Saturday, 23rd November 2024

ಜೇನು ಕುಟುಂಬ ಎಂದರೆ ಅದೊಂದು ವಿಸ್ಮಯ ಪ್ರಪಂಚ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 99

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಜೇನು ತಜ್ಞ ಕೆ.ಟಿ. ವಿಜಯ ಕುಮಾರ್ ಅವರ ಮಧುರ ಮಾತುಗಳು

ಬೆಂಗಳೂರು: ಜೇನು ಕುಟುಂಬದ ಜೀವನ ಶೈಲಿ, ವಿಧಾನ, ಕುಟುಂಬದ ರಕ್ಷಣೆಗೆ ಮಾಡಿಕೊಂಡ ವ್ಯವಸ್ಥೆ, ಪ್ರತಿ ಸದಸ್ಯರಿಗೂ ಹಂಚಿದ ಕೆಲಸ, ಗೂಡು ಸ್ವಚ್ಛ ಗೊಳಿಸುವಿಕೆ, ಆಹಾರ ಸಂಗ್ರಹ, ಮರಿ ಮಕ್ಕಳ ಪೋಷಣೆ ಹೀಗೆ ಪ್ರತಿ ಜೇನುನೊಣಗಳು ಕೂಡ ಚಟುವಟಿಕೆಯಿಂದ ಇರುವಿಕೆ ಕುರಿತು ವಿಸ್ಮಯ ಸಂಗತಿಗಳು ಕೇಳಿ ಬಂದಿದ್ದು ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ…. ಜೇನು ಸವಿಯುವುದು ಮಧುರ.

ಜೇನು ಹುಳ ದಿಂದ ಕಡಿಸಿಕೊಳ್ಳುವುದು ಕಟು ಮಧುರ. ಜೇನು ಸವಿಯದ ಮನುಷ್ಯನಿಲ್ಲ. ನಮ್ಮ ಆಯುರ್ವೇದ ಪಂಡಿತರಿಗಂತೂ ಮೂಲಿಕೆಗಳ ಜತೆ ತೇಯ್ದು ಕೊಡಲು ಜೇನು ಬೇಕೇಬೇಕು. ಜೇನುನೋಣ ನೋಡಲು ಸಣ್ಣ ಜೀವಿ, ಆದರೆ ಅದು ಸಂಘಜೀವಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಜೇನು ವಿಜ್ಞಾನಿ ಡಾ.ಕೆ.ಟಿ. ವಿಜಯಕುಮಾರ ಅವರು ತಿಳಿಸಿದರು.

ನಾಲ್ಕು ವರ್ಷಗಳ ಕಾಲ ಜೇನುಹುಳುಗಳ ಅಸ್ತಿತ್ವ ಈ ಜಗತ್ತಿನಲ್ಲಿ ಇಲ್ಲವೆಂದರೆ ಮನುಷ್ಯ ಅಂತ್ಯನಾಗುತ್ತಾ ನೆಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದಾರೆ. ಪ್ರಪಂಚದಲ್ಲಿ 3.52 ಲಕ್ಷ ಸಸ್ಯ ಪ್ರಭೇದಗಳಿವೆ. 3.6 ಲಕ್ಷ ಸಸ್ಯ ಪ್ರಭೇದ ಫಲ ಬಿಡಲು ಪರಾಗಸ್ಪರ್ಶಕ್ಕೆ ಈ ಕೀಟಗಳ ಮೇಲೆ ಅವಲಂಬಿತವಾಗಿದೆ. ಜೇನುನೊಣ ಬೇರೆ ಕೀಟಗಳಿಗಿಂತ ವಿಭಿನ್ನ. ಹೂಗಳ ಮಕರಂದ ಹೀರುವ ಕೆಲಸ ಮಾಡುತ್ತವೆ. ಇವು ರೋಮಗಳಿಂದ ಮಕರಂದ ಹೊತ್ತೊಯ್ಯುತ್ತದೆ. ಈ ನೊಣಕ್ಕೆ ಮೂರು ಜೋಡಿಯ ಕಾಲುಗಳಿವೆ. ಕೊನೆಯ ಕಾಲುಗಳಲ್ಲಿ ಪರಾಗ ಬುಟ್ಟಿ ಇರುತ್ತದೆ. ಬೇರೆ ಕೀಟಗಳಲ್ಲಿ ಇರಲ್ಲ ಎಂದು ಹೇಳಿದರು.

ಫಲೋತ್ಪಾದಕ ಮೊಟ್ಟೆಗಳಿಂದ ರಾಣಿ ಜೇನುನೊಣ ಅಥವಾ ಕೆಲಸಗಾರ ನೊಣಗಳು ಉತ್ಪತ್ತಿ ಯಾಗುತ್ತವೆ. ಫಲವತ್ತವಲ್ಲದ ಮೊಟ್ಟೆಗಳಿಂದ ಗಂಡುಜೇನು ನೊಣಗಳು ಉತ್ಪತ್ತಿಯಾಗುತ್ತವೆ. ಕುಟುಂಬಕ್ಕೆ ಅನುಗುಣವಾಗಿ ರಾಣಿ ನೊಣವು ಎರಡು ರೀತಿಯ ಮೊಟ್ಟೆಗಳನ್ನು ಇಡುತ್ತದೆ. ನಿತ್ಯ ಇಡುವ ಮೊಟ್ಟೆಗಳ ಸಂಖ್ಯೆಯು ಗೂಡಿನ ಸುತ್ತಮುತ್ತಲಿನಲ್ಲಿ ದೊರಕುವ ಜೇನುನೊಣಗಳ ಆಹಾರವನ್ನು ಅವಲಂಬಿಸಿರುತ್ತದೆ. ಮಕರಂದ ಮತ್ತು ಪರಾಗ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದರೆ ರಾಣಿಜೇನು ನೊಣವು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಯನ್ನು ಇಡುವುದರಿಂದ ಮರಿ ಹುಳುಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.

ಆಹಾರದ ಕೊರತೆ ಇರುವಂತ ಕಾಲದಲ್ಲಿ ಅತಿ ಕಡಿಮೆ ಮರಿಹುಳುಗಳನ್ನು ಸಾಕುತ್ತವೆ ಅಥವಾ ಮರಿ ಬೆಳೆಸುವ ಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುತ್ತವೆ. ಆದ್ದರಿಂದ ಲಾಭದಾ ಯಕ ಜೇನು ಸಾಕಾಣಿಕೆಗೆ ಪ್ರತಿ ವರ್ಷ ಹಳೆಯ ರಾಣಿಯನ್ನು ತೆಗೆದು ಹೊಸ ರಾಣಿ ನೊಣವನ್ನು ಒದಗಿಸುತ್ತಿರಬೇಕು ಎಂದರು. ಗಂಡುಜೇನು ನೊಣ ಇಡೀ ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ ಇರಲ್ಲ. ಯಾವುದಾದರೂ ಹೊಸ ಕುಟುಂಬದಲ್ಲಿ ಹೊಸ ಕನ್ಯೆ ರಾಣಿ ಜೇನುನೊಣ ಜತೆ ಮಿಲನ ಮಾಡುತ್ತದೆ. ಎರಡರಿಂದ ಮೂರು ತಿಂಗಳು ಬದುಕಿರುತ್ತದೆ. ಕೆಲಸಗಾರಜೇನು ನೊಣವು ಗಂಡುಜೇನು ನೊಣ ಕುಟುಂಬದಲ್ಲಿ 100-150 ಇರುತ್ತದೆ.
ಇವನ್ನು ಬಂಜೆ ಹುಳುಗಳು ಎನ್ನುತ್ತೇವೆ. ಇದರ ಜೀವಿತಾವಧಿ ಒಂದೂವರೆಯಿಂದ ಎರಡು ತಿಂಗಳು ಮಾತ್ರ ಎಂದು ವಿವರಿಸಿದರು.

ಐದು ಜಾತಿಯ ಜೇನು ನೊಣಗಳ ಮಹತ್ವ
ಹೆಜ್ಜೇನು: ಬೆಳದಿಂಗಳಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಹೂವಿನಲ್ಲಿ ಅಲ್ಲಿನ ಮಕರಂದ, ಪರಾಗ ಮುಗಿಯುವ ತನಕ ಬೇರೆಲ್ಲೂ ಹೋಗಲ್ಲ. ಕುಟುಂಬದ ಬೆಳವಣಿಗೆಗೆ ಮಕರಂದ ತರುತ್ತದೆ. ಇದು ಕೆಲವು ದಿನಗಳ ಕಾಲ ಒಂದು ಕಡೆ ಇದ್ದು, ಮತ್ತೊಂದು ಕಡೆ ಹೋಗುತ್ತದೆ. ಒಂದು ಗೂಡು ಕಟ್ಟಿದ್ದರೆ ಅದರ ಸುತ್ತಮುತ್ತ ಸಾಕಷ್ಟು ಇರುತ್ತವೆ. ಹೆಜ್ಜೇನು ಒಂದೇ ಒಂದು ಪೂಮ್ (ರಾಡೆ) ಕಟ್ಟುತ್ತದೆ. ಜೇನುನೊಣ ಒಂದು ಕುಟುಂಬದಲ್ಲಿ 25 ಸಾವಿರಕ್ಕೂ ಹೆಚ್ಚು ಕಾಣಬ ಹುದು. ಐದು ಕಿ.ಮೀ ಸುತ್ತಳತೆಯ ಸಸಿಗಳ ಮಕರಂದ ಹೀರುತ್ತದೆ. ಇದರ ಜೇನಿನಲ್ಲಿ ಸಾಕಷ್ಟು ಔಷಧಿ ಗುಣಗಳು ಕಾಣಬಹುದು. ಈ ನೊಣ ತುಂಬಾ ಸಿಟ್ಟಿನ ಸ್ವಭಾವದ್ದು. ಇದು ಭಯಂಕರ ಜೀವಿ. ಉತ್ತಮ ಪರಾಗಸ್ಪರ್ಶ ಕೀಟ. ಇದರಿಂದ ಒಂದು ವರ್ಷಕ್ಕೆ 20-25 ಕೆ.ಜಿ. ತುಪ್ಪ ಸಿಗುತ್ತದೆ.

ಕೋಲು ಜೇನು: ಇದು ಸಣ್ಣ ಬೇಲಿಗಳಲ್ಲಿ ಕಾಣಬಹುದು. ಒಂದು ಜಾಗದಲ್ಲಿ ಮೂರು ತಿಂಗಳು ಇರುತ್ತದೆ. ಇದನ್ನು ಸಾಕಲು ಸಾಧ್ಯವಿಲ್ಲ. ಇದು ತುಂಬಾ ಸಿಹಿ ಜೇನು ಒಂದು ಕುಟುಂಬದಲ್ಲಿ 300-500 ಗ್ರಾಂ ತುಪ್ಪ ವರ್ಷಕ್ಕೆ ಸಿಗುತ್ತದೆ.

ತುಡುವೆ ಜೇನು: ಇದು ನಮ್ಮ ಕಣ್ಣಿಗೆ ತಕ್ಷಣ ಕಾಣಲ್ಲ. ಕತ್ತಲ ಪ್ರದೇಶದಲ್ಲಿ ಕುಟುಂಬ ಇರುತ್ತದೆ. ಇದರ 6-10 ರಾಡೆಗಳನ್ನು ಕಟ್ಟುತ್ತದೆ. ಹೆಜ್ಜೇನು, ಕೋಲು ಜೇನಿಗಿಂತ ವಿಭಿನ್ನ. ಇದನ್ನು ಸಾಕಾಣಿಕೆ ಮಾಡಬಹುದು. 6-10 ಕೆ.ಜಿ. ತುಪ್ಪ ಇದರಲ್ಲಿ ವಾರ್ಷಿಕವಾಗಿ ಸಿಗುತ್ತದೆ. ಇವು ಅಲೆಮಾರಿ ಸಂತತಿಯಲ್ಲ. ಇದು ಕಚ್ಚಿ ದರೆ ಯಾವುದೇ ತೊಂದರೆಯಾಗುವುದಿಲ್ಲ. ಯುರೋಪಿಯನ್ (ಇಟಾಲಿಯನ) ಜೇನು: ಇದನ್ನು ಇಟಲಿಯಾದಿಂದ ಪಂಜಾಬ್‌ಗೆ ಆಮದು ಮಾಡಿಕೊಳ್ಳಲಾದ ಜೇನು. ಇದು ನಮ್ಮ ಹವಾಮಾನಕ್ಕೆ ಹೊಂದಿಕೊಂಡಿದೆ. 20-30 ಕೆ.ಜಿ. ಜೇನು ಒಂದು ಗೂಡಿನಲ್ಲಿ ಸಿಗುತ್ತದೆ. ಉತ್ತರ ಭಾರತದಲ್ಲಿ ಈ ಜೇನು ಹೆಚ್ಚಾಗಿ ಸಿಗುತ್ತದೆ.

ನಸರು ಜೇನು: ಕಾಳುಗಳ ಆಕಾರದಲ್ಲಿ ಗೂಡು ಕಟ್ಟುತ್ತದೆ. ಇದು ಚುಚ್ಚುವ ಜೇನು. ಇದರ ಜೇನುತುಪ್ಪದಲ್ಲಿ ಆಂಟಿ ಕ್ಯಾನ್ಸರ‍್ ಔಷಧಿ ಗುಣವಿದೆ. ಈ ತುಪ್ಪ ಕೆ.ಜಿ.ಗೆ 2-3 ಸಾವಿರ ರು. ಇದೆ. ಕೇರಳದಲ್ಲಿ ಈ ತುಪ್ಪ ಹೆಚ್ಚು ಉತ್ಪಾದನೆ ಮಾಡಲಾಗುತ್ತಿದೆ.

ರಾಣಿಜೇನು ನೊಣದ ಜೀವನಚಕ್ರ ಬಲ್ಲಿರಾ?
ರಾಣಿಜೇನು ನೊಣ ತಾಯಿ ಇದ್ದಂತೆ. ಜೇನಿನ ಕುಟುಂಬಕ್ಕೆ ಒಂದೇ ಒಂದು ಇರುತ್ತದೆ. ಮೊಟ್ಟೆ ಇಡುವ ಕೆಲಸ ಮಾಡುತ್ತದೆ. ಬೇರೆ ರಾಣಿನೊಣ ಬರಲು ಅವಕಾಶ ಮಾಡಿಕೊಡಲ್ಲ. ಒಂದು ದಿನಕ್ಕೆ 200-2000 ಸಾವಿರ ಮೊಟ್ಟೆ ಇರುತ್ತದೆ. ಸುಗ್ಗಿ ಕಾಲದಲ್ಲಿ ಹೆಚ್ಚು ಆಹಾರ ಸಿಕ್ಕಾಗ ಮೊಟ್ಟೆಗಳು ಹೆಚ್ಚಾಗಿಡುತ್ತದೆ. ಕೆಲಸಗಾರರ ಹುಳುಗಳಿಗೆ ಆಹಾರ ತಿನ್ನಿಸುತ್ತದೆ. ಕಣಗಳನ್ನು ಸ್ವಚ್ಚ ಮಾಡುತ್ತದೆ ನಂತರ ಮೊಟ್ಟೆ ಇಡುತ್ತದೆ. ಕೆಲಸಗಾರ ನೊಣಗಳು ರಾಣಿನೊಣ ಹೊಟ್ಟೆ ಸವರುತ್ತದೆ. ಈ ಹುಳ ಎರಡು ರೀತಿಯ ಮೊಟ್ಟೆಗಳನ್ನು ಇಡುತ್ತದೆ. ಮರಿಹುಳದಲ್ಲಿ ಲಾರ್ವಾ ಹಂತದಲ್ಲಿ ಕೆಲಸಗಾರ ಹುಳ ರಾಜಶಾಹಿ ರಸ ಕುಡಿಸುತ್ತದೆ. ರಾಣಿಜೇನು ನೊಣ ಮೂರರಿಂದ ನಾಲ್ಕು ವರ್ಷ ಬದುಕುತ್ತದೆ. ರಾಣಿಜೇನು ತನ್ನ ಇಡೀ ಜೀವನಕ್ಕೆ ಫಲವತ್ತಾಗಿರುತ್ತದೆಯಾದರೂ ವೃದ್ದಾಪ್ಯದಲ್ಲಿ ಉತ್ಪಾದಕತೆ ಕುಸಿಯುತ್ತದೆ. ಈ ಸಂದರ್ಭಗಳಲ್ಲಿ ಅಥವಾ ರಾಣಿ ಜೇನುನೊಣ ಸತ್ತಾಗ ಕೆಲಸಗಾರ ಜೇನುನೊಣಗಳು ಹೊಸ ರಾಣಿಯನ್ನು ತಯಾರಿಸುತ್ತವೆ ಎಂದು ಜೇನು ವಿಜ್ಞಾನಿ ವಿಜಯ ಕುಮಾರ ಅವರು ತಿಳಿಸಿದರು.

***

ನಮ್ಮ ಅಸ್ತಿತ್ವದ ಕೇಂದ್ರಬಿಂದು ಜೇನುನೊಣ. ಜೇನಿನ ವಿಸ್ಮಯ ಜಗತ್ತು ಕುರಿತು ವಿಜ್ಞಾನಿ ಡಾ.ಕೆ.ಟಿ. ವಿಜಯಕುಮಾರ ವಿವರಿಸಿದ್ದಾರೆ. ಅವರು ನೂರಾರು
ಜೇನಿನ ಮಾದರಿ ಸಂಗ್ರಹಿಸಿ ಔಷಧಿಯ ಗುಣಗಳನ್ನು ವಿಶ್ಲೇಷಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಕುರಿತು ಜೇನುನೊಣದ ಪಾತ್ರ ಅಧ್ಯಯನದಲ್ಲಿ ತೊಡಗಿದ್ದಾರೆ. 100ಕ್ಕೂ ಹೆಚ್ಚು ತರಬೇತಿ, ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ.
– ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು