Sunday, 15th December 2024

ಮಹಾಲಕ್ಷ್ಮಿಯನ್ನು ಮನೆಗೆ ಕರೆಯೋದು ಹೇಗೆ ?

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 63

ವಿಶ್ವವಾಣಿ ಕ್ಲಬ್‌ ಹೌಸ್‌ನಲ್ಲಿ ಪೂಜಾ ವಿಧಾನ ಕುರಿತು ಮಾಹಿತಿ 

ಭಕ್ತಿ, ಶ್ರದ್ಧೆ, ಶುಚಿತ್ವದಿಂದ ಪೂಜಿಸಿದರೆ ಪೂಜಾಫಲ

ಬೆಂಗಳೂರು: ವರಮಹಾಲಕ್ಷ್ಮಿಗೆ ಇಷ್ಟವಾದ ಅಲಂಕಾರದಿಂದ ಪೂಜಿಸಿ, ಶ್ರದ್ಧೆ, ಭಕ್ತಿಯಿಂದ ಅರ್ಚನೆಗೈದರೆ ಆಕೆ ಪ್ರಸನ್ನವಾಗುವ ಮೂಲಕ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಹೀಗಾಗಿ, ಲಕ್ಷ್ಮಿಯ ಅರ್ಚನೆಯಲ್ಲಿ ಅನುಸರಿಸಬೇಕಾದ ಕ್ರಮಗಳೇನು ಎಂಬ ಬಗ್ಗೆ ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಬೆಳಕು ಚೆಲ್ಲಿದ್ದಾರೆ ಅಧ್ಯಾತ್ಮಿಕ ಚಿಂತಕರು.

ಖ್ಯಾತ ಜ್ಯೋತಿಷಿ, ಆಧ್ಯಾತ್ಮಿಕ ಚಿಂತಕ ಭಾನು ಪ್ರಕಾಶ್ ಶರ್ಮ ಅವರು ಮಾತನಾಡಿ, ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಮನೆಯನ್ನು ಸಾರಿಸಿ, ಗುಡಿಸಿ, ಶುಭ್ರಗೊಳಿಸಿ, ಮಾವಿನ ತೋರಣಗಳಿಂದ ಸಿಂಗರಿಸಬೇಕು. ನಂತರ ಐದು ಬಗೆಯ ಹಣ್ಣುಗಳನ್ನು, ಹೂವುಗಳನ್ನು ಬಳಸಿ ಪೂಜಿಸಬಹುದು. ಇದಕ್ಕೆ ಲಭ್ಯವಿರುವ ಸಲಕರಣೆ ಗಳನ್ನು ಬಳಸಿಕೊಂಡು ರಾತ್ರಿಯೇ ಎಲ್ಲ ಸಿದ್ಧ ಮಾಡಿಕೊಂಡು, ಬೆಳಗ್ಗೆ ಎದ್ದು ಶುಚಿಯಾಗಿ ಬೆಳ್ಳಿಯ ಅಥವಾ ತಾಮ್ರದ ಚೊಂಬನ್ನು ತೊಳೆದು, ಅದಕ್ಕೆ ಕುಂಕುಮ, ಚಂದನವನ್ನು ಹಚ್ಚಿ ನಮ್ಮಲ್ಲಿರುವ ನಾಣ್ಯಗಳನ್ನು ಅದರಲ್ಲಿ ಹಾಕಿ, ಶುಷ್ಕ ಫಲಗಳನ್ನಿಟ್ಟು, ಸುಂದರವಾದ ಹೊಸ ಸೀರೆ ಉಡಿಸಿ, ದೀಪದ ಕಂಬವನ್ನು ಹಚ್ಚಿ, ಪ್ರಾಥಃಕಾಲದಲ್ಲಿ ವ್ರತವನ್ನು ಆಚರಣೆ ಮಾಡಬೇಕು.

ಪಾನಕ, ಸಿಹಿಯನ್ನು ಮಾಡಿ ಇಟ್ಟು ಮಹಾಮಂಗಳಾರತಿ ಮಾಡಬೇಕು. ನಂತರ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಸಂಪ್ರದಾಯ ಆಚರಿಸಬೇಕು ಎಂದು ತಿಳಿಸಿದರು. ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಹಬ್ಬ. ಶ್ರಾವಣ ಮಾಸ ಹಬ್ಬಗಳ ಸಾಲು ಆರಂಭದ ತಿಂಗಳು. 12 ವರ್ಷಗಳ ಕಾಲ ವ್ರತ ಗಳನ್ನು ಮಾಡಬೇಕು. ಸರಸ್ವತಿಗೆ ಜಿಹ್ವ, ಸಕ್ಕರೆ ಇಷ್ಟ, ಲಕ್ಷ್ಮಿಗೆ ಲಡ್ಡು ಇಷ್ಟ. ಹೀಗಾಗಿಯೇ ತಿರುಪತಿಯಲ್ಲಿ ಲಡ್ಡು ಮಾಡುತ್ತಾರೆ. ಕಡಲೆಕಾಳಿಂದ ಮಾಡಿದ ಭಕ್ಷ್ಯ, ಬೆಲ್ಲದ ಅನ್ನ, ಹೋಳಿಗೆಗಳನ್ನು ವಿಶೇಷವಾಗಿ ಮಾಡಬಹುದು.

ನಮ್ಮನ್ನು ಚೆನ್ನಾಗಿಡು ಎಂದು ಕೇಳುವ ಬದಲು ಜಗತ್ತಿನ ಎಲ್ಲರನ್ನೂ ಹರಸಲಿ ಎಂದು ಮಾಡುವ ಪೂಜೆ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಗುರೂಜಿ ಅವರು
ತಿಳಿಸಿದರು.

ಹಬ್ಬಹರಿದಿನಗಳ ಆಚರಣೆಯಿಂದ ಸಂತಸ, ನೆಮ್ಮದಿ

ಸನಾತನ ಧರ್ಮದಲ್ಲಿ ನಮ್ಮ ಪೂರ್ವಜನರು ನಮಗೆ ತಿಳಿಸಿಕೊಟ್ಟಿರುವಂತೆ ನಂಬಿಕೆ, ಭಕ್ತಿಯಿಂದ ವ್ರತ, ಪೂಜೆಯನ್ನು ಮಾಡಿದರೆ ದೇವರ ಅನುಗ್ರಹ ಸಾಧ್ಯ.
ಹಬ್ಬ ಹರಿದಿನಗಳ ಆಚರಣೆಯಿಂದಲೇ ನಾವು ಸಂತಸವಾಗಿರಲು ಸಾಧ್ಯ. ವ್ರತ- ಕಥೆಗಳಿಂದ ಅಗತ್ಯವಾದ ಶಕ್ತಿ ದೊರೆಯಲು ಸಾಧ್ಯ ಎಂದು ರಾಮನಾರಾಯಣ ಜೋಯಿಸ ತಿಳಿಸಿದರು.

ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಸನಾತನ ಧರ್ಮ ಹಬ್ಬ ಹರಿದಿನಗಳೊಂದಿಗೆ ಆನಂದವವಾಗಿ ಬದುಕಲು ಋಷಿ ಮುನಿಗಳು ಕಲಿಸಿಕೊಟ್ಡಿದ್ದಾರೆ. ನಮ್ಮ ದೇಶದಲ್ಲಿ ಯಾಕೆ ಹಬ್ಬಗಳು ಎಂದು ಅರ್ಥ ಮಾಡಿಕೊಳ್ಳಬೇಕ್ರ? ನಮ್ಮ ಭಾರತ ದೇಶ ದಕ್ಷಿಣ ಧ್ರುವದಲ್ಲಿದೆ. ಇಲ್ಲಿರುವವರ ಗಮನ ಆಧ್ಯಾತ್ಮ ಚಿಂತನೆ. ಉತ್ತರ ಧ್ರುವದ ಕಡೆ ಇರುವವರು ಹೊಸ ಸಂಸ್ಕೃತಿ ಅಳವಡಿಸಿಕೊಂಡಿರುತ್ತಾರೆ.

ನಮ್ಮ ಪೂರ್ವಜನರಾದ ಋಷಿಗಳು, ಮುನಿಗಳು ಈ ವ್ರತ, ಪೂಜೆ ಪುನಸ್ಕಾರಗಳನ್ನು ನಮಗಾಗಿ ಬಿಟ್ಟು ಹೋದರು. ಇದರಿಂದ ಎಲ್ಲರಿಗೂ ಒಳ್ಳೆಯಾದಾಗಲಿದೆ. ವರಮಹಾಲಕ್ಷ್ಮೀ ವ್ರತ, ಚೌತಿ, ನಮ್ಮಲ್ಲಿ ಆಚರಣೆಗಳನ್ನು ಮಾಡುತ್ತೇವೆ ಏಕೆಂದರೆ ದಕ್ಷಿಣಾಯದ ಸಂದರ್ಭದಲ್ಲಿ ಸೂರ್ಯನಿಂದ ದೊರೆಯುವ ಶಕ್ತಿಯು ಕಡಿಮೆ ಇರುತ್ತದೆ. ಈ ವ್ರತಾಚರಣೆಯಿಂದ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ಜೀವರೂಪದಲ್ಲಿ, ಪ್ರಾಣರೂಪದಲ್ಲಿ, ಜನ್ಮರೂಪದಲ್ಲಿ ಸಂಯೋಗ ಆಗಿದ್ದು, ಗಟ್ಟಿಮುಟ್ಟಾಗಿರಲು ಈ ವ್ರತ-ಕಥಾಚರಣೆಗಳು ಅಗತ್ಯವಾಗಿದೆ. ಹೇಗೆ ರೈಲಿನ ಹಳಿ ಗಳು ಸಮಾನಾಂತರ ರೇಖೆಯಲ್ಲಿರಬೇಕೋ ಹಾಗೇ ನಮ್ಮ ದೇಹದ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವಗಳು ಸಮಾನಾಗಿರಬೇಕೆಂದು ವ್ರತಪೂಜೆಯನ್ನು
ಮಾಡಬೇಕಾಗಿರುತ್ತದೆ. ಇನ್ನು ’ಧಿಯೋ ಯೋನಃ ಪ್ರಚೋದಯಾತ್’ ಅನ್ನುವಂತೆ ನಮ್ಮಲ್ಲಿರುವ 72 ಸಾವಿರ ನಾಡಿಗಳಲ್ಲಿ 36 ಸಾವಿರ ನಾಡಿಗಳು ಪ್ರಕೃತಿ ನಾಡಿಯಾಗಿದ್ದು, 36 ಸಾವಿರ ನಾಡಿಗಳು ಪುರುಷ ನಾಡಿಗಳಾಗಿರುತ್ತವೆ.

ಆಯಾಯ ನಾಡಿಗಳಿಗೆ ಅಕ್ಷರ ವ್ಯಂಜನಗಳಿಂದ ಹೆಸರು ನೀಡಲಾಗುತ್ತದೆ. ಇದನ್ನು ಟ್ಯೂನ್ ಮಾಡಬೇಕಾಗುತ್ತದೆ. ಓಂಕಾರದಿಂದ ಪ್ರಪಂಚ ಸೃಷ್ಟಿಯಾಗಿದೆ. ಇದನ್ನೇ ಬಿಗ್ ಬ್ಯಾಂಗ್ ಥಿಯರಿ ಎಂದಿದ್ದಾರೆ. ಇಡೀ ಪ್ರಪಂಚ ಸೃಷ್ಟಿಯಾಗಿರುವುದು ಓಂಕಾರದಿಂದಾಗಿದೆ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯಕರವಾಗಿರಲು ವ್ರತಾಚರಣೆಗಳು ಅಗತ್ಯ ಎಂದು ತಿಳಿಸಿದರು.

ದೀಪಾವಳಿಯಿಂದ ಬೆಳಗು
ದೀಪಾವಳಿಯ ಸಂದರ್ಭದಲ್ಲಿ ದೀಪಗಳನ್ನು ಬೆಳಗುತ್ತೇವೆ. ದೀಪಾವಳಿ ಜ್ಯೋತಿಯ ಸಂಕೇತ. ಸೂರ್ಯನ ಶಕ್ತಿ ದೊರೆಯುವುದು ದೀಪಾವಳಿಯ ಸಂದರ್ಭದಲ್ಲಿ. ಇದನ್ನು ಬಹಳ ಹಿಂದೆಯೇ ನಮ್ಮ ಋಷಿ ಮುನಿಗಳು ಕಂಡುಕೊಂಡಿದ್ದಾರೆ. ಮನುಷ್ಯನಿಗೆ ಬುದ್ದಿ ಇದ್ದರೆ ಸಾಲದು, ಹಣ ಇರಬೇಕು. ವರಮಹಾಲಕ್ಷ್ಮಿ ಹಬ್ಬ ಮಾಡಿ ದಾಗ ಅಷ್ಟಲಕ್ಷ್ಮಿ ಒಲಿಯುತ್ತಾಳೆ. ವರಮಹಾಲಕ್ಷ್ಮೀಯನ್ನು ಯಾವ ಯಾವುದೋ ಸಂದರ್ಭದಲ್ಲಿ ಮಾಡುವಂತಹದಲ್ಲ. ಅದಕ್ಕೆ ಅದರದ್ದೇ ಆದ ದಿನ, ತಿಥಿಯನ್ನು ಹಿಂದಿನ ಕಾಲದಲ್ಲಿಯೇ ತಿಳಿಸಿಕೊಟ್ಟಿದ್ದಾರೆ ಎಂದು ರಾಮನಾರಾಯಣ ಜೋಯೀಸ್ ತಿಳಿಸಿದರು.