Saturday, 27th April 2024

ಹಾಡುವ ಕಲೆಗಾರ ಕೊನೆಘಟ್ಟ, ಹೊಸ ಕಾವ್ಯ ಕಟ್ಟುವ ಗುಣ ಕಣ್ಮರೆಯತ್ತ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 110

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಜನಪದ ಮತ್ತು ಭಕ್ತಿ ಭಾವ’ ಕುರಿತು ಅರಿವಿನ ಉಪನ್ಯಾಸದಲ್ಲಿ ಜಾನಪದ ತಜ್ಞ ಡಾ. ಕುರುವ ಬಸವರಾಜ್ ಬೇಸರ

ಬೆಂಗಳೂರು: ಹಾಡುವ ಕಲೆಗಾರರು ಕೊನೆ ಘಟ್ಟದಲ್ಲಿದ್ದಾರೆ. ಹೊಸ ಕಾವ್ಯ ಕಟ್ಟುವ ಗುಣ ಕಡಿಮೆಯಾಗಿದೆ. ಆಧುನಿಕತೆಯಿಂದಾಗಿ ಜಾನಪದ
ಕಲೆ ಕಣ್ಮರೆಯಾಗುತ್ತಿದೆ ಎಂದು ಜಾನಪದ ತಜ್ಞ ಡಾ. ಕುರುವ ಬಸವರಾಜ್ ಬೇಸರ ವ್ಯಕ್ತಪಡಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ‘ಜನಪದ ಮತ್ತು ಭಕ್ತಿ ಭಾವ’ ಕುರಿತು ಅರಿವಿನ ಉಪನ್ಯಾಸದಲ್ಲಿ ಮಾತನಾಡಿದ ಅವರು, ಜಾನಪದ ಅತ್ಯಂತ ವಿಶಾಲವಾದ ವ್ಯಾಪ್ತಿ. ಭಕ್ತಿ, ಆಧ್ಯಾತ್ಮ, ದೇವರು ಮತ್ತು ಆರಾಧನೆಯ ರೂಪದಲ್ಲಿ ಕಾಣಬಹುದಾಗಿದೆ. ಪ್ರಕೃತಿ ನಿಜವಾದ ದೈವ. ಹಾಡಿನಲ್ಲಿ ಆಪ್ತವಾದ, ನಿಶ್ಚಲವಾದ ಭಾವವಿದೆ. ಅನೇಕ ದೇವರು ಗಳನ್ನು ಕುರಿತು ಆರಾಧಿಸಬಹುದು. ಜಾನಪದ ಕಲೆ ಉಳಿಸುವ ಬುಡಕಟ್ಟು ಜನರ ದೈವ ಅವರ ಕುಲದ ದೇವರು. ಅವರ ಘಟನೆ ಪುರಾಣ ರೂಪದಲ್ಲಿ ದೊರೆಯುತ್ತಿದೆ. ಆರಾಧಿಸುವ, ಪೂಜಿಸುವ ದೇವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ತಿಳಿಯುತ್ತದೆ ಎಂದು ಹೇಳಿ ದರು.

ಸಮುದಾಯಗಳಲ್ಲಿನ ಪರಂಪರೆ: ಯಾವುದಾದರೂ ಹಣ್ಣು ಮರದಲ್ಲಿ ಬಿಟ್ಟರೆ ಪೂರ್ವಕ್ಕೆ ಇರುವ ಹಣ್ಣು ಬೀಳಸಬಾರದು ಎಂಬುದು ಬುಡಕಟ್ಟು ಸಮುದಾಯಗಳಲ್ಲಿನ ಪರಂಪರೆ ಕಾಣಬಹುದು. ಇವರ ಆರಾಧನೆ ಹಾಗೂ ಭಕ್ತಿಭಾವ ಪ್ರಕೃತಿ ಸಹಜವಾದುದು. ಯಾವುದೇ ಕಾವ್ಯ ಕೊಡಲಾರದ ತತ್ವ ಕಟ್ಟಿಕೊಡುತ್ತಿವೆ ಬುಡಕಟ್ಟು ಮೂಲಗಳು. ಗಿರಜಪ್ಪ, ಯಲ್ಲಮ್ಮನ ಪದಗಳು ಹಾಗೂ ದೈವಗಳು ಕುರಿತು ಜಾನಪದ ಸಂಕೋಲೆಯ ಹಾಡು ಗಳಿವೆ. ಈ ನಾಡನ್ನು ಜಾನಪದದಿಂದ ನೋಡುವುದಾದರೆ ತುಂಬಾ ಪ್ರೀತಿ. ತನ್ನ ಅರಿವಿನ ಶಕ್ತಿಯಿಂದ ಮೌಖಿಕ ಹಾಗೂ ಲಿಖಿತ ರೂಪದಲ್ಲಿ ಕಾವ್ಯ ಘಟ್ಟ ನೋಡ ಬಹುದುದಾಗಿದೆ. ಮನೋ ನೆಲೆಯನ್ನು ನೋಡಬಹುದಾಗಿದೆ.

ಸಂಗೀತ ಕಾಲಘಟ್ಟದಲ್ಲಿ ಅಸಂಖ್ಯ ಕೂಟಗಳಿವೆ ಎಂದು ವಿವರಿಸಿದರು. ಮನುಷ್ಯ ಧಾನ್ಯವನ್ನು ಆಹಾರವಾಗಿ ಕಂಡುಕೊಂಡು ಧಾನ್ಯವನ್ನು ಕುಟ್ಟುವ ಮೂಲಕ ಪುಡಿಯನ್ನು ತೆಗೆಯುವ ಕಾಲಘಟ್ಟಕ್ಕೆ ತಲುಪಿದ್ದೇವೆ. ಕಲ್ಲು ಬಳಸುವ ಕಾಲಘಟ್ಟ ಮೀರಿದ್ದಾನೆ. ಕಲ್ಲು ಬೀಸುವ ಕಲೆ ಇಂದು ಕಣ್ಮರೆಯಾಗಿದೆ. ವಿಜ್ಞಾನ ಮತ್ತು ಸರಿ ತಪ್ಪುಗಳ ಭಾವನೆಗಳ ಆಲೋಚನಾ ಕ್ರಿಯೆಗೆ ಒಳಪಟ್ಟಿದ್ದೇವೆ. ನಾದ ವೈವಿದ್ಯದ ಮೂಲಕ ದೇವರು ಕುಣಿಯುವವನ ನಡುವಿನ ಸಂಬಂಧ ಏರ್ಪಡುತ್ತದೆ ಎಂದು ಹೇಳಿದರು.

ಒಳ್ಳೆಯ ಮನಸು ಇರಬೇಕು: ಭಕ್ತಿಯಲ್ಲಿ ಅಂತರವಿರಬಹುದು, ದೇವರು ಮತ್ತು ಮಾನವ ಎಂದು. ಆದರೆ, ಹಲವಾರು ತಲೆಮಾರುಗಳಿಂದ ರೂಪಿಸಿ ಕೊಂಡು ಬಂದಿರುವ ದೇವರ ಸ್ಮರಣೆಯನ್ನು ನಾವು ಭಕ್ತಿ ಪೂರ್ವಕವಾಗಿ ನಿರ್ವಹಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಧರ್ಮ. ಎಲ್ಲ
ಪ್ರಾಣಿಗಳನ್ನು ಗೌರವಯುತವಾಗಿ ಕಾಣುವುದು ನಮ್ಮ ಜನರ ಸಂಸ್ಕೃತಿ. ಅದರಲ್ಲು ಮುಖ್ಯವಾಗಿ ಜಾನಪದರು ದೇವರಲ್ಲಿ ಅನ್ಯತಾ ಭಾವವಿಲ್ಲದೆ ನಂಬಿಕೆಯಿಂದ ಪೂಜಿಸುತ್ತಾರೆ. ಅತ್ಯಂತ ಭಾವನಾತ್ಮಕವಾಗಿ ಸ್ಮರಣೆ ಮಾಡುತ್ತಾರೆ. ಕರ್ನಾಟಕದಲ್ಲಿ ದೈವಗಳು ಅಸಂಖ್ಯ ದೃಷ್ಟಿಕೋನಗಳನ್ನು ಹೊಂದಿವೆ. ಎಲ್ಲರನ್ನು ಪ್ರೀತಿಸುವ ಗುಣವನ್ನು ನಾವು ನಮ್ಮ ದೈವಗಳ ಮೂಲಕ ನೋಡಬಹುದು. ನಿದ್ರಾ ದೇವಿಯು ಯಾವ ಬೇಧವಿಲ್ಲದೆ ಎಲ್ಲರಿಗೂ ಸಮನಾಗಿ ಸುಖ ನಿದ್ರೆ ನೀಡುತ್ತಾಳೆ. ನಾವು ಒಳ್ಳೆಯ ಮನಸ್ಸನ್ನು ಹೊಂದಿದ್ದರೆ ಆ ದೇವರೇ ನಮ್ಮನ್ನು ಮೆಚ್ಚಿಕೊಳ್ಳುತ್ತಾನೆ. ಜಾನಪದರ ಬಗ್ಗೆ ಹೇಳುತ್ತಾ ಹೋದಷ್ಟು ಅಧ್ಯಾಯ ಮುಗಿಯದು. ಭಾಗವತರು ದೇವರ ಸ್ಮರಣೆ ಹಾಗೂ ಜಾನಪದಗಳನ್ನು ಹಾಡುತ್ತಿದ್ದರೆ, ದೇವರನ್ನು ಹಾಗೂ ಸಾಮಾನ್ಯರನ್ನು ಸರಳವಾಗಿ ಮೆಚ್ಚಿಸುವ ಶಕ್ತಿ ಅವರಲ್ಲಿದೆ.

ನಂಬಿಕೆಗೆ, ವಿಶ್ವಾಸಕ್ಕೆ ಬಿಟ್ಟಿದ್ದು

ಜಾನಪದರ ಹಾಡುಗಳು ಗ್ರಹಿಕೆಗೆ ನಿಲುಕದು ಹಾಗೂ ಅದನ್ನು ಎಷ್ಟು ಆನಂದವಾಗಿ ಅನುಭವಿಸುತ್ತೇವೋ ಅಷ್ಟು ಚೆಂದವಾಗಿ ಪದಗಳು ನಮ್ಮ
ಮನಸ್ಸಿನಲ್ಲಿ ನೆಲೆಯೂರುತ್ತವೆ. ಬೈಗುಳಗನ್ನು ಕೂಡ ಸುಂದರ ಪದಗಳಾಗಿ ಕಟ್ಟಿ ಹಾಡುವ ಪರಿ ನಮ್ಮ ಜಾನಪದರದು. ವಾದ್ಯವನ್ನು ನುಡಿಸುತ್ತಾ ಪದಗಳನ್ನು ಸುಮಧುರವಾಗಿ, ಸಮ್ಮೇಳನವಾಗಿ ಮನಸ್ಸು ಪೂರ್ವಕವಾಗಿ ಹಾಡುತ್ತಿದ್ದರೆ ದೇವರಿಗೆ ನಮ್ಮ ಬೇಡಿಕೆಗಳು ಬೇಗ ತಲುಪುತ್ತವೆ ಎಂಬ ನಂಬಿಕೆ ಹಾಗೂ ವಿಶ್ವಾಸ. ಎಲ್ಲಾ ದೈವಗಳು ಕೂಡ ಒಂದಲ್ಲ ಒಂದು ರೀತಿಯ ವಿಶಿಷ್ಟ ಶಕ್ತಿಯನ್ನು ಹೊಂದಿವೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಹಾಗೂ ದೇವರಲ್ಲಿ ಹೇಗೆ ಮೊರೆ ಇಡುತ್ತೇವೆ ಎಂಬುದು ನಮ್ಮ ನಮ್ಮ ನಂಬಿಕೆಗೆ, ವಿಶ್ವಾಸಕ್ಕೆ ಬಿಟ್ಟಿದ್ದು. ಜಾನಪದರ ಕಲೆ ಹಾಗೂ ಅವರು ಪದ ಕಟ್ಟುವ ಶೈಲಿಗೆ ನಾವು ಯಾವಾಗಲು ಬೆಲೆ ಕೊಡಬೇಕು ಎಂಬುದನ್ನು ನಾವು ಯಾವಗಲೂ ಅರಿತಿರಬೇಕು ಎಂದರು.

***

ಜಾನಪದ ಲೋಕದ ನಿರ್ಮಾಣ ಮಾಡಿರುವ ಕುರುವ ಬಸವರಾಜ್ ಅವರು ೬೦ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅನೇಕ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜನಪದ ಕುರಿತು ಉಪನ್ಯಾಸ ನೀಡಿದ್ದಾರೆ. ರಾಮನಗರ, ಮಾಗಡಿ, ಕನಕಪುರ ಭಾಗದ ಬೆಟ್ಟದ ತಪ್ಪಲಿನ ಇರುಳಿಗರು ಎಂಬ ಬುಡಕಟ್ಟು ಜನಾಂಗದ ಬಗ್ಗೆ ಆಳವಾದ ಆಧ್ಯಯನ ಮಾಡಿದ್ದಾರೆ. ಅನೇಕ ಕಥಾ ಸಂಕಲನ ರಚಿಸಿದ್ದಾರೆ.
– ಷಡಕ್ಷರಿ ಅಂಕಣಕಾರರು

Leave a Reply

Your email address will not be published. Required fields are marked *

error: Content is protected !!