಇದೆ: ವಿಶ್ವೇಶ್ವರ ಭಟ್‌