ಬೆಂಗಳೂರು: ʼʼಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ (Narendra Modi) ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಈಗಾಗಲೇ ಅಡಿಕೆ ಸಂಶೋಧನೆಗೆ 10 ಕೋಟಿ ರೂ. ನೀಡಿದೆ. ಅಡಿಕೆ ಬಗ್ಗೆ ಅಪಪ್ರಚಾರ ಅನಗತ್ಯ. ಅದನ್ನು ಹತ್ತಿಕ್ಕಲು ಕೇಂದ್ರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆʼʼ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (H. D. Kumaraswamy) ಭರವಸೆ ನೀಡಿದರು (Vishwa Havyaka Sammelana).
ಬೆಂಗಳೂರಿನಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ʼʼಅಡಿಕೆ ಬೇಸಾಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಹವ್ಯಕರು ಆತಂಕ ಪಡಬೇಕಿಲ್ಲ. ನಾನು ಸ್ವತಃ ಅಡಿಕೆ ಬೆಳೆಗಾರನೇ. ಅಡಿಕೆಯ ಬೆಳೆಗಾರರ ಸಂಕಷ್ಟಗಳು ಏನು ಎಂಬುದನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇನೆ. ಹೀಗಾಗಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದ ಕ್ರಮಗಳನ್ನು ಕೈಗೊಂಡಿದೆ. ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ನಾನು ಸೇರಿದಂತೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರುವ ರಾಜ್ಯದ ಎಲ್ಲ ಸಚಿವರು ಬಗೆಹರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆʼʼ ಎಂದು ಹೇಳಿದರು.
”ಅತ್ಯಂತ ವಿಶಿಷ್ಟವಾದ ಹವ್ಯಕ ಭಾಷೆ ಉಳಿಯಬೇಕು, ಈ ಭಾಷೆ ಉಳಿಯುವ ನಿಟ್ಟಿನಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ. ಹವ್ಯಕ ಭಾಷೆ ಅಭಿವೃದ್ಧಿಗೆ ಪ್ರತ್ಯಕ ಆಕಾಡೆಮಿ, ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಅಂತಹ ಎಲ್ಲ ಪ್ರಯತ್ನಗಳಿಗೆ ನನ್ನ ಬೆಂಬಲ ಇದೆʼʼ ಎಂದು ಅವರು ಭರವಸೆ ನೀಡಿದರು.
ಸಚಿವರ ಮೆಚ್ಚುಗೆ
ವಿಶೇಷವಾಗಿ ಹವ್ಯಕ ಸಮುದಾಯದ ಹಿರಿಮೆ ಬಗ್ಗೆ ಉಲ್ಲೇಖಿಸಿದ ಕೇಂದ್ರ ಸಚಿವರು, ʼʼನಿಮ್ಮ ಸಮುದಾಯ ಗಾತ್ರದಲ್ಲಿ ಸಣ್ಣದು ಇರಬಹುದು. ಆದರೆ ನಿಮ್ಮ ಸಾಧನೆ, ಬುದ್ಧಿವಂತಿಕೆ, ಸಮಾಜಕ್ಕೆ ನೀವು ಕೊಟ್ಟಿರುವ ಕೊಡುಗೆ ಸಣ್ಣದಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ನಿಮ್ಮ ಛಾಪು ಗಣನೀಯʼʼ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ʼʼಜನಸಂಖ್ಯೆಯಲ್ಲಿಯೂ ನೀವು ಕಡಿಮೆ ಇದ್ದೀರಿ ಎಂದು ಭಾವಿಸಿದ್ದೀರಿ. ಅದರ ಬಗ್ಗೆ ನೀವು ಆಲೋಚನೆ ಮಾಡಬೇಕಿಲ್ಲ, ದೊಡ್ಡ ಸಮಾಜಗಳು ಕೊಟ್ಟಿರುವಷ್ಟೇ ಕೊಡುಗೆಯನ್ನು ಹವ್ಯಕ ಸಮುದಾಯವೂ ಕೊಟ್ಟಿದೆ. ಸಾಹಿತ್ಯ, ಸಂಗೀತ, ಕಲೆ, ಮಾಧ್ಯಮ ಸೇರಿ ಅನೇಕ ಕ್ಷೇತ್ರಗಳಲ್ಲಿ ನಿಮ್ಮ ಸಮುದಾಯ ಅಚ್ಚಳಿಯದ ಛಾಪು ಮೂಡಿಸಿದೆʼʼ ಎಂದರು.
ಗ್ರಾಮೀಣ ಸೊಗಡು ಮರೆಯಾಗುತ್ತಿದೆ
ʼʼನಮ್ಮ ಹಳ್ಳಿಯ ಗ್ರಾಮೀಣ ಸೊಗಡು ಮರೆಯುತ್ತಿದ್ದೇವೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಹೇಳಿದ ʼವಿಶ್ವವಾಣಿʼ ಸಂಪಾದಕ ವಿಶ್ವೇಶ್ವರ ಭಟ್ ಅವರ ಹೇಳಿಕೆ ಸರಿ ಇದೆ. ಹಳ್ಳಿಗಳ ಅಸ್ತಿತ್ವ ನಶಿಸಿ ಹೋಗುತ್ತಿದೆ. ಅದರ ಬಗ್ಗೆ ನಾವು ಆಲೋಚನೆ ಮಾಡಬೇಕಿದೆ. ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳು ಹಾಗೆಯೇ ಇವೆ, ಮೂಲ ಸೌಕರ್ಯಗಳು ಇಲ್ಲ, ಇದನ್ನು ಸುಧಾರಣೆ ಮಾಡುವ ಅಗತ್ಯ ಇದೆʼʼ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ನಮ್ಮ ಪೂರ್ವಜರು ಬಹಳ ಶಿಸ್ತಿನಿಂದ ಬದುಕುತ್ತಿದ್ದರು. ಆದರೆ, ಇವತ್ತು ಅಂತಹ ಪರಿಸ್ಥಿತಿ ಇಲ್ಲ. ಹಳ್ಳಿಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿ ಅಂತಹ ಶಿಸ್ತು ಬರಬೇಕು. ಇಲ್ಲವಾದರೆ ಅಭಿವೃದ್ಧಿ ಸಾಧ್ಯವಿಲ್ಲʼʼ ಎಂದು ಪ್ರತಿಪಾದಿಸಿದರು.
ರಾಮಕೃಷ್ಣ ಹೆಗಡೆ ಅವರ ಸಹೋದರರನ್ನು ನೆನೆದ ಸಚಿವರು
ಹವ್ಯಕ ಸಮುದಾಯದ ಬಾಂಧವ್ಯದ ಬಗ್ಗೆ ಕೊಂಡಾಡಿದ ಕುಮಾರಸ್ವಾಮಿ ʼʼಬಹಳ ವರ್ಷಗಳ ಹಿಂದಿನ ಮಾತು. ದಿವಂಗತ ರಾಮಕೃಷ್ಣ ಹೆಗಡೆ ಅವರ ಸಹೋದರ ಗಣೇಶ ಹೆಗಡೆ ಅವರ ಮನೆಗೆ ಒಮ್ಮೆ ಭೇಟಿ ನೀಡಿದ್ದೆ. ಅವರ ಧರ್ಮಪತ್ನಿ ನನಗೆ ಮಾತೃ ಸಮಾನರು. ನಾನು ಹೋದ ಕ್ಷಣ ಅವರೆಷ್ಟು ಸಂತೋಷಪಟ್ಟರು ಎಂದರೆ, ಬಹಳ ದಿನಗಳಿಂದ ತಪ್ಪಿಹೋದ ಮಗ ಮನೆಗೆ ಬಂದ ಎನ್ನುವಷ್ಟು ವಾತ್ಸಲ್ಯ ತೋರಿದರು. ನನಗೆ ಈಗಲೂ ಆ ಸಂದರ್ಭ ಕಣ್ಣಿಗೆ ಕಟ್ಟಿದಂತಿದೆʼʼ ಎಂದು ಸ್ಮರಿಸಿಕೊಂಡರು.
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಹರಿಹರದ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಂಚಿ ಕಾಮಕೋಟಿ ಪೀಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅನ್ಲೈನ್ ವೇದಿಕೆಯ ಮೂಲಕ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮ್ಮೇಳನದ ಗೌರವಾಧ್ಯಕ್ಷ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹೊರನಾಡು ಕ್ಷೇತ್ರದ ಭೀಮೇಶ್ವರ ಜೋಷಿ , ಮಾಜಿ ಸಚಿವರಾದ ಸಿ.ಟಿ.ರವಿ,
ʼವಿಶ್ವವಾಣಿʼ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ʼಕನ್ನಡಪ್ರಭʼ ಪತ್ರಿಕೆ ಸಮೂಹ ಸಂಪಾದಕ ರವಿ ಹೆಗಡೆ , ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ ಮತ್ತು ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ: Vishwa Havyaka Sammelana: ಪರಂಪರೆಯ ನೆರವಿನಿಂದ ಭವ್ಯ ಭಾರತ ಕಟ್ಟೋಣ: ಬಿ.ಎಸ್.ಯಡಿಯೂರಪ್ಪ