ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಡಿ.27,28 ಹಾಗೂ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು (Vishwa Havyaka Sammelana) ಆಯೋಜಿಸಲಾಗಿದೆ. ಶ್ರೀ ಅಖಿಲ ಹವ್ಯಕ ಮಹಾಸಭಾಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ಚಾರಿತ್ರಿಕವಾದ ಸಮ್ಮೇಳನ ನಡೆಯಲಿದೆ. ನಾಡಿನ ಸಂತಶ್ರೇಷ್ಠರ ಸಾನ್ನಿಧ್ಯದಲ್ಲಿ ಹಾಗೂ ದೇಶವಿದೇಶಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ವಿಶಿಷ್ಟ ಹವ್ಯಕ ಸಂಸ್ಕೃತಿಯ ಅನಾವರಣ ಬೃಹತ್ ರೂಪದಲ್ಲಿ ನಡೆಯಲಿದೆ.
567 ಶ್ರೇಷ್ಠ ಸಾಧಕರಿಗೆ ಸನ್ಮಾನ, 300ಕ್ಕೂ ಅಧಿಕ ಸುಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಹಳ್ಳಿಸೊಗಡಿನ ಆಲೇಮನೆ, 100ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಪ್ರದರ್ಶನ, ದೇಶೀ ಗೋಪ್ರದರ್ಶನಿ, 6000 ಹವ್ಯಕ ಕನ್ನಡ ಪುಸ್ತಕಗಳ ಪ್ರದರ್ಶನ, 108 ವರ್ಷಗಳ ಪಂಚಾಂಗ ದರ್ಶನ, ವೈಭವದ ಗಾಯತ್ರೀ ಥೀಮ್ ಪಾರ್ಕ್, ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು, 2000 ಕಿ.ಮೀ ದೂರದ ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ಸಮಗ್ರ ಅಡಿಕೆ ಪ್ರದರ್ಶನ, 100ಕ್ಕೂ ಅಧಿಕ ಹವಿಸವಿಯ ಪಾಕೋತ್ಸವ, 18 ವಿಷಯಗಳ ಚಿಂತನ ಮಂಥನ, 81 ಹವಿ ತಿನಿಸುಗಳ ಮಾರಾಟ, 1081 ಜನರ ಪ್ರಧಾನ ಸಮಿತಿ – ಸಂಚಾಲನಾ ಸಮಿತಿ, ಸಹಸ್ರಾಧಿಕ ಕಾರ್ಯಕರ್ತರ ಸಮ್ಮಿಲನ ಮುಂತಾದವು ಈ ಐತಿಹಾಸಿಕ ಮೂರು ದಿನಗಳ ಕಾರ್ಯಕ್ರಮದಲ್ಲಿ ಇರಲಿವೆ. 60 ಜಾತಿ – ಉಪಜಾತಿಗಳ ಸಂಘಟನೆಗಳಿಗೆ ಸೌಹಾರ್ದ ಸನ್ಮಾನ ವಿಶೇಷವಾಗಿ ನಡೆಯಲಿದ್ದು, 1.50 ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ | Drone Training: ಡ್ರೋನ್ ತರಬೇತಿಗೆ ಅರ್ಜಿ ಆಹ್ವಾನ; ಡಿ.23 ಕೊನೆ ದಿನ
7 ವಿಭಾಗಗಳಲ್ಲಿ 567 ಶ್ರೇಷ್ಠ ಸಾಧಕರಿಗೆ ಸನ್ಮಾನ
81 ಸಾಧಕರಿಗೆ ಪ್ರಶಸ್ತಿ, 81 ಕೃಷಿಕರಿಗೆ ಪ್ರಶಸ್ತಿ, 81 ವೈದಿಕರಿಗೆ ಸನ್ಮಾನ, 81 ಶಿಕ್ಷಕರಿಗೆ ಸನ್ಮಾನ
81 ವಿದ್ಯಾರ್ಥಿಗಳಿಗೆ ಪುರಸ್ಕಾರ, 81 ಹವ್ಯಕ ಯೋಧರಿಗೆ ಸನ್ಮಾನ ಹಾಗೂ 81 ಸ್ಪೂರ್ತಿ ಚೇತನರಿಗೆ ಪ್ರಶಸ್ತಿ ನಡೆಯಲಿದ್ದು, ಆಯಾಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸಮಾಜದ ಗಣ್ಯರನ್ನು ಗೌರವಿಸಲಾಗುತ್ತಿದೆ.
ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ
ಹವ್ಯಕರ ಜೀವನಾಧಾರವಾದ ಅಡಿಕೆ ಕೃಷಿಯ ಸಮಗ್ರ ಪ್ರದರ್ಶನವು ಕೃಷಿ ಜಗತ್ತಿನ ಪ್ರಪಂಚವನ್ನು ಸಮಗ್ರವಾಗಿ ಪ್ರದರ್ಶಿತಗೊಳಿಸಲಿದ್ದು, ವಿವಿಧ ರೀತಿಯ ಅಡಿಕೆ ಸಸಿಗಳು, ತೋಟದ ಕೆಲಸದ ಉಪಕರಣಗಳು, ಕೊನೆ ಕೊಯ್ಯುವ ಸಲಕರಣೆಗಳು, ಅಡಿಕೆ ಸುಲಿಯುವ ಯಂತ್ರಗಳು, ಅಳತೆಯ ಪಾರಂಪರಿಕ ಮಾನದಂಡಗಳು ಸೇರಿದಂತೆ ಪಾರಂಪರಿಕ ವಸ್ತುಗಳ ಪ್ರದರ್ಶನ ಇರಲಿದೆ.
ರಾಜಧಾನಿಯಲ್ಲಿ ಸಾಂಪ್ರದಾಯಿಕ ಆಲೆಮನೆ
ಹಳ್ಳಿಸೊಗಡಿನ ಆಲೆಮನೆ ಕಾರ್ಯಕ್ರಮದಲ್ಲಿರಲಿದ್ದು, ಇತ್ತೀಚಿಗೆ ಮಲೆನಾಡು – ಕರಾವಳಿ ಭಾಗದಲ್ಲೇ ಆಲೆಮನೆಗಳು ಕಣ್ಮರೆಯಾಗಿದ್ದು, ಅರಮನೆ ಮೈದಾನದಲ್ಲಿ ಜೋಡಿ ಕೋಣಗಳ ಆಲೆಗಾಣದ ಪಾರಂಪರಿಕ ಆಲೆಮನೆ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದು, ಆಕರ್ಷಣೆಯ ಕೇಂದ್ರವಾಗಲಿದೆ.
ಕರಕುಶಲ ವಸ್ತುಗಳ ಪ್ರದರ್ಶನ
ಹವ್ಯಕರ ಕೈ ಕೌಶಲ್ಯದಿಂದ ತಯಾರಿಸಲ್ಪಟ್ಟ ಹಾಗೂ ಹಳ್ಳಿಸೊಗಡಿನ ಹವ್ಯಕರ ಪರಂಪರೆಯ ಜತೆಗೆ ಹಾಸುಹೊಕ್ಕಾದ ಪ್ರಾಚೀನ ವಸ್ತುಗಳಾದ ಕಡಗೋಲು, ಕೆರೆಮಣೆ, ಕಲ್ಲಿ, ಹೆಡಗೆ, ದೋಟಿ, ಕಡಕಲನಮನೆ ಮುಂತಾದವುಗಳು, ಬಿದಿರಿನ ಕಲೆ, ಕೌದಿಕಲೆ, ಅಸೂತಿ ಕಲೆ, ಜನಪದ ಶೈಲಿಯ ನೇಯ್ಗೆ, ಕಾಷ್ಠ ಕಲೆಗಳು ಇಲ್ಲಿರಲಿದೆ.
ಸಾಂಸ್ಕೃತಿಕ ವೈಭವದ ಕಲಾ ಸಂಜೆಗಳು
ಡಿ. 27 ರಂದು ಹಿರಿ-ಕಿರಿ ತೆರೆಯ ಕಲಾವಿದರಿಂದ ಹವ್ಯಕ ಕನ್ನಡದಲ್ಲಿರುವ ಕನ್ನಡದ ಪ್ರಥಮ ನಾಟಕ `ಇಗ್ಗಪ್ಪ ಹೆಗಡೆ ವಿವಾಹ ಪಹಸನ’, ನಾಡಿನ ಶ್ರೇಷ್ಠ ಕಲಾವಿದರಿಂದ ಸಂಗೀತ ಸಂಗಮ, ಡಿ.28 ರಂದು ಶ್ರೇಷ್ಠ ಯಕ್ಷಕಲಾವಿದರಿಂದ ಯಕ್ಷಯಾನ, ಡಿ.29 ಸಾಂಪ್ರದಾಯಿಕ ಹಾಡು, ಸಾಂಪ್ರದಾಯಿಕ ಫ್ಯಾಷನ್ ಶೋ, ವಾದ್ಯ ವೈಭವ ಜುಗಲ್ಬಂದಿ, ನಾಟ್ಯೋತ್ಸವ ನಡೆಯಲಿದೆ. ಹಾಗೆಯೇ ವಿಶೇಷ ರೀತಿಯಲ್ಲಿ ನರ್ತನ ಸಂಕೀರ್ತನ ಜನಮನ ಸೆಳೆಯಲಿದೆ.
ಈ ಸುದ್ದಿಯನ್ನೂ ಓದಿ | Job Guide: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿದೆ 518 ಹುದ್ದೆ; 10ನೇ ತರಗತಿ ಪಾಸಾದವರು ಡಿ. 31ರಿಂದ ಅರ್ಜಿ ಸಲ್ಲಿಸಿ
ಹವ್ಯಕ ಪಾಕೋತ್ಸವ – ಆಹಾರ ಮೇಳ
ಹವ್ಯಕ ಸಂಸ್ಕೃಯಲ್ಲಿ ಆಹಾರಕ್ಕು ವಿಶೇಷ ಮಾನ್ಯತೆ ಇದ್ದು, ಹವ್ಯಕರ ಪಾಕ ವೈವಿಧ್ಯಗಳು ನಾಡಿನ ಜನಮನ್ನಣೆ ಪಡೆದಿವೆ. ಮಲೆನಾಡು – ಕರಾವಳಿ ಭಾಗಗಳ ಪಾರಂಪರಿಕ ಹವ್ಯಕ ಪಾಕಗಳು ಈ ಐತಿಹಾಸಿಕ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ಪತ್ರೊಡೆ, ಕೊಟ್ಟೆಕಡುಬು, ವಿವಿಧ ರೀತಿಯ ಅವಲಕ್ಕಿಗಳು, ಗೆಣೆಸೆಲೆ, ಜಿಲೇಬಿ, ಅತ್ರಾಸ, ಚಕ್ಕುಲಿ, ಸುಕ್ಕಿನುಂಡೆ, ಕೇಸರಿ, ತಂಬಳಿ, ಪಾಯಸಗಳು, ಹೋಳಿಗೆಗಳು ಜನಾಕರ್ಷಣೆಯ ಕೇಂದ್ರವಾಗಲಿದೆ.
ವೈವಿಧ್ಯಮಯ ಸ್ಪರ್ಧೆಗಳು
ಸಂಪ್ರದಾಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಎಲ್ಲಾ ವಯೋಮಾನದವರಿಗೆ ಛಾಯಾಚಿತ್ರ, ಚಿತ್ರ ರಚನೆ, ಇಕಬಾನ, ರೀಲ್ಸ್ ತಯಾರಿ, ಹವಿರುಚಿ, ರಂಗೋಲಿ, ಕರಕುಶಲ ಸ್ಪರ್ಧೆಗಳು ಇರಲಿವೆ.
ಚಿಂತನ – ಮಂಥನ ಗೋಷ್ಠಿಗಳು
18 ವಿಷಯಗಳಿಗೆ ಸಂಬಂಧಿಸಿದಂತೆ ಗೋಷ್ಠಿ ನಡೆಯಲಿದ್ದು, ಸಮಸ್ಯೆಗಳನ್ನು ಚರ್ಚಿಸುವ ಬದಲಿಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಸಹಾಯವಾಗಬಹುದಾದ ವೈವಿಧ್ಯಮಯ ವಿಚಾರಗಳ ಚಿಂತನ – ಮಂಥನ ನಡೆಯಲಿದೆ.
ಗಾಯತ್ರೀ ಥೀಮ್ ಪಾರ್ಕ್
ಹವ್ಯ ವೇದಿಕೆಯಲ್ಲಿ ದಿವ್ಯ ಗಾಯತ್ರೀ ದೇವಿಯ ವಿರಾಟ್ ದರ್ಶನ ಇರಲಿದ್ದು, ಗಾಯತ್ರೀ ಮಹಾಮಂತ್ರದ ಕುರಿತಾದ ವಿಶ್ವರೂಪ ದರ್ಶನ ಅರಮನೆ ಮೈದಾನದ ಮೆರುಗನ್ನು ಹೆಚ್ಚಿಸಲಿದೆ. ಗಾಯತ್ರೀ ಮಂತ್ರ ಮಹತ್ವ, ಜನಿವಾರ ತಯಾರಿ, ಗೋತ್ರ ಪ್ರವರ್ತಕರ ದರ್ಶನ, ಗಾಯತ್ರೀ ಯಜ್ಞ, ಪಲ್ಲಕ್ಕಿ ಉತ್ಸವ ಸೇರಿದಂತೆ ಗಾಯತ್ರೀ ದೇವಿಯ ವಿರಾಟ್ ದರ್ಶನವಿರಲಿದೆ.
ಪೂಜಾ ವೈವಿಧ್ಯ – ಮಂಡಲ ನಿರೀಕ್ಷೆ
ಹವ್ಯ ವೇದಿಕೆಯಲ್ಲಿ ಮೂರೂ ದಿನಗಳ ಕಾಲ ವೈವಿಧ್ಯಮಯ ಯಾಗಗಳು, ಪೂಜೆಗಳು ನಡೆಯಲಿದ್ದು, ಯಾಗಮಂಡಲಗಳ ಸ್ಪರ್ಧೆ ಹಾಗೂ ಪ್ರಾತ್ಯಕ್ಷತೆ ಇರಲಿದೆ. ಭಜನಾ ಕಮ್ಮಟ ಹಾಗೂ ಸಾಮೂಹಿಕ ಭಗವದ್ಗೀತಾ ಪಠಣ ಇರಲಿದೆ.
ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ
ಭವ್ಯ ವೇದಿಕೆಯಲ್ಲಿ ಮೂರೂ ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ವರೆಗೆ ನಿರಂತರವಾಗಿ ವೈವಿಧ್ಯಮಯ ಕಲಾಪ್ರಾಕಾರಗಳ ಸಾಂಸ್ಕೃತಿಕ ವೈಭವ ಇರಲಿದ್ದು, ಭವ್ಯ ವೇದಿಕೆಯು ಆಧುನಿಕ ಹಾಗೂ ಸಾಂಪ್ರದಾಯಿಕ ಕಲೆಯ ಅನಾವರಣಕ್ಕೆ ವೇದಿಕೆ ಒದಗಿಸಲಿದೆ.
ಸರ್ವ ಸಮಾಜದವರಿಗೂ ಮುಕ್ತ ಅವಕಾಶ
ಈ ಬೃಹತ್ ಕಾರ್ಯಕ್ರಮವು ಸರ್ವ ಸಮಾಜದವರಿಗೂ ಮುಕ್ತವಾಗಿದ್ದು, ಎಲ್ಲಾ ಸಮಾಜದ ಬಂಧುಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹವ್ಯಕ ಸಂಸ್ಕೃತಿ – ಸಂಸ್ಕಾರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಹವ್ಯಕರ ವಿಶಿಷ್ಟ ಆಹಾರ ಪದಾರ್ಥಗಳನ್ನು ಪಾಕೋತ್ಸವದಲ್ಲಿ ಆಸ್ವಾದಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ | Mysuru News: ಟಿಐಇ ಜಾಗತಿಕ ಸಮ್ಮೇಳನ 2024; ಆವಿಷ್ಕಾರಿ ಯೋಜನೆಗಳ ಪ್ರಸ್ತುತಪಡಿಸಿದ ಮೈಸೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
ಸೌಹಾರ್ದ ಸನ್ಮಾನ
60 ಜಾತಿ – ಉಪಜಾತಿಗಳ ಸಂಘಟನೆಗಳಿಗೆ ಸೌಹಾರ್ದ ಸನ್ಮಾನ ವಿಶೇಷವಾಗಿ ನಡೆಯಲಿದ್ದು, ಸರ್ವಸಮಾಜಕ್ಕೆ ಪಾರಂಪರಿಕವಾಗಿ ಮಾರ್ಗದರ್ಶನ ಮಾಡುತ್ತಿರುವ ಹವ್ಯಕ ಸಮುದಾಯ ಎಲ್ಲಾ ಜಾತಿಜನಾಂಗಗಳ ಜತೆಗೂ ಸೌಹಾರ್ದ ಸಂಬಂಧವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹವ್ಯಕ ಸಮ್ಮೇಳನದ ಪರ್ವದಲ್ಲಿ ಎಲ್ಲಾ ಜಾತಿ ಜನಾಂಗಗಳ ಸಂಘಟನೆಗಳಿಗೂ ಸೌಹಾರ್ದ ಸನ್ಮಾನ ಏರ್ಪಡಿಸಲಾಗಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆ ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.