Sunday, 15th December 2024

ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಬರೆಯುತ್ತಿದ್ದಾಗಲೇ ಕಾರು ಡಿಕ್ಕಿ, ಇಬ್ಬರ ಸಾವು

ಕಾರ್ಕಳ: ಹೊಸ ವರ್ಷಾಚರಣೆಗೆ ಸ್ವಾಗತ ಕೋರಿ ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಬರೆಯುತ್ತಿದ್ದಾಗಲೇ  ಕಾರೊಂದು ಢಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಜಗೋಳಿ ಸಮೀಪದ ಮಿಯಾರ್‌ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಮೃತರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿ ಶರಣ್(26) ಮತ್ತು ಸಿದ್ದು(25) ಎಂದು ಗುರುತಿಸ ಲಾಗಿದೆ. ಅಪಘಾತದಲ್ಲಿ ತೌಸೀಫ್ ಮತ್ತು ಬಸವರಾಜ್ ಎಂಬ ಇನ್ನಿಬ್ಬರು ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲಿದ್ದ ನಾಲ್ವರು ಯುವಕರು ರಾತ್ರಿ ವೇಳೆ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಆರಂಭಿಸಿದ್ದರು. ಏಕಾಏಕಿ ಬಂದ ಮಾರುತಿ ಇಕೋ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ.