Saturday, 28th December 2024

Volleyball Championship: ರಾಜ್ಯ ಮಟ್ಟದ ವಾಲಿ ಬಾಲ್ ಸ್ಪರ್ಧೆ; ನಾಗಮಂಗಲ ಬಿಜಿಎಸ್ ಕಾಲೇಜು ಚಾಂಪಿಯನ್

Volleyball Championship

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ವಾಲಿ ಬಾಲ್ ಸ್ಪರ್ಧೆಯ (Volleyball Championship) ಪುರುಷರ ವಿಭಾಗದಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜಿಎಸ್ ಕಾಲೇಜಿಗೆ ಚಾಂಪಿಯನ್ ಪಟ್ಟ ದೊರೆತಿದ್ದು, ಮಂಗಳೂರಿನ ನಿಟ್ಟೆ ಕಾಲೇಜು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ತುಮಕೂರಿನ ಎಸ್.ಎಸ್.ಐ.ಟಿ ಮತ್ತು ಎಸ್.ಐ.ಟಿ ಕಾಲೇಜುಗಳು ಪಡೆದುಕೊಂಡಿವೆ. ಮಹಿಳೆಯರ ವಿಭಾಗದಲ್ಲಿ ತುಮಕೂರಿನ ಎಸ್.ಎಸ್.ಐ.ಟಿ ಕಾಲೇಜಿನ ಮಹಿಳೆಯರ ತಂಡ ಮೊದಲ ಸ್ಥಾನ ಪಡೆದುಕೊಂಡರೆ, ಹಾಸನದ ಎನ್.ಎ.ವಿ.ಕೆ.ಐ.ಎಸ್ ಎಂಜಿನಿಯರಿಂಗ್ ಕಾಲೇಜು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಸ್ಟರ್ಧೆಯಲ್ಲಿ16 ಪುರುಷರ ತಂಡಗಳು ಮತ್ತು 6 ಮಹಿಳೆಯರ ತಂಡಗಳು ಭಾಗಿಯಾಗಿದ್ದವು. ರಾಜ್ಯದ ಹಾಸನ, ಮಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕಾಲೇಜುಗಳಿಂದ ತಂಡಗಳು ಆಗಮಿಸಿದ್ದವು.

ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಎಸ್.ಎಸ್.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ ಅವರು, ರಾಜ್ಯದ ವಿವಿಧ ಜಿಲ್ಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಸ್ಪರ್ಧೆಗಳನ್ನು ನಡೆಸುವುದಾಗಿ, ವಿದ್ಯಾರ್ಥಿಗಳು ಇದೇ ರೀತಿ ಉತ್ಸಾಹದಿಂದ ಭಾಗವಹಿಸುವಂತೆ ಕೋರಿದರು.

ಟೂರ್ನಮೆಂಟ್‌ನಲ್ಲಿ ದೈಹಿಕ ಶಿಕ್ಷಕರು ಹಾಗೂ ತರಬೇತುದಾರ ಚನ್ನೇಗೌಡ, ತುಮಕೂರು ಜಿಲ್ಲೆಯ ವಾಲಿ ಬಾಲ್ ಸಂಸ್ಥೆಯ ತೀರ್ಪುಗಾರ ಸುರೇಶ್ ಸೇರಿದಂತೆ ಮತ್ತಿತರ ತರಬೇತುದಾರರು, ರೆಫರಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಎಸ್.ಐ.ಟಿ.ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಿರ್ಮಲಾ ಕಾರ್ಯಕ್ರಮವನ್ನು ನಿರೂಪಿಸಿದರೆ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್. ರುದ್ರೇಶ್‌ ಕಾರ್ಯಕ್ರಮಕ್ಕೆ ಆಗಮಿಸಿದವರನ್ನೆಲ್ಲಾ ವಂದಿಸಿದರು.

ಈ ಸುದ್ದಿಯನ್ನೂ ಓದಿ | AUS vs IND: ನಿತೀಶ್​ ರೆಡ್ಡಿ ಶತಕ; ಭಾರತ ದಿಟ್ಟ ಹೋರಾಟ