ಇದೊಂಥರಾ ಗಮ್ಮತ್ತಿನ ಸುದ್ದಿ ಮಾರ್ರೆ.. ನಮ್ಮ ದೇಶದಲ್ಲಿ ನಾವು ಹೊಟೇಲಿಗೆ ಹೋಗಿ ತಿಂಡಿ ತಿಂದು ಕಾಫಿ ಕುಡಿದ್ರೆ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಬೇಕು! ನಾವು ಯಾವುದೇ ವಸ್ತು ಪರ್ಚೇಸ್ ಮಾಡಿದ್ರೂ ಅದಕ್ಕಿಂತಿಷ್ಟು ಪರ್ಸಂಟೇಜ್ ಅಂತ ಸರಕಾರಕ್ಕೆ ಟ್ಯಾಕ್ಸ್ ಕಟ್ಬೇಕು. ಈ ಟ್ಯಾಕ್ಸ್ ವಿಚಾರ ಇತ್ತೀಚಿನ ದಿನಗಳಲ್ಲಂತೂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇರೋದು ನಿಮ್ಗೆಲ್ಲಾ ಗೊತ್ತೇ ಇದೆ. ಇದೆಲ್ಲದರ ನಡುವೆ ಪಾನಿಪೂರಿ ವ್ಯಾಪಾರಿಯೊಬ್ಬರು 2023-24ರಲ್ಲಿ ಆನ್ ಲೈನ್ ಮೂಲಕ 40 ಲಕ್ಷ ರೂಪಾಯಿಗಳ ವಹಿವಾಟು ನಡೆಸಿದ ಕಾರಣಕ್ಕೆ ಅವರಿಗೆ ಇದೀಗ ಜಿಎಸ್ಟಿ (GST) ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದು, ಸದ್ಯಕ್ಕೆ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Post) ಆಗಿದ್ದು, ಪರ-ವಿರೋಧ ಚರ್ಚೆಗಳು ಜೊರಾಗಿಯೇ ನಡೆಯುತ್ತಿದೆ.
ತಮಿಳುನಾಡಿನ (Tamil Nadu) ಪಾನಿ ಪೂರಿ ವ್ಯಾಪಾರಿಯೊಬ್ಬರು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆನ್‌ಲೈನ್ ಪೇಮೆಂಟ್ (Online Payment) ಮೂಲಕ 40 ಲಕ್ಷ ರೂಪಾಯಿಗಳ ವಹಿವಾಟು ನಡೆಸಿದ್ದಾರೆಂದು ಅವರ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣು ಬಿದ್ದಿದೆ. ಇದೀಗ ಈ ಬಡಪಾಯಿ ವ್ಯಾಪಾರಿಗೆ ತಮಿಳುನಾಡು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಹಾಗೂ ಕೇಂದ್ರ ಜಿಎಸ್ಟಿ (GST) ಕಾಯ್ದೆಯಡಿಯಲ್ಲಿ ಕಳೆದ ಡಿಸೆಂಬರ್ 17ರಂದು ಸಮನ್ಸ್ ನೀಡಲಾಗಿದೆ.
ಜಿಎಸ್ಟಿ ನಿಯಮಾವಳಿಗಳ ಪ್ರಕರ ವಾರ್ಷಿಕ 40 ಲಕ್ಷ ರೂಪಾಯಿಗಳಿಗಿಂತ ಅಧಿಕ ವಹಿವಾಟು ನಡೆಸುವ ವ್ಯಾಪಾರಿಗಳು ನೋಂದಾವಣೆ ಮಾಡಿಕೊಂಡು ತೆರಿಗೆ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇದೀಗ ಈ ಪಾನಿಪೂರಿ ವ್ಯಾಪಾರಿಗೆ ನೀಡಲಾಗಿರುವ ನೋಟೀಸು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವ್ಯಾಪಾರಿಗೆ ಕಳೆದ ಮೂರು ವರ್ಷಗಳ ವ್ಯಾಪಾರಕ್ಕೆ ಸಂಬಂಧಿಸಿದ ಹಣಕಾಸು ದಾಖಲೆಗಳ ಸಹಿತ ಖುದ್ದಾಗಿ ತೆರಿಗೆ ಆಯುಕ್ತರ ಕಚೇರಿಗೆ ಹಾಜರಾಗುವಂತೆ ಈ ನೊಟೀಸ್‌ನಲ್ಲಿ ಸೂಚಿಸಲಾಗಿದೆ.
ಈ ವ್ಯಾಪಾರಿಯು ಕಳೆದ ಆರ್ಥಿಕ ವರ್ಷದಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಪಡೆದುಕೊಂಡ ಹಣದ ಮೌಲ್ಯದ ಲೆಕ್ಕಾಚಾರದ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣು ಇದಿಗ ಬಿದ್ದಿದೆ! ಇನ್ನು, ತನ್ನ ವಹಿವಾಟು 40 ಲಕ್ಷ ರೂಪಾಯಿಗಳನ್ನು ದಾಟಿದ್ದರೂ ಜಿಎಸ್ಟಿ. ನೋಂದಾವಣೆಯನ್ನು ಪಡೆದುಕೊಳ್ಳದಿರುವ ಬಗ್ಗೆಯೂ ಈ ನೋಟೀಸಿನಲ್ಲಿ ಉಲ್ಲೇಖಿಸಲಾಗಿದ್ದು, ಇದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.
ಈ ನೋಟೀಸಿಗೆ ಸಂಬಂಧಿಸಿದಂತೆ ಇದೀಗ ಇಂಟರ್ನೆಟ್ ನಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ’40 ಲಕ್ಷ ರೂಪಾಯಿಗಳು ಆತ ಸ್ವೀಕರಿಸಿದ ಮೊತ್ತ ಮತ್ತು ಇದು ಅವರ ಆದಾಯ ಆಗಿರಲೂ ಬಹುದು, ಆಗಿರದೆಯೂ ಇರಬಹುದು. ನೀವು ಈತನ ವ್ಯಾಪಾರದ ಸಾಮಾನುಗಳ ವೆಚ್ಚ, ಕೂಲಿ ವೆಚ್ಚ, ನಿಶ್ಚಿತ ವೆಚ್ಚಗಳನ್ನು ಕಳೆಯಬೇಕಲ್ಲವೇ.. ಹೀಗಾದಾಗ, ಆತನಿಗೆ ಸಾಕಾಗುಷ್ಟೇ ಆದಾಯ ಬಂದಿರಬಹುದು’ ಎಂಬುದಾಗಿ ಒಬ್ಬರು ಲಾಜಿಕಲ್ ಆಗಿ ಪ್ರತಿಕ್ರಿಯಿಸಿದ್ದಾರೆ.
‘ನನ್ನ ಪ್ರಕಾರ 50 ಪ್ರತಿಶತಕ್ಕಿಂತ ಹೆಚ್ಚಿನ ಜನ ನಗದು ರೂಪದಲ್ಲೇ ನೀಡಿರಬಹುದು, ಇದು 50-100 ರೂಪಾಯಿಗಳಾಗಿರಬಹುದು. ಈ ರೀತಿಯಾದಲ್ಲಿ ಆತ ವರ್ಷಕ್ಕೆ 60 ಲಕ್ಷಕ್ಕಿಂತ ಕಡಿಮೆ ಗಳಿಸದಿರಲಾರ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Post: ವೈರಲ್ ಆಯ್ತು 1986ರ ಸಂಗೀತ ರಸ ಸಂಜೆಯ ಪ್ಯಾಂಪ್ಲೆಟ್; ಯಾರ ಕಾರ್ಯಕ್ರಮವಿದು ಗೆಸ್ ಮಾಡಿ ನೋಡೋಣ…!?
‘ಹೆಚ್ಚಿನ ಮೆಡಿಕಲ್ ಕಾಲೇಜುಗಳ ಪ್ರೊಫೆಸರ್ ಗಳಿಗಿಂತ ಹೆಚ್ಚಿನ ವೇತನ ಈತನದ್ದು, ಅವರೆಲ್ಲರೂ ನಿಗದಿತ ತೆರಿಗೆ ಪಾವತಿಸುತ್ತಾರೆ. ಈ ಪಾನಿ ಪೂರಿ ವ್ಯಾಪಾರಿ ತನ್ನ ಬಿಲ್ ಗೆ ಜಿಎಸ್.ಟಿ. ಸೇರಿಸಿ ಸರಕಾರಕ್ಕೆ ತೆರಿಗೆ ಪಾವತಿಸಬಹುದು. ಆದರೆ ಹಾಗೆ ಮಾಡಿದಲ್ಲಿ ಸ್ಪರ್ಧೆಯಲ್ಲಿ ಕಡಿಮೆ ಬಿಲ್ ಇರುವಲ್ಲಿಗೆ ಗ್ರಾಹಕರು ಹೊಗುತ್ತಾರೆ. ಈ ರೀತಿಯ ತೆರಿಗೆ ವಿಧಾನಗಳು ಜನರನ್ನು ನಗದು ಪಾವತಿಯತ್ತ ಹೆಚ್ಚು ಒಲವು ತೋರುವಂತೆ ಮಾಡುತ್ತದೆ’ ಎಂದು ಇನ್ನೊಬ್ಬರ ಅಭಿಪ್ರಾಯವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಒಂದು ವಿಚಾರವನ್ನು ಇಲ್ಲಿ ಹಂಚಿಕೊಳ್ಳುವುದಾದರೆ, ಈ ಹಿಂದೆ, ಕಾಮಿಡಿಯನ್ ಒಬ್ಬರು ಮಾಡಿದ್ದ ಕಂಟೆಂಟ್ ವೈರಲ್ ಆಗಿತ್ತು. ಇದರಲ್ಲಿದ್ದಂತೆ, ಪಾನಿ ಪೂರಿ ಸ್ಟಾಲ್ ವ್ಯಾಪಾರಿಯ ಆದಾಯವು ಕಾರ್ಪೊರೇಟ್ ಉದ್ಯೋಗಿಯ ಆದಾಯಕ್ಕಿಂತ ಹೆಚ್ಚಿರುತ್ತದೆ. ಈ ತಮಾಷೆಯ ಕಂಟೆಂಟ್ ಇದೀಗ ಇಲ್ಲಿ ನಿಜವಾದಂತಾಗಿದೆ!