Thursday, 19th December 2024

Viral News: ಮಹಿಳೆಯ ಮೂಗು ಕತ್ತರಿಸಿದ ಭೂಪಾ! ತುಂಡಾದ ಮೂಗನ್ನು ಹಿಡ್ಕೊಂಡೇ ಆಸ್ಪತ್ರೆಗೆ ಬಂದ ಗಟ್ಟಿಗಿತ್ತಿ!

ಜೈಪುರ: ಇದು ‘ಒಂದು ತುಂಡು ಮೂಗಿನ ಕಥೆ..!’ – ಹೌದು, ಆಶ್ಚರ್ಯಪಡ್ಬೇಡಿ, ಇಂತದ್ದೆಲ್ಲಾ ಲೋಕದಲ್ಲಿ ಆಗ್ತಿರ್ತದೆ, ಅದ್ರಲ್ಲಿ ಕೆಲವೊಂದು ಮಾತ್ರ ಸುದ್ದಿಯಾಗ್ತಿರ್ತವೆ ಅಷ್ಟೇ..! ಈಗ ವಿಷ್ಯ ಏನಪ್ಪಾ ಅಂದ್ರೆ, ಕುಟುಂಬದ ಆಸ್ತಿ ಗಲಾಟೆಯಲ್ಲಿ ಸಂಬಂಧಿಕರೇ ಮಹಿಳೆಯೊಬ್ಬರ ಮೂಗನ್ನು ಕಟ್ ಮಾಡಿದ್ದಾರೆ, ಆದರೆ ಇದರಿಂದ ಎದೆ ಗುಂದದ ಆ ದಿಟ್ಟ ಮಹಿಳೆ ಆ ಮೂಗಿನ ತುಂಡನ್ನು ಒಂದು ಚೀಲದಲ್ಲಿ ಹಾಕ್ಕೊಂಡು ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗ್ತಿದೆ.

ಇಷ್ಟಕ್ಕೂ ಈ ಒಂದು ವಿಚಿತ್ರ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ (Rajasthan). ಇಲ್ಲಿನ ಸಾಯ್ಲಾದ (Sayla) ಮೋಕ್ನಿ (Mokni) ಗ್ರಾಮದಲ್ಲಿ ವಾಸಿಸುತ್ತಿರುವ 40 ವರ್ಷ ಪ್ರಾಯದ ಕುಕಿ ದೇವಿ ಎಂಬ ಮಹಿಳೆಯೇ ಈ ರೀತಿಯಾಗಿ ಗಲಾಟೆಯಲ್ಲಿ ಮೂಗು ಕಳೆದುಕೊಂಡವರಾಗಿದ್ದಾರೆ. ಆಸ್ತಿ ಗಲಾಟೆಗೆ ಸಂಬಂಧಿಸಿದಂತೆ ಈಕೆಯ ಸಂಬಂಧಿಕರ ನಡುವೆ ಉಂಟಾದ ಜಗಳ ಬಳಿಕ ಮಾರಾಮಾರಿಗೆ ತಿರುಗಿ ಈ ರೀತಿಯಾಗಿದೆ ಎಂಬ ಮಾಹಿತಿ ಲಭಿಸಿದೆ. ಗಲಾಟೆಯಲ್ಲಿ ಘಾಸಿಗೊಂಡ ತನ್ನ ಮೂಗಿನ ತುಂಡಿನೊಂದಿಗೆ ಕುಕಿದೇವಿ ನೇರವಾಗಿ ಪಾಲಿಯಲ್ಲಿರುವ (Pali) ಆಸ್ಪತ್ರೆಗೆ ಧಾವಿಸಿದ್ದಾರೆ.

ಕುಕಿದೇವಿ ವಾಸವಿದ್ದ ಗ್ರಾಮದಲ್ಲಿ ಆಕೆಗೆ ಸೇರಿದ ಒಂದು ಜಾಗವಿದ್ದು ಇದಕ್ಕೆ ಸಂಬಂಧಿಸಿದಂತೆ ಆಕೆಗೆ ಮತ್ತು ಆಕೆಯ ಮಾವ ಹಾಗೂ ಅವರ ಕುಟುಂಬದವರಿಗೆ ಬಹಳ ಹಿಂದಿನಿಂದಲೂ ತಗಾದೆಯಿದೆ. ಈ ವಿವಾದಾತ್ಮಕ ಜಾಗಕ್ಕೆ ಕುಕಿದೇವಿ ಡಿ.17ರಂದು ತನ್ನ ನಾದಿನಿ ಹಾಗೂ ಮಗನೊಂದಿಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಅಳಿಯ ಓಂಪ್ರಕಾಶ್ ಹಾಗೂ ಇತರರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ.

ಇವರಿಬ್ಬರ ನಡುವೆ ಗಲಾಟೆ ಜೋರಾಗುತ್ತಿದ್ದಂತೆ ಓಂಪ್ರಕಾಶ್ ಕುಕಿದೇವಿಯ ಮೂಗನ್ನೇ ಚೂರಿಯಿಂದ ತುಂಡು ಮಾಡಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಅಲ್ಲಿದ್ವವರು ಒಂದರೆಕ್ಷಣ ಬೆಚ್ಚಿಬಿದ್ದರೂ, ಧೈರ್ಯಗುಂದದ ದಿಟ್ಟ ಮಹಿಳೆ ಕುಕಿದೇವಿ, ಸುರಿಯುತ್ತಿರುವ ರಕ್ತ ಮತ್ತು ಆಗುತ್ತಿರುವ ನೋವನ್ನೂ ಲೆಕ್ಕಿಸದೇ ತುಂಡಾಗಿ ಬಿದ್ದ ತನ್ನ ಮೂಗಿನ ತುಂಡನ್ನು ಹಿಡಿದುಕೊಂಡು ಪಾಲಿಯಲ್ಲರುವ ಬಾಂಗಾರ್ ಆಸ್ಪತ್ರೆಗೆ (Bangar Hospital) ಚಿಕಿತ್ಸೆಗಾಗಿ ಧಾವಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: Viral Video: ಹೌಸ್ ಆಫ್ ಪಿಜ್ಜಾ; ನೆಟ್ಟಿಗರಂತಿದ್ದಾರೆ ಇದು ಪಿಜ್ಜಾ ಪ್ರಿಯರ ಸ್ವರ್ಗ!

ಈ ರೀತಿ ತನ್ನ ತುಂಡಾದ ಮೂಗನ್ನು ಹಿಡಿದುಕೊಂಡ ಬಂದ ಕುಕಿದೇವಿಯ ಸ್ಥಿತಿಯನ್ನು ಕಂಡು ಆಸ್ಪತ್ರೆಯವರೂ ಒಮ್ಮೆಗೆ ಬೆಚ್ಚಿದ್ದಾರೆ. ಆದರೆ ಪರಿಸ್ಥಿತಿಯನ್ನು ಅರಿತುಕೊಂಡು ಆಕೆಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಕಿದೇವಿಯನ್ನು ಜೋಧ್ ಪುರದಲ್ಲಿರುವ (Jodhpur) ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.

ಬಾಂಗಾರ್ ಆಸ್ಪತ್ರೆಯ ಡಾ ಜುಗಲ್ ಮಹೇಶ್ವರ್ ಹೇಳುವ ಪ್ರಕಾರ, ಆಕೆಯ ಮೂಗು ತೀವ್ರ ಸ್ವರೂಪದಲ್ಲಿ ತುಂಡಾಗಿದ್ದು, ಆದರೂ ಅದನ್ನು ಪ್ಲಾಸ್ಟಿಕ್ ಸರ್ಜರಿ (plastic surgery) ಮೂಲಕ ಜೋಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಜಾಗದ ವಿಷಯದಲ್ಲಿ ಶುರುವಾದ ಗಲಾಟೆಯಲ್ಲಿ ತನ್ನ ಮೂಗಿನ ನೇರಕ್ಕೆ ವರ್ತಿಸಿದ ಓಂಪ್ರಕಾಶ್ ನ ದುಡುಕುತನದಿಂದ ಮಹಿಳೆಯೊಬ್ಬಳ ಮೂಗೇ ಕಟ್ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.