Thursday, 26th December 2024

Viral Video: ಗಾಳಿಪಟ ಹಿಡಿಯಲು ರಸ್ತೆಗೆ ಓಡಿ ಬಂದ ಬಾಲಕನಿಗೆ ಕಾರು ಡಿಕ್ಕಿ; 40 ಅಡಿ ದೂರಕ್ಕೆ ಚಿಮ್ಮಿದ ವಿಡಿಯೊ ಭಾರೀ ವೈರಲ್‌

ಸಿಕಾರ್: ಇದೊಂದು ವಿಡಿಯೋ ಸೋಷಿಯಲ್ ಮೀಡಿಯಾವನ್ನೇ (Social Media) ಬೆಚ್ಚಿ ಬೀಳಿಸಿದೆ. ಸ್ಪೀಡಾಗಿ ಸಾಗಿಬಂದ ಕಾರೊಂದು 7 ವರ್ಷದ ಬಾಲಕನಿಗೆ ಅಪ್ಪಳಿಸಿದ ಪರಿಣಾಮ ಆ ಬಾಲಕ 40 ಅಡಿ ದೂರಕ್ಕೆ ಹಾರಿ ಬಿದ್ದ ದೃಶ್ಯವೊಂದು ಸಮೀಪದ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು (CC Tv Footage) ಇದೀಗ ಈ ಎದೆ ಝಲ್ಲೆನಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಶಿವಂ (Shivam) ಎಂದು ಗುರುತಿಸಲಾಗಿದೆ.

ರಾಜಸ್ಥಾನದ (Rajasthan) ಸಿಕಾರ್ (Sikar) ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಲಭ್ಯ ಮಾಹಿತಿಯಂತೆ ಈ ಬಾಲಕ ಗಾಳಿಪಟವನ್ನು ಹಿಂಬಾಲಿಸಿಕೊಂಡು ರಸ್ತೆ ನಡುವಿಗೆ ಓಡಿ ಬಂದಿದ್ದು, ಈ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಆ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಆ ಬಾಲಕ 40 ರಿಂದ 50 ಅಡಿ ದೂರಕ್ಕೆ ಎಗರಿ ಬಿದ್ದಿದ್ದಾನೆ. ಇದೀಗ ಗಂಬೀರವಾಗಿ ಗಾಯಗೊಂಡಿರುವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿ.06ರ ಶುಕ್ರವಾರದಂದು ಈ ದುರ್ಘಟನೆ ಇಲ್ಲಿನ ಲೋಸಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿರುವಂತೆ, ಬಾಲಕ ಓಡಿಕೊಂಡು ಬಂದು ರಸ್ತೆ ದಾಟುತ್ತಿದ್ದಂತೆ ಅದೇ ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ತಕ್ಷಣವೇ ಬ್ರೇಕ್ ಹಾಕಿದ ಕಾರಣ ಮೇಲೆ ಎಗರಿ ರಸ್ತೆಗೆ ಬಿದ್ದ ಬಾಲಕನ ಮೇಲೆ ಕಾರು ಹರಿಯುವುದು ತಪ್ಪಿದೆ. ಮಾಹಿತಿಯಂತೆ, ಈ ಬಾಲಕ ಗಾಳಿಪಟವನ್ನು ಹಿಡಿಯಲೆಂದು ಓಡುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದವರು ಬಾಲಕನನ್ನು ಎಸ್.ಕೆ. ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಗಾಯಾಳು ಬಾಲಕನನ್ನು ಜೈಪುರದಲ್ಲಿರುವ ಎಸ್.ಎಂ.ಎಸ್. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಾಲಕನ ತಲೆ ಮತ್ತು ದೇಹದ ಇತರೇ ಭಾಗಗಳಿಗೆ ಪೆಟ್ಟು ಬಿದ್ದಿದ್ದು, ಈ ಭೀಕರ ಘಟನೆಯ ಬಳಿಕ ಬಾಲಕನಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದೂ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Raichur News: ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ನೀರುಪಾಲು

ಬಾಲಕ ಶಿವಂ ಡಿ.6ರಂದು ಶಾಲೆಯಿಂದ ಮರಳಿದ ಬಳಿಕ ತನ್ನ ಗೆಳೆಯರೊಂದಿಗೆ ಗಾಳಿಪಟ ಹಾರಿಸುತ್ತಿದ್ದ. ಬಾಲಕ ತನ್ನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಆ ಬಾಲಕ ರಸ್ತೆಯನ್ನು ಗಮನಿಸದೆ ಆಕಾಶ ನೋಡುತ್ತಾ ಓಡಿ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಇಲ್ಲಿನ ಲೋಸಾಲ್ ಪಟ್ಟಣದ ವಾರ್ಡ್ ಸಂಖ್ಯೆ 10ರ ನಿವಾಸಿಯಾಗಿರುವ ಬಾಲಕ ಶಿವಂ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ವರದಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.