ಬೆಂಗಳೂರು: ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ (Vishwa Havyaka Sammelana) ಡಿ. 27 ರಂದು ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಾಲನೆ ದೊರೆಯಲಿದ್ದು, ನಾಡಿನ ಸಂತಶ್ರೇಷ್ಠರ ಸಾನ್ನಿಧ್ಯದಲ್ಲಿ ಹಾಗೂ ದೇಶವಿದೇಶಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ವಿಶಿಷ್ಟ ಹವ್ಯಕ ಸಂಸ್ಕೃತಿಯ ಅನಾವರಣ ಬೃಹತ್ ರೂಪದಲ್ಲಿ ನಡೆಯಲಿದೆ.
ಶ್ರೀ ಅಖಿಲ ಹವ್ಯಕ ಮಹಾಸಭೆಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ಚಾರಿತ್ರಿಕವಾದ ಸಮ್ಮೇಳನವನ್ನು 2300 ಕಿ.ಮೀ. ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತರಲಾದ ಜ್ಯೋತಿಯಿಂದ ದೀಪವನ್ನು ಬೆಳಗುವುದರ ಮೂಲಕ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಉದ್ಘಾಟನೆಗೂ ಮುನ್ನ ಸಂತರು ಹಾಗೂ ಗಣ್ಯರಿಗೆ ವೈಭವದ ಸ್ವಾಗತ ನಡೆಯಲಿದ್ದು, 1081 ಮಾತೆಯರಿಂದ ಪೂರ್ಣಕುಂಭ ಸ್ವಾಗತ, 1081 ಮಕ್ಕಳಿಂದ ಪುಷ್ಪವೃಷ್ಟಿ ಸ್ವಾಗತ ಹಾಗೂ 1081 ಪುರುಷರಿಂದ ವೇದಘೋಷ ಸ್ವಾಗತ ವೈಭವದಿಂದ ನಡೆಯಲಿದೆ.
ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, 1081 ಜನರ ಪ್ರಧಾನ ಸಮಿತಿ ಹಾಗೂ ಸಂಚಾಲನಾ ಸಮಿತಿ ಮೇಲುಸ್ತುವಾರಿ ವಹಿಸಿದ್ದು, ಸಾವಿರಕ್ಕೂ ಅಧಿಕ ಕಾರ್ಯಕರ್ತರ ಪಡೆ ಸಿದ್ದತೆಯಲ್ಲಿ ನಿರತವಾಗಿದೆ. ವೇದಿಕೆ, ಗಾಯತ್ರೀ ಥೀಮ್ ಪಾರ್ಕ್, ವಾಣಿಜ್ಯ ಮಳಿಗೆ, ಪಾರಂಪರಿಕ ವಸ್ತು ಪ್ರದರ್ಶನ ಸಿದ್ದವಾಗಿದ್ದು, ಪಾಕೋತ್ಸವ, ಆಲೇಮನೆಗಳು ಹವಿಸವಿಯ ಆಹಾರವನ್ನು ಉಣಬಡಿಸಲಿವೆ. ನೂರಾರು ಬಾಣಸಿಗರ ತಂಡ ಬಗೆಬಗೆಯ ತಿನಿಸುಗಳನ್ನು ಉಣಬಡಿಸಲು ಸಿದ್ಧವಾಗಿದೆ.
ಈ ಸುದ್ದಿಯನ್ನೂ ಓದಿ | Year End Sale 2024: ಇಯರ್ ಎಂಡ್ ಸೇಲ್ ಶಾಪಿಂಗ್ ಪ್ರಿಯರಿಗೆ 5 ಸಿಂಪಲ್ ಟಿಪ್ಸ್ ಇಲ್ಲಿದೆ
ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧ್ಯಕ್ಷ ಡಾ. ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸೇರಿದಂತೆ ಪ್ರಮುಖರು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.