Thursday, 12th December 2024

ಬದುಕು, ಬಸ್‌ ಎರಡನ್ನೂ ನಡೆಸುತ್ತಿರುವ ಚಾಲಾಕಿ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 54

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬಿಎಂಟಿಸಿ ಪ್ರಪ್ರಥಮ ಬಸ್ ಚಾಲಕಿ ಯಶೋಗಾಥೆ

ಬೆಂಗಳೂರು : ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವ ಕೆಲಸ ಮಾಡಿದರೂ ಅವಳನ್ನು ಕೀಳು ಭಾವನೆಯಿಂದ ನೋಡುವುದು ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ ಅದಕ್ಕೆ ವಿರುದ್ಧ ಎನ್ನುವಂತೆ ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಽಸುವ ಛಲವೂ ಮಹಿಳೆಗೆ ರಕ್ತಗತವಾಗಿ ಬಂದಿರುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೆಳಗಾವಿ ಮೂಲದ ಪ್ರೇಮಾ ರಾಮಪ್ಪ ನಡಬಟ್ಟಿ.

ಬೆಂಗಳೂರಿನ ಪ್ರಪ್ರಥಮ ಬಸ್ ಚಾಲಕಿ: ಪ್ರೇಮಾ ನಡಬಟ್ಟಿ ಅವರು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ತಮ್ಮ ಜೀವನದ ಯಶೋಗಾಥೆಯನ್ನು ಕೇಳುಗರ ಮುಂದಿಟ್ಟರು. ಸುಮಾರು 12 ವರ್ಷಗಳಿಂದ ಬಿಎಂಟಿಸಿಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೇಮಾ ರಾಮಪ್ಪ ನಡಬಟ್ಟಿ ಅವರು ಎಲ್ಲ ಮಹಿಳೆಯರಿಗೂ ಒಂದು ರೀತಿಯಲ್ಲಿ ಸೂರ್ತಿ ಎಂದೇ ಹೇಳಬಹುದು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡ ಪ್ರೇಮಾ ಅವರ ಹೆಗಲ ಮೇಲೆ ಬಿದ್ದಿದ್ದು ಅವರ ಕುಟುಂಬ ನಿರ್ವಹಣೆಯೆಂಬ ನೊಗ ಮತ್ತು ಮಕ್ಕಳ ಜವಾಬ್ದಾರಿ. ತಾನು ಬಸ್ ಚಾಲಕಿಯಾಗ ಬೇಕೆಂದು ಎಂದೂ ಅಂದುಕೊಂಡಿರದ ಪ್ರೇಮಾ ಅವರಿಗೆ ಪರಿಸ್ಥಿತಿ ಅನಿವಾರ್ಯತೆ ಈ ಕೆಲಸಕ್ಕೆ ಬರುವಂತೆ ಮಾಡಿತು. ಪತಿಯ ಅಕಾಲಿಕ ಸಾವು ಹಾಗೂ ಬೆಳೆಯುತ್ತಿದ್ದ ಮಗನ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಅರಿಸಿ ಈ ಕ್ಷೇತ್ರಕ್ಕೆ ಬಂದವರು ಪ್ರೇಮಾ.

ನಮ್ಮದು ಬಡತನದ ಕುಟುಂಬ: ನಾನು ಎಸ್ ಎಸ್‌ಎಲ್‌ಸಿ ಓದುತ್ತಿರುವಾಗ ಗೋಕಾಕ್‌ನಲ್ಲಿ ಹಾಸ್ಟೆಲ್‌ಗೆ ಸೇರಿ ಕೊಂಡೆ. ಪಿಯುಸಿ ಅಲ್ಲೇ ಓದಿದೆ. ಬಿಎ ಓದುತ್ತಿರುವಾಗ ನಾನೇ ದುಡಿದು ಪದವಿ ಪೂರ್ಣಗೊಳಿಸಿದೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆಗ 500 ರು. ಸಂಬಳ ನೀಡುತ್ತಿದ್ದರು. ಒಂದು ಮಗು ಆದ ಮೇಲೆ ವರ್ಷದಲ್ಲಿ ಗಂಡ ತೀರಿಕೊಂಡರು. ಬಳಿಕ ತವರು ಮನೆಗೆ ಬಂದಾಗ ನನ್ನ ತಾಯಿ, ನೀನು ನೌಕರಿ ಮಾಡು, ಮಗುವನ್ನು ನಾನು ಸಾಕುತ್ತೀನಿ ಅಂದಳು.

ಆಗ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಒಪಿಡಿಯಲ್ಲಿ ಪೇಪರ್ ಓದುತ್ತಿದ್ದಾಗ ಬಸ್ ಚಾಲಕ, ಕಂಡಕ್ಟರ್ ಹುದ್ದೆಗಾಗಿ ಆಹ್ವಾನಿಸಿದ್ದ ನೇಮಕಾತಿ ಆದೇಶ
ನೋಡಿದೆ. ಆ ನೌಕರಿಗೆ ಅರ್ಜಿ ಹಾಕಲು ನಿರ್ಧರಿಸಿದೆ. ಆರ್‌ಟಿಒ ಕಚೇರಿಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಲು ಹೋದಾಗ ಹೆಣ್ಣು ಮಕ್ಕಳಿಗೆ ಕೊಡಲ್ಲ ಅಂದರು. ಬಳಿಕ ನನ್ನ ಕಷ್ಟ ಹೇಳಿಕೊಂಡಾಗ ಲೈಸೆನ್ಸ್ ಕೊಟ್ಟರು.

ಆಸ್ಪತ್ರೆಯಲ್ಲಿದ್ದಾಗಲೇ ಗೋಕಾಕ್‌ನ ಲಕ್ಷ್ಮೀ ಡ್ರೈವಿಂಗ್ ಸ್ಕೂಲ್‌ನಲ್ಲಿ ನಾಲ್ಕು ಚಕ್ರ ವಾಹನದ ಲೈಸೆನ್ಸ್ ಪಡೆದುಕೊಂಡೆ. ಹೆವಿ ವೆಹಿಕಲ್ ಲೈಸೆನ್ಸ್ ಕೂಡ ಸಿಕ್ಕಿತು. ಅರ್ಜಿ ಸಲ್ಲಿಸಿದ ನಂತರ ಚಲನ್ ಕಟ್ಟಲು ದುಡ್ಡಿರಲಿಲ್ಲ. ಆಮೇಲೆ ವೈದ್ಯರು ಒಬ್ಬರು ಸಹಾಯ ಮಾಡಿದರು. ಬಳಿಕ ಸಂದರ್ಶನಕ್ಕೆ ಹೋಗಿದೆ. ಕೆಂಗೇರಿಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದರು. ಅದರಲ್ಲಿ ಆಯ್ಕೆಯಾಗಿದ್ದೆ ಎಂದರು.

ಪ್ರೇಮಾ ಅವರ ಬದುಕಿನ ಸಂದೇಶ

? ನಮಗೆ ಕೊನೆಗೆ ಉಳಿದಿರುವುದು ಮೂರಡಿ ಜಾಗ. ಜೀವನದಲ್ಲಿ ಎಷ್ಟು ಗಳಿಸಿದರೆ ಪ್ರಯೋಜನವೇನು?
? ಹರಿದ ಚಡ್ಡಿ ಹೊಲೆದು ಹಾಕಿಕೊಂಡು, ಒಂದೇ ವಸದಲ್ಲಿ ಶಾಲೆಗೆ ಹೋಗ್ತಿದ್ದೆ. ಅದನ್ನೆ ವಾಶ್ ಮಾಡಿ ಹಾಕಿಕೊಳ್ಳುತ್ತಿದ್ದೆ.
? ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಇದ್ದಾರೆ. ನಾವೂ ಯಾವಾಗಲೂ ಬಲಶಾಲಿಗಳು.
? ಪೊಲೀಸ್ ಆಗಲು ಬಹಳ ಪ್ರಯತ್ನ ಮಾಡಿದ್ದೆ. ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿ, ಚಾಲಕ ವೃತ್ತಿಯಲ್ಲಿ ತೊಡಗಿದೆ.
? ನಮ್ಮ ಕೈಯಲ್ಲಿ ಯಾವುದೂ ಅಸಾಧ್ಯವಿಲ್ಲ. ಮಹಿಳೆ ನಾಲ್ಕು ಗೋಡೆ ನಡುವೆ ಸೀಮಿತವಾಗಿರಬಾರದು.
? ಏನಾದರೂ ಸಾಧನೆ ಮಾಡಬೇಕು. ಯಾವುದಕ್ಕೂ ಹೆದರಬಾರದು. ನಮ್ಮಲ್ಲಿ ಒಳ್ಳೆಯ ಮನಸ್ಸು, ಆತ್ಮವಿಶ್ವಾಸ, ಹೃದಯವಂತಿಕೆ ಇರಬೇಕು.

ಬಸ್ ಓಡಿಸುವಾಗ ಮೈಯೆಲ್ಲಾ ಕಣ್ಣು
ಅನೇಕ ಮಹಿಳೆಯರು ವಿಮಾನ ಓಡಿಸುತ್ತಾರೆ, ರೈಲು ಓಡಿಸುತ್ತಾರೆ. ಅಲ್ಲಿ ಚಾಲನೆ ಮಾಡುವಾಗ ಒಂದು ಇರುವೆನೂ ಅಡ್ಡ ಬರಲ್ಲ. ಆದರೆ ಬಸ್ ಓಡಿಸುವಾಗ ಹಾಗಲ್ಲ. ಇಲ್ಲಿ ಬಹುತೇಕರು ರಸ್ತೆ ನಿಯಮಗಳನ್ನು ಪಾಲಿಸುವುದಿಲ್ಲ. ಹೆಜ್ಜೆ ಹೆಜ್ಜೆಗೂ ಬ್ರೇಕ್ ಹಾಕಬೇಕು. ಪ್ರತಿ ಬಾರಿಯೂ ಶಕ್ತಿಯೆಲ್ಲ ಒಂದೆಡೆ ಸೇರಿಸಿ ಬ್ರೇಕ್ ಹಾಕಬೇಕು. ಇಡೀ ದೇಹವೇ ಕುಗ್ಗಿ ಹೋಗುವಂತಾಗುತ್ತದೆ. ದೊಡ್ಡ ವಾಹನವಾಗಿದ್ದರಿಂದ ಅಪಘಾತವಾದರೆ ನಮ್ಮದೇ ತಪ್ಪಾಗುತ್ತದೆ. ಹಾಗಾಗಿ ಚಾಲಕನ ಸೀಟಿನಲ್ಲಿ ಕುಳಿತಾಗ ಮೈಯೆಲ್ಲಾ ಕಣ್ಣಾಗುತ್ತದೆ ಎಂದು ಪ್ರೇಮಾ ನಡಬಟ್ಟಿ ಅವರು ಬಸ್ ಚಾಲಕರ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

***

ಬಿಎಂಟಿಸಿಯಲ್ಲಿ ಸಾವಿರಾರು ಪುರುಷ ಚಾಲಕರು ಇದ್ದಾರೆ. ಅನೇಕ ಮಹಿಳೆಯರು ಬಸ್ ಕಂಡಕ್ಟರ್ ಆಗಿದ್ದಾರೆ. ಆದರೆ ಬಸ್ ಡ್ರೈವರ್ ಆದ ಪ್ರಪ್ರಥಮ ಮಹಿಳೆ ಪ್ರೇಮಾ ನಡಬಟ್ಟಿ ಅವರು. ಒಬ್ಬ ಮಹಿಳೆ ಮನಸು ಮಾಡಿದರೆ ಸಂಕಷ್ಟ, ಸವಾಲುಗಳನ್ನು ಎದುರಿಸಿ ತನ್ನದೇ ಆದ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಪ್ರೇಮಾ ನಡಬಟ್ಟಿ ಅವರು ಜ್ವಲಂತ ನಿದರ್ಶನ. ಪದ್ಮಶ್ರೀ ಪ್ರಶಸ್ತಿ ಸೂಚಿಸುವ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಪ್ರೇಮಾ ಅವರು ಪದ್ಮಶ್ರೀ ಪ್ರಶಸ್ತಿಗೆ ಅರ್ಹರು.
-ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು