ಮಂಗಳೂರು: ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯನ್ನು ಇಲ್ಲಿಯವರಿಗೆ ನೀಡದೆ ನೆರೆಯ ದೇಶಗಳಿಗೆ ನೀಡಿದ್ದೇಕೆ ಎಂದು ಮಂಗಳೂರು ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಳೆದ ಐದಾರು ತಿಂಗಳಿನಿಂದ ವಿಶ್ವದಲ್ಲಿ ೨೨ ಕಂಪನಿಗಳು ಲಸಿಕೆ ಉತ್ಪಾದನೆ ಮಾಡುತ್ತಿದೆ. ಆದರೆ ಬಿಜೆಪಿ ಸರ್ಕಾರವೇಕೆ ಭಾರತ ದಲ್ಲಿ ಅವಕಾಶ ನೀಡಿಲ್ಲ? ಬಳಿಕ ಬರೀ ಸ್ಪುಟ್ನಿಕ್ ಕಂಪನಿಗೆ ಮಾತ್ರ ಭಾರತದಲ್ಲಿ ಲಸಿಕೆ ಮಾರುಕಟ್ಟೆ ನಡೆಸಲು ಅವಕಾಶ ನೀಡಿದ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಈ ಲಸಿಕೆ ವಿಚಾರದಲ್ಲಿ ಪಾರದರ್ಶಕತೆ ಯಾಕಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಶಾಸಕ, ಲಸಿಕೆಯ ಪ್ರಮಾಣ ಪತ್ರದಲ್ಲಿ ಫೋಟೋ ಬಿತ್ತರಿಸುವ ಮೂಲಕ ರಾಜಕೀಯ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಟೂಲ್ ಕಿಟ್ ವಿಚಾರದಲ್ಲಿ ಮಾತನಾಡಿ, ಟೂಲ್ ಕಿಟ್ ಎಲ್ಲ ಪಕ್ಷದಲ್ಲಿರುವ ಪಾರದರ್ಶಕ ದಾಖಲೆ. ಈ ಆಧುನಿಕ ತಂತ್ರಜ್ಞಾನ ದಲ್ಲಿ ಎಲ್ಲ ಪಕ್ಷಗಳು ಈ ಟೂಲ್ ಕಿಟ್ ಬಳಸುತ್ತದೆ. ಆದರೆ ಬಿಜೆಪಿಯು ಕಾಂಗ್ರೆಸ್ ಟೂಲ್ ಕಿಟ್ ಅನ್ನು ನಕಲಿ ಮಾಡಿ ಕಾಂಗ್ರೆಸ್ ಅನ್ನು ದೂಷಿಸಲು ಪ್ರಾರಂಭಿಸಿ, ಕೊನೆಗೆ ಅವರೆ ಸಿಕ್ಕಿಬಿದ್ದಿದ್ದಾರೆ. ಅವರ ನಿಜವಾದ ಬಣ್ಣ ಇಂದು ಬಯಲಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಜೆಪಿ ನಾಯಕರು ಅವರ ಪಕ್ಷ ಉಳಿಸಲು ಆಕ್ಸಿಜನ್ ಉಳಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷವೇ ನಾಚಿಕೆ ಪಡುವಂತಾಗಿದೆ ಎಂದು ಲೇವಡಿ ಮಾಡಿದರು.