Thursday, 2nd January 2025

Vishwavani Exclusive: ಸಂಸದ ತೇಜಸ್ವಿ ಸೂರ್ಯಗೆ ಕಂಕಣ ಭಾಗ್ಯ; ಚೆನ್ನೈ ಮೂಲದ ಗಾಯಕಿ ಸಿವಶ್ರೀ ಜತೆ ಮಾ. 4ಕ್ಕೆೆ ವಿವಾಹ!

Vishwavani Exclusive

ಬೆಂಗಳೂರು: ಯಂಗ್ ಆ್ಯಂಡ್ ಡೈನಾಮಿಕ್ ಮತ್ತು ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್‌ ಸಂಸದ ಎಂದೇ ಕರೆಯಿಸಿಕೊಂಡಿರುವ ತೇಜಸ್ವಿ ಸೂರ್ಯ (Tejasvi Surya) ಅವರ ವಿವಾಹ ಯಾವಾಗ ಎನ್ನುವ ಪ್ರಶ್ನೆೆ ಪದೇ ಪದೆ ಚರ್ಚೆಗೆ ಬರುವ ವಿಷಯ. ಹಲವು ಸಂದರ್ಭದಲ್ಲಿ ಈ ಬಗ್ಗೆೆ ತೇಜಸ್ವಿ ಸೂರ್ಯ ಅವರನ್ನೇ ಕೇಳಿದ್ದರೂ ಅವರು ಗುಟ್ಟನ್ನು ರಟ್ಟು ಮಾಡಿರಲಿಲ್ಲ. ಆದರೀಗ ಹೆಚ್ಚು ಸದ್ದಿಲ್ಲದೇ, ಸೂರ್ಯ ‘ಚಂದ್ರ’ಚಕೋರಿಯನ್ನು ವರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ (Vishwavani Exclusive).

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ಗಾಯಕಿ, ಭರತನಾಟ್ಯ ಕಲಾವಿದೆಯಾಗಿರುವ ಚೆನ್ನೈ ಮೂಲದ ಸಿವಶ್ರೀ ಸ್ಕಂದಕುಮಾರ್ (Sivasri Skandaprasad) ಎನ್ನುವವರನ್ನು ವರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಎರಡು ಕುಟುಂಬಗಳೂ ಈ ವಿವಾಹಕ್ಕೆೆ ಒಪ್ಪಿಗೆಯ ಮುದ್ರೆೆ ಒತ್ತಿದ್ದು, 2025ರ ಮಾರ್ಚ್‌ನಲ್ಲಿ ವಿವಾಹ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಈ ಮೂಲಕ ಬಹಳ ದಿನಗಳಿಂದ ಅಸಂಖ್ಯ ಯುವತಿಯರ ‘ನಿದ್ದೆ ಕದ್ದ’ ಸಂಸದನಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬರಲಿದೆ. ತೇಜಸ್ವಿ ಸೂರ್ಯ ಅವರ ವಿವಾಹ ಮಾರ್ಚ್ 4ಕ್ಕೆೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿದ್ದರೂ, ಈ ಬಗ್ಗೆೆ ಬಹಿರಂಗವಾಗಿ ತೇಜಸ್ವಿ ಸೂರ್ಯ ಅಥವಾ ಸಿವಶ್ರೀ ಸ್ಕಂದಪ್ರಸಾದ್ ಎಲ್ಲಿಯೂ ಹೇಳಿಕೊಂಡಿಲ್ಲ. ವಿವಾಹ ನಡೆಯುವ ಸ್ಥಳ ಸೇರಿದಂತೆ ಹಲವು ಅಂಶಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

29 ವರ್ಷಕ್ಕೆೆ ಬೆಂಗಳೂರು ಸಂಸದನಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ತೇಜಸ್ವಿ ಸೂರ್ಯ ಅವರು ತಮ್ಮ 34ನೇ ವಯಸ್ಸಿಗೆ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸಂಸದರಾಗಿದ್ದರೂ ತೇಜಸ್ವಿ ಸೂರ್ಯ ಅವರು ಸೈಕ್ಲಿಂಗ್‌, ವಾಕಥಾನ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಐರನ್ ಮ್ಯಾನ್ ಮ್ಯಾರಥಾನ್‌ನಲ್ಲಿ ಗೆಲ್ಲುವ ಮೂಲಕ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಮೊದಲ ಸಂಸದ ಎನಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಸಿವಶ್ರೀ ಅವರೂ ಭಾಗವಹಿಸಿದ್ದು ವಿಶೇಷ.

ಯಾರೀಕೆ ಸಿವಶ್ರೀ ಸ್ಕಂದಪ್ರಸಾದ್?

ಸಿವಶ್ರೀ ಸ್ಕಂದಪ್ರಸಾದ್ ಅವರು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನು, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್‌, ಟ್ರೆಕ್ಕಿಂಗ್‌, ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಸಿವಶ್ರೀ ಅವರು ಯೂಟ್ಯೂಬ್ ಚಾನೆಲ್‌ಗೆ ಸುಮಾರು 2 ಲಕ್ಷ ಹಿಂಬಾಲಕರಿದ್ದಾರೆ.

ಮೋದಿಯಿಂದ ಶಹಬಾಸ್‌ಗಿರಿ ಪಡೆದಿದ್ದ ಯುವತಿ

ಅಯೋಧ್ಯೆೆ ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಶ್ರೀರಾಮನ ಕುರಿತಾಗಿ ಸಿವಶ್ರೀ ಸ್ಕಂದಪ್ರಸಾದ್ ಅವರು ಹಾಡಿದ್ದ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿ ಟ್ವಿಟರ್‌ (ಎಕ್ಸ್‌)ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿವಶ್ರೀ ಅವರು ಕನ್ನಡದ ‘ಪೂಜಿಸಲೆಂದೇ ಹೂವಗಳ ತಂದೆ…’ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ್ದ ಮೋದಿ ಅವರು, ಈ ಹಾಡಿನ ಲಿಂಕ್ ಟ್ವಿಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಮ, ಕೃಷ್ಣ, ಈಶ್ವರ, ಪಾಂಡುರಂಗ, ಸೌಂದರ್ಯ ಲಹರಿ ಸೇರಿದಂತೆ ಭಕ್ತಿಗೀತೆ, ಕೀರ್ತನೆ ಹಾಗೂ ಭಜನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Tejaswi Surya: ವಕ್ಫ್‌ ವಿರುದ್ಧ ಹೇಳಿಕೆ; ಸಂಸದ ತೇಜಸ್ವಿ ಸೂರ್ಯ ಮೇಲಿನ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್